ಲೋಕಸಭೆಯಲ್ಲಿ ಹೊಸ ಬ್ಯಾಂಕಿಂಗ್ ಮಸೂದೆಗೆ 'ಕೇಂದ್ರ' ಅನುಮೋದನೆ
- ಹಳೇ ಬ್ಯಾಂಕಿಂಗ್ ಕಾನೂನುಗಳ ರದ್ದತಿ
- ಡಿಜಿಟಲ್ ಪುರಾವೆಗಳಿಗೆ ಸಂಪೂರ್ಣ ಕಾನೂನುಬದ್ಧತೆ
- ಬ್ಯಾಂಕ್ ಅಧಿಕಾರಿಗಳಿಗೆ ಬಿಗ್ ರಿಲೀಫ್
Books Evidence Bill 2026: ದೇಶೀಯ ಹಣಕಾಸು ಮತ್ತು ಬ್ಯಾಂಕಿಂಗ್ ವಲಯವನ್ನು ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳುವ ಗುರಿಯೊಂದಿಗೆ ಕೇಂದ್ರ ಸರ್ಕಾರವು ನಿರ್ಣಾಯಕ ಶಾಸಕಾಂಗ ಸುಧಾರಣೆಯನ್ನು ಪ್ರಾರಂಭಿಸಿದೆ. ಲೋಕಸಭೆಯು 'ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಬಿಲ್ 2026' ಅನ್ನು ಕಡೆಗೂ ಲೋಕಸಭೆಯಲ್ಲಿ ಅಂಗೀಕರಿಸಿದೆ.
ಬ್ರಿಟಿಷ್ ಆಳ್ವಿಕೆಯ 135 ವರ್ಷಗಳಷ್ಟು ಹಳೆಯದಾದ 'ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಆಕ್ಟ್ - 1891' ಅನ್ನು ಬದಲಿಸಿ ಆಧುನಿಕ ತಾಂತ್ರಿಕ ಬೆಳವಣಿಗೆಗಳನ್ನು ಪ್ರತಿಬಿಂಬಿಸುವ ಮಸೂದೆ ಇದಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪರಿಚಯಿಸಿದ ಈ ಹೊಸ ಕಾನೂನು ಇಂದಿನ ಡಿಜಿಟಲ್ ಯುಗದಲ್ಲಿ ನಡೆಯುತ್ತಿರುವ ಹಣಕಾಸಿನ ವಹಿವಾಟುಗಳಿಗೆ ಸರಿಯಾದ ಕಾನೂನುಬದ್ಧತೆಯನ್ನು ಒದಗಿಸುತ್ತದೆ ಮತ್ತು ಕಾನೂನು ಸಾಕ್ಷ್ಯಗಳನ್ನು ಪ್ರಸ್ತುತಪಡಿಸುವ ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸುತ್ತದೆ.
ಡಿಜಿಟಲ್ ದಾಖಲೆಗಳು, ಸಹಿಗಳ ಕಾನೂನುಬದ್ಧತೆ
ಹಳೆಯ ಕಾನೂನು ಭೌತಿಕ ಕಾಗದದ ಲೆಡ್ಜರ್‌ಗಳು ಮತ್ತು ಕೈಬರಹದ ದಾಖಲೆಗಳಿಗೆ ಸೀಮಿತವಾಗಿದ್ದರೂ, ಹೊಸ ಕಾನೂನು ಯುಪಿಐ, ನೆಟ್ ಬ್ಯಾಂಕಿಂಗ್, ಡಿಜಿಟಲ್ ಡೇಟಾ, ಕ್ಲೌಡ್ ಸ್ಟೋರೇಜ್ ಮತ್ತು ವಿಪತ್ತು ಚೇತರಿಕೆ ಸರ್ವರ್‌ಗಳಲ್ಲಿನ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಗಳಲ್ಲಿ ಪ್ರಾಥಮಿಕ ಪುರಾವೆಯಾಗಿ ಗುರುತಿಸಲು ಬದಲಾವಣೆಗಳನ್ನು ತಂದಿದೆ. ಇದರೊಟ್ಟಿಗೆ, 'ಐಟಿ ಆ್ಯಕ್ಟ್-2000' ಅಡಿಯಲ್ಲಿ ಪ್ರಮಾಣೀಕರಿಸಲಾದ ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ಸಹಿಗಳಿಗೆ ಸಂಪೂರ್ಣ ಕಾನೂನುಬದ್ಧತೆಯನ್ನು ಕೊಡಲಾಗಿದೆ. ಇದು ಆರ್ಥಿಕ ಅಪರಾಧಗಳು, ಚೆಕ್ ಬೌನ್ಸ್ ಮತ್ತು ಸಾಲ ವಸೂಲಾತಿ ಪ್ರಕರಣಗಳಲ್ಲಿ ತನಿಖೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ.
ಬ್ಯಾಂಕಿಂಗ್ ಸಿಬ್ಬಂದಿಯ ಮೇಲಿನ ಹೊರೆ ಇಳಿಕೆ
ಈ ಹೊಸ ಕಾನೂನು ಬ್ಯಾಂಕಿಂಗ್ ಅಧಿಕಾರಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಬಿಗ್ ರಿಲೀಫ್ ನೀಡಲಿದೆ. ಬ್ಯಾಂಕುಗಳು ನೇರವಾಗಿ ಭಾಗಿಯಾಗದ ಸಂದರ್ಭಗಳಲ್ಲಿ, ನ್ಯಾಯಾಲಯವು ವಿಶೇಷ ಆದೇಶವನ್ನು ನೀಡದ ಹೊರತು ಅಧಿಕಾರಿಗಳು ಭೌತಿಕ ದಾಖಲೆಗಳೊಂದಿಗೆ ಹಾಜರಾಗುವ ಅಗತ್ಯವಿಲ್ಲ. ಇದು ಬ್ಯಾಂಕ್ ನೌಕರರ ಮೇಲಿನ ಅನಗತ್ಯ ಒತ್ತಡವನ್ನು ಕಡಿತಗೊಳಿಸುವುದಲ್ಲದೆ, ಪ್ರಮಾಣೀಕೃತ ಡಿಜಿಟಲ್ ಪುರಾವೆಗಳ ಮೂಲಕ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದನ್ನು ತ್ವರಿತಗೊಳಿಸಲಿದೆ,(ಏಜೆನ್ಸೀಸ್).