ನವದೆಹಲಿ: ವಂದೇ ಭಾರತ್ ಎಕ್ಸ್ಪ್ರೆಸ್ ತನ್ನ ಸೌಲಭ್ಯ ಮತ್ತು ವೇಗಕ್ಕೆ ಹೆಸರುವಾಸಿಯಾಗಿದ್ದರೂ, ಇತ್ತೀಚೆಗೆ ಆಹಾರದ ಗುಣಮಟ್ಟದ ವಿಚಾರವಾಗಿ ತೀವ್ರ ಟೀಕೆಗೆ ಗುರಿಯಾಗಿದೆ. ಪ್ರಯಾಣಿಕರಿಗೆ ನೀಡಲಾದ ಆಹಾರದಲ್ಲಿ (Food Safety) ಹುಳ ಪತ್ತೆಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ, ರೈಲ್ವೆ ಸಚಿವಾಲಯ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿದೆ.
ವಿಡಿಯೋದಲ್ಲೇನಿದೆ?
ಇತ್ತೀಚಿಗೆ ಪಾಟ್ನಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ತಮಗೆ ನೀಡಲಾದ ಉಪಹಾರದ ಜೊತೆಗಿದ್ದ ಮೊಸರಿನ ಪ್ಯಾಕೇಟ್ನ್ನು ತೆರೆದಾಗ ಅದರಲ್ಲಿ ಜೀವಂತವಾಗಿ ಹುಳಗಳು ಓಡಾಡುವುದನ್ನು ಗಮನಿಸಿದ್ದಾರೆ. ನಂತರ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ದೂರಿನ ಬಗ್ಗೆ ಸ್ಥಳದಲ್ಲೇ ಪರಿಶೀಲನೆ ನಡೆಸಿದ ರೈಲ್ವೆ ಅಧಿಕಾರಿಗಳು
ದೂರು ಬಂದ ಕೂಡಲೇ, ರೈಲ್ವೆ ಅಧಿಕಾರಿಗಳು ಪ್ರಯಾಣಿಕನ ಆಸನದ ಬಳಿ ತೆರಳಿ ಆಹಾರದ ಗುಣಮಟ್ಟದ ಬಗ್ಗೆ ತನಿಖೆ ನಡೆಸಿದರು. ಆಗ ಹುಳುಗಳು ಇರುವುದನ್ನು ಗಮನಿಸಿದ ಅಧಿಕಾರಿಗಳು ಸಂಬಂಧಪಟ್ಟ ಗುತ್ತಿಗೆ ಕ್ಯಾಟರಿಂಗ್ ಮೇಲೆ ಕ್ರಮಕೈಗೊಳ್ಳಲು ಮುಂದಾದರು.
ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ರೈಲ್ವೆ ಸಚಿವಾಲಯವು ವಿಷಯವನ್ನು ಗಂಭೀರವಾಗಿ ಪರಿಗಣಿಸಿತು. ಕೇವಲ ಗುತ್ತಿಗೆದಾರರ ಮೇಲೆ ಮಾತ್ರವಲ್ಲದೆ, ಇಡೀ ಕ್ಯಾಟರಿಂಗ್ ವ್ಯವಸ್ಥೆಯ ಉಸ್ತುವಾರಿ ಹೊತ್ತಿರುವ IRCTC ಮೇಲೆಯೇ ಕ್ರಮಕ್ಕೆ ಮುಂದಾಗಿದ್ದು, ಬರೋಬ್ಬರಿ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಿದರು.
ಇದರ ಜೊತೆಗೆ, ಊಟದ ಜವಾಬ್ದಾರಿಯುತ ಖಾಸಗಿ ಅಡುಗೆ ಸೇವಾ ಪೂರೈಕೆದಾರರಿಗೆ 50 ಲಕ್ಷ ದಂಡವನ್ನು ವಿಧಿಸಿ ಅವರೊಂದಿಗೆ ಇರುವ ಒಪ್ಪಂದವನ್ನು ರದ್ದುಗೊಳಿಸಿಕೊಂಡರು. ಇದು ಪ್ರಯಾಣಿಕರ ಸುರಕ್ಷತೆ, ನೈರ್ಮಲ್ಯ ಮತ್ತು ಆಹಾರದ ಗುಣಮಟ್ಟವು ಭಾರತೀಯ ರೈಲ್ವೆಗೆ ಪ್ರಮುಖ ಆದ್ಯತೆ ಎಂದು ಪುನರುಚ್ಚಿಸಿದರು (ಏಜೆನ್ಸೀಸ್).