Women Reservation Bill | ಲೋಕಸಭೆ 
ದೇಶ

ಲೋಕಸಭೆಯಲ್ಲಿ ಇನ್ಮುಂದೆ 816 ಸಂಸದರು! ಕೇಂದ್ರದ ಮೆಗಾ ಪ್ಲಾನ್‌ನಲ್ಲಿ ಕರ್ನಾಟಕದ ಪಾಲೆಷ್ಟು..?..ಇಲ್ಲಿದೆ ಕಂಪ್ಲೀಟ್ ಲಿಸ್ಟ್! | Women Reservation Bill

ನವದೆಹಲಿ: ಭಾರತೀಯ ಸಂಸದೀಯ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆಯುವ ಸಾಧ್ಯತೆಯಿದ್ದು, ದೇಶದ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ಮತ್ತು ಅದರಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಅಂದುಕೊಂಡಂತೆ ಎಲ್ಲವೂ ನಡೆದರೆ ಲೋಕಸಭೆಯ ಒಟ್ಟು 543 ಸ್ಥಾನಗಳು 816ಕ್ಕೆ ಏರಿಸುವ ಪ್ರಸ್ತಾವನೆಯಿದೆ ಎಂದು ವರದಿಯಾಗಿದೆ.

ಮಹಿಳಾ ಮೀಸಲಾತಿ ಮತ್ತು ಸ್ಥಾನಗಳ ಹಂಚಿಕೆ

ಪ್ರಸ್ತಾವಿತ ಹೊಸ ವ್ಯವಸ್ಥೆಯಡಿ, ಒಟ್ಟು 816 ಸ್ಥಾನಗಳ ಪೈಕಿ ಸುಮಾರು 273 ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಡುವ ಸಾಧ್ಯತೆ ಇದ್ದು, ಇದು ಮಹಿಳಾ ಪ್ರಾತಿನಿಧ್ಯವನ್ನು ಸಂಸತ್ತಿನಲ್ಲಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಲಿದೆ. ಈ ಬದಲಾವಣೆಗಳಿಗೆ ಕಾನೂನು ಮಾನ್ಯತೆ ನೀಡಲು ಸರ್ಕಾರವು ಪ್ರಸಕ್ತ ಸಂಸತ್ತಿನ ಅಧಿವೇಶನದಲ್ಲೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ. 2011ರ ಜನಗಣತಿಯ ದತ್ತಾಂಶವನ್ನು ಆಧರಿಸಿ ಈ ಕ್ಷೇತ್ರ ಪುನರ್ವಿಂಗಡಣೆ ಕಾರ್ಯವನ್ನು ಕೈಗೊಳ್ಳಲು ತಯಾರಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ರಾಜ್ಯವಾರು ಸ್ಥಾನಗಳ ಏರಿಕೆಯ ಲೆಕ್ಕಾಚಾರ

ಈ ಮಸೂದೆ ಮಂಡನೆಯಾದರೆ ಬಹುತೇಕ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳು ಹೆಚ್ಚಾಗಲಿದ್ದು, ಉತ್ತರ ಪ್ರದೇಶದ ಸ್ಥಾನಗಳು 80 ರಿಂದ 120ಕ್ಕೆ, ಬಿಹಾರ 40 ರಿಂದ 60ಕ್ಕೆ ಮತ್ತು ಮಹಾರಾಷ್ಟ್ರ 48 ರಿಂದ 72ಕ್ಕೆ, ಕರ್ನಾಟಕ ಸಂಖ್ಯೆ 28 ರಿಂದ 42ಕ್ಕೆ, ತಮಿಳುನಾಡಿನಲ್ಲಿ 39 ರಿಂದ 59ಕ್ಕೆ, ಆಂಧ್ರಪ್ರದೇಶದಲ್ಲಿ 25 ರಿಂದ 38ಕ್ಕೆ ಹಾಗೂ ಕೇರಳದಲ್ಲಿ 20 ರಿಂದ 30ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳ (63), ಗುಜರಾತ್ (39), ರಾಜಸ್ಥಾನ (38), ಒಡಿಶಾ (32) ಮತ್ತು ದೆಹಲಿ (11) ರಾಜ್ಯಗಳಲ್ಲೂ ಸ್ಥಾನಗಳ ಸಂಖ್ಯೆ ಹೆಚ್ಚಳವಾಗಲಿದೆ.

ಪ್ರಾದೇಶಿಕ ಸಮತೋಲನ ಮತ್ತು ವಿರೋಧ

ಈ ಹಿಂದೆ ಲೋಕಸಭಾ ಸ್ಥಾನಗಳ ಹೆಚ್ಚಳದ ಪ್ರಸ್ತಾಪಕ್ಕೆ ದಕ್ಷಿಣ ಭಾರತದ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಉತ್ತರದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿಗೆ ಹೆಚ್ಚಿನ ಸ್ಥಾನಗಳು ಲಭಿಸಿ, ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಭಾವ ಕಡಿಮೆಯಾಗಬಹುದು ಎಂಬ ಆತಂಕವಿತ್ತು. ಆದರೆ, ಪ್ರಸ್ತುತ ಪ್ರಸ್ತಾವನೆಯಲ್ಲಿ ಪ್ರತಿ ರಾಜ್ಯಕ್ಕೂ ಅವುಗಳ ಪಾಲಿಗೆ ಅನುಗುಣವಾಗಿ ಸಮಾನವಾಗಿ ಸ್ಥಾನಗಳನ್ನು ಹೆಚ್ಚಿಸುವ ಮೂಲಕ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ರಾಜಕೀಯ ಚಟುವಟಿಕೆಗಳು ಚುರುಕು

ಈ ಮಹತ್ವದ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ವಿರೋಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದರೆ, ಇಂದು (ಮಾರ್ಚ್ 24) ನಡೆಯಲಿರುವ ಎನ್‌ಡಿಎ ನಾಯಕರ ಸಭೆಯಲ್ಲಿ ಮಸೂದೆಯ ಅಂತಿಮ ಮಾರ್ಗಸೂಚಿ ಸಿದ್ಧವಾಗುವ ಸಾಧ್ಯತೆಯಿದೆ(ಏಜೆನ್ಸೀಸ್​​).