ವೆಂಕಟ ವಾಸಂಶೆಟ್ಟಿ 
ದೇಶ

27 ವರ್ಷದಿಂದ ಅಮೆರಿಕದಲ್ಲಿ ವಾಸ! ಗ್ರೀನ್​ ಕಾರ್ಡ್​ ಹೊಂದಿದ್ರು ಭಾರತೀಯ ಮೂಲದ ಮಹಿಳೆಯನ್ನು ಬಂಧಿಸಿದ ICE

ಪ್ರಮುಖ ಮುಖ್ಯಾಂಶಗಳು

  • ಕಳೆದ 27 ವರ್ಷಗಳಿಂದ ಅಮೆರಿಕದಲ್ಲಿ ವಾಸ್ತವ್ಯ ಹೂಡಿರುವ ಭಾರತ ಮೂಲದ ಮಹಿಳೆ
  • ಖಾಯಂ ನಿವಾಸಿ ಎಂಬ ಮಾನ್ಯತೆ ಪಡೆಯುವ ಗ್ರೀನ್ ಕಾರ್ಡ್ ಹೊಂದಿದ್ದರೂ ವೆಂಕಟ ವಾಸಂಶೆಟ್ಟಿ ಬಂಧನ
  • ಗಡಿಪಾರು ಆದೇಶವನ್ನು ರದ್ದುಗೊಳಿಸಿದ್ದರೂ ಈ ಕ್ರಮ ಕೈಗೊಂಡಿರುವುದದಕ್ಕೆ ತೀವ್ರ ಆಕ್ರೋಶ
ವಾಷಿಂಗ್ಟನ್: ಕಳೆದ 27 ವರ್ಷಗಳಿಂದ ಅಮೆರಿಕದಲ್ಲಿ ವಾಸ್ತವ್ಯ ಹೂಡಿದ್ದು, ಖಾಯಂ ನಿವಾಸಿ ಎಂಬ ಮಾನ್ಯತೆ ಪಡೆಯುವ ಗ್ರೀನ್ ಕಾರ್ಡ್ ಅನ್ನು ಹೊಂದಿದ್ದರೂ ಸಹ ಭಾರತೀಯ ಮೂಲದ ವೆಂಕಟ ವಾಸಂಶೆಟ್ಟಿ ಎಂಬವರನ್ನು ಇದೀಗ ಅಮೆರಿಕದ ವಲಸೆ ಮತ್ತು ಸುಂಕ ಜಾರಿ ನಿರ್ದೇಶನಾಲಯದ (ICE) ಅಧಿಕಾರಿಗಳು ಬಂಧಿಸಿದ್ದಾರೆ.
ಇಮಿಗ್ರೇಷನ್ ನ್ಯಾಯಾಧೀಶರು ಈ ಹಿಂದೆಯೇ ಅವರ ಗಡಿಪಾರು ಆದೇಶವನ್ನು ರದ್ದುಗೊಳಿಸಿದ್ದರೂ ಈ ಕ್ರಮ ಕೈಗೊಂಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ, ಉತ್ತರ ಕೆರೊಲಿನಾದ ಸಾರ್ವಜನಿಕ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ವಾಸಂಶೆಟ್ಟಿ ಅವರನ್ನು, ಶಾರ್ಲೊಟ್‌ನಲ್ಲಿರುವ ಐಸ್​ ಕಚೇರಿಗೆ ಆಗಮಿಸಿದಾಗ ದಿಢೀರ್​ ಬಂಧಿಸಿದ್ದಾರೆ ಎನ್ನಲಾಗಿದೆ.
ಅರೆಸ್ಟ್ ಮಾಡಿದ ಬೆನ್ನಲ್ಲೇ ಆಕೆಯನ್ನು ಜಾರ್ಜಿಯಾದ ಓಸಿಲಾದಲ್ಲಿರುವ ಅರ್ವಿನ್ ಕೌಂಟಿ ಜೈಲ್​ಗೆ ಸ್ಥಳಾಂತರಿಸಲಾಗಿದೆ. ಅಧಿಕಾರಿಗಳ ಈ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿ ಅವರ ಪರ ವಕೀಲರು ತುರ್ತು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. 

ಅಷ್ಟಕ್ಕೂ ಏನಿದು ಪ್ರಕರಣ? 

2022ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪಾಲಕರನ್ನು ನೋಡಿಕೊಳ್ಳಲು ವಾಸಂಶೆಟ್ಟಿ ಅವರು ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಅವರಿಗೆ ಕೋವಿಡ್ 19 ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಎದುರಾಯಿತು. ಇದರಿಂದಾಗಿ ಅವರು ಅಮೆರಿಕಕ್ಕೆ ವಾಪಾಸ್ ಆಗುವುದು ತೀರ ವಿಳಂಬವಾಯಿತು. ಸುಮಾರು ಏಳು ತಿಂಗಳ ಬಳಿಕ, 2023ರ ಫೆಬ್ರವರಿಯಲ್ಲಿ ಅಮೆರಿಕಕ್ಕೆ ಹಿಂತಿರುಗಿದರು. ರೇಲಿ-ಡರ್ಹಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಅಮೆರಿಕದ ಒಳನಾಡು ಭದ್ರತಾ ಇಲಾಖೆ (DHS) ತೀವ್ರ ಆಕ್ಷೇಪ ಎತ್ತಿತು.

ನ್ಯಾಯಾಲಯ ನೀಡಿದ್ದ ಮಹತ್ವದ ತೀರ್ಪು

ವಾಸಂಶೆಟ್ಟಿ ಅವರು ದೀರ್ಘಕಾಲ ಅಮೆರಿಕ ಬಿಟ್ಟು ವಿದೇಶದಲ್ಲಿದ್ದ ಕಾರಣ, ಆಕೆ ತಮ್ಮ ಗ್ರೀನ್ ಕಾರ್ಡ್ ಹಕ್ಕನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿದ್ದಾರೆ ಎಂದು ಡಿಎಚ್​ಎಸ್​ ವಾದಿಸಿತು. ಈ ವಾದವನ್ನು ವಾಸಂಶೆಟ್ಟಿ ಪರ ವಕೀಲರು ಖಂಡಿಸಿ, ಮಹಿಳೆಗೆ ಅಮೆರಿಕದಲ್ಲಿ ಸ್ವಂತ ನಿವಾಸ, ಖಾಯಂ ಉದ್ಯೋಗ ಮತ್ತು ಕುಟುಂಬವಿದೆ. ಯುಎಸ್​ನೊಂದಿಗೆ ಸುದೀರ್ಘ ಸಂಬಂಧವಿದೆ ಎಂದು ಸಾಬೀತುಪಡಿಸಿದರು.
ವಾದ-ಪ್ರತಿವಾದ ಆಲಿಸಿದ ಇಮಿಗ್ರೇಷನ್ ನ್ಯಾಯಾಧೀಶರು, ಮೇ 19ರಂದು ವಾಸಂಶೆಟ್ಟಿ ಪರವಾಗಿ ತೀರ್ಪು ಘೋಷಿಸಿ, ಮಹಿಳೆಯು ತಮ್ಮ ಶಾಶ್ವತ ನಿವಾಸಿ ಹಕ್ಕನ್ನು ತ್ಯಜಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿತು. ಇದರ ಜತೆಗೆ ಮುಖ್ಯವಾಗಿ, ಅವರ ವಿರುದ್ಧದ ಗಡಿಪಾರು ಪ್ರಕರಣವನ್ನು ರದ್ದುಗೊಳಿಸಿತು. ಆದರೀಗ, ಕೋರ್ಟ್​ ಆದೇಶವಿದ್ದರೂ ICE ಅಧಿಕಾರಿಗಳು ವಾಸಂಶೆಟ್ಟಿ ಅವರನ್ನು ಬಂಧಿಸಿರುವುದು ಕಾನೂನುಬಾಹಿರ ಮತ್ತು ಮಹಿಳೆಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ವಕೀಲರು ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ,(ಏಜೆನ್ಸೀಸ್).