Bangladeshi infiltrators| ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್  
ದೇಶ

ಸ್ಥಳೀಯ ಸಂಸ್ಥೆ ಚುನಾವಣೆ: ಬಾಂಗ್ಲಾ ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರ ಅದೇಶ | Bangladeshi infiltrators

ಮುಂಬೈ: ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮುಂಚಿತವಾಗಿ, ಮಹಾರಾಷ್ಟ್ರದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು(Bangladeshi infiltrators) ಮತ್ತು ರೋಹಿಂಗ್ಯಾಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ನಕಲಿ ಜನನ ಪ್ರಮಾಣಪತ್ರಗಳನ್ನು ತಕ್ಷಣ ರದ್ದುಗೊಳಿಸಲು ಆದೇಶಿಸಿದೆ.
ಈ ಬಗ್ಗೆ ಮಹಾರಾಷ್ಟ್ರ ಪೊಲೀಸರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಸಿಸುವ ಹಲವಾರು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾಗಳು ಸ್ಥಳೀಯ ಪುರಸಭೆಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ನಕಲಿ ಜನನ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ ಎಂದು ಕಂಡುಹಿಡಿದ ನಂತರ ಈ ಬೆಳವಣಿಗೆ ಸಂಭವಿಸಿದೆ.
ಅಲ್ಲದೆ, ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಪೊಲೀಸರಿಗೆ ಆದೇಶಿಸಿದೆ.

ಕಿರಿತ್ ಸೋಮಯ್ಯ ಅವರ ಆರೋಪಗಳು

ಈ ವರ್ಷದ ಜನವರಿಯಲ್ಲಿ, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಕಿರೀಟ್ ಸೋಮಯ್ಯರು, 2024ರಲ್ಲಿ ಮಹಾರಾಷ್ಟ್ರದಲ್ಲಿ 1.50 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರು ನಕಲಿ ದಾಖಲೆಗಳನ್ನು ಬಳಸಿ ಭಾರತೀಯ ಪೌರತ್ವ ಪಡೆದಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಸಮಗ್ರ ತನಿಖೆಗೆ ಒತ್ತಾಯಿಸಿ, ಸೋಮಯ್ಯ ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರು ನಕಲಿ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದರು.
ಈ ಬಗ್ಗೆ ಮಾತನಾಡಿದ ಸೋಮಯ್ಯ, ಬಾಂಗ್ಲಾದೇಶಿ ನುಸುಳುಕೋರರಿಗೆ ನಕಲಿ ದಾಖಲೆಗಳನ್ನು ಒದಗಿಸಿದ್ದಕ್ಕಾಗಿ ಪಡ್ಘಾ, ಖೋನಿ ಮತ್ತು ಮಹಾಪೋಲಿಯಲ್ಲಿರುವ ಗ್ರಾಮ ಪಂಚಾಯಿತಿಗಳನ್ನು ಬಿಜೆಪಿ ನಾಯಕರು ದೂಷಿಸಿದ್ದರು. ಇಂತಹ ಗ್ರಾಮ ಪಂಚಾಯಿತಿಗಳು ಮತ್ತು ಅವುಗಳ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು.
ರಾಜ್ಯದ ಭಿವಾಂಡಿಯೊಂದರಲ್ಲೇ 1,000 ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳು ಜನನ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ಬೆಳಕಿಗೆ ಬಂದಿದೆ. ಇವರಲ್ಲಿ ನೂರಾರು ಜನರಿಗೆ ಈಗಾಗಲೇ ಸ್ಥಳೀಯ ತಹಸಿಲ್‌ಗಳು ಮತ್ತು ಗ್ರಾಮ ಪಂಚಾಯತ್‌ಗಳು ಪ್ರಮಾಣಪತ್ರಗಳನ್ನು ನೀಡಿವೆ. ಅಲ್ಲದೆ, ಜನನ ಪ್ರಮಾಣಪತ್ರಗಳು, ಮರಣ ಪ್ರಮಾಣಪತ್ರಗಳು ಮತ್ತು ಸಂಬಂಧಿತ ಅರ್ಜಿಗಳ ದಾಖಲೆಗಳನ್ನು ಪರಿಶೀಲಿಸಲು ನಾನು ಒಂದು ಗಂಟೆಗೂ ಹೆಚ್ಚು ಕಾಲ ಕಳೆದಿದ್ದೇನೆ ಎಂದು ಸೋಮಯ್ಯ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳು

ಮಹಾರಾಷ್ಟ್ರದ 246 ಪುರಸಭೆಗಳು ಮತ್ತು 42 ಪಟ್ಟಣ ಮಂಡಳಿಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಡಿಸೆಂಬರ್ 2 ರಂದು (ಮಂಗಳವಾರ) ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು (ಬುಧವಾರ) ಫಲಿತಾಂಶಗಳನ್ನು ಘೋಷಿಸಲಾಗುವುದು,(ಏಜೆನ್ಸೀಸ್).