Bihar Election | ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ  
ದೇಶ

Bihar Election | ಬಿಹಾರ ಚುನಾವಣೆಯ ಸೋಲಿಗೆ ಇದೇ ಕಾರಣ ಎಂದ ಸ್ಥಳೀಯ ಕಾಂಗ್ರೆಸ್ಸಿಗರು; ಅದಕ್ಕೆ ರಾಹುಲ್​ ಗಾಂಧಿ ಹೇಳಿದ್ದೇನು..?

ಪ್ರಮುಖ ಮುಖ್ಯಾಂಶಗಳು

  • ಆಂತರಿಕ ಸಂಘರ್ಷವೇ ಪಕ್ಷದ ಹೀನಾಯ ಸೋಲಿಗೆ ಕಾರಣ
  • ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ದೆಹಲಿಯ ನಿವಾಸದಲ್ಲಿ ನಡೆದ ಆತ್ಮಾವಲೋಕನ ಸಭೆ
  • ಸೋಲಿಗೆ ನಾನು ಹೊಣೆಗಾರ ಎಂದ ರಾಹುಲ್​ ಗಾಂಧಿ
ನವದೆಹಲಿ: ಎನ್​ಡಿಎ ಮೈತ್ರಿಕೂಟದ ಮಹಿಳಾ ರೋಜ್‌ಗಾರ್ ಯೋಜನೆ, ಕಾಂಗ್ರೆಸ್​ ಅಭ್ಯರ್ಥಿಗಳಿಗೆ ತಡವಾಗಿ ಟಿಕೆಟ್ ಹಂಚಿಕೆ ಮಾಡಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತು ಆಂತರಿಕ ಸಂಘರ್ಷವೇ ಪಕ್ಷದ ಹೀನಾಯ ಸೋಲಿಗೆ ಕಾರಣ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ. 
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ದೆಹಲಿಯ ನಿವಾಸದಲ್ಲಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಖರ್ಗೆ ನೇತೃತ್ವದಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಬಿಹಾರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜೇಶ್ ರಾಮ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಕೃಷ್ಣ ಅಲ್ಲಾವರು ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದರು ಎನ್ನಲಾಗಿದ್ದು, ಇದು ಇತ್ತೀಚಿನ ಚುನಾವಣೆಯ ಸೋಲಿನ ಬಗ್ಗೆ ಚರ್ಚಿಸಲು ನಡೆಸಿದ ಪಕ್ಷದ ಎರಡನೇ ಸಭೆಯಾಗಿದೆ. 

ನಾನು ಕಾರಣ ಎಂದ ರಾಹುಲ್​ ಗಾಂಧಿ..

ಬಿಹಾರದ ಇತ್ತೀಚಿನ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಇತರ ಕಾರಣಗಳೊಂದಿಗೆ ನಾನು ಹೊಣೆಗಾರನಾಗಿದ್ದೇನೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿರುವುದಾಗಿ ವರದಿಯಾಗಿದೆ. ಬಿಹಾರ ಕಾಂಗ್ರೆಸ್​ನ ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಪಕ್ಷದ ಸೋಲಿಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯೂ ಒಂದು ಕಾರಣ ಎಂದು ಸ್ಥಳೀಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್​, ಈ ಸೋಲಿನ ಬಗ್ಗೆ ಇನ್ನು ಆಲೋಚಿಸುವುದು ಬೇಡ, ಮುಂಬರುವ ಇತರ ವಿಧಾನಸಭಾ ಚುನಾವಣೆಗಳ ಕಡೆ ಗಮನ ನೀಡಿ ಎಂದಿದ್ದಾರೆ. 

ಕಾಂಗ್ರೆಸ್‌ಗೆ ಹೀನಾಯ ಸೋಲು.

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಸ್ಪರ್ಧಿಸಿದ್ದ 61 ಕ್ಷೇತ್ರಗಳ ಪೈಕಿ ಕೇವಲ ಆರು ಸ್ಥಾನಗಳಲ್ಲಿ ಜಯಸಾಧಿಸಿದೆ, ಶೇ.10 ಕ್ಕಿಂತ ಕಡಿಮೆ ಸ್ಟ್ರೈಕ್ ದರ ಹೊಂದಿದೆ. ಇತ್ತ ಮಿತ್ರಪಕ್ಷ ರಾಷ್ಟ್ರೀಯ ಜನತಾದಳ (ಆರ್‌ಜೆಡಿ)ದ್ದು ಕೂಡ ಇದೇ ಕಥೆಯಾಗಿದ್ದು, ಸ್ಪರ್ಧಿಸಿದ 143 ಕ್ಷೇತ್ರಗಳಲ್ಲಿ ಕೇವಲ 25 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮಹಾಘಟಬಂಧನ್ ಸ್ಪರ್ಧಿಸಿದ 243 ಕ್ಷೇತ್ರಗಳಲ್ಲಿ ಕೇವಲ 35 ಸ್ಥಾನ ಪಡೆದುಕೊಂಡಿದೆ. 

ಎನ್‌ಡಿಎಯ ದಿಗ್ವಿಜಯ..

ಇತ್ತ ಎನ್‌ಡಿಎ ಮೈತ್ರಿಕೂಟ 202 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಂಡಿದ್ದು. ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧೆಸಿದ್ದ ಬಿಜೆಪಿ 89, ಜೆಡಿಯು 85 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ  19 ಸ್ಥಾನಗಳನ್ನು ಗೆದ್ದು ಉತ್ತಮ ಪ್ರದರ್ಶನ ನೀಡಿದ್ದು, ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಕ್ರಮವಾಗಿ ಐದು ಮತ್ತು ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿವೆ(ಏಜೆನ್ಸೀಸ್​).