ಉತ್ತರಪ್ರದೇಶ: ಲಿವ್-ಇನ್ ಸಂಬಂಧಗಳು ಅಕ್ರಮವಲ್ಲ ಮತ್ತು ಅಂತಹ ಜೋಡಿಗಳಿಗೆ ರಾಜ್ಯ ಸರ್ಕಾರವು ಪೊಲೀಸ್ ರಕ್ಷಣೆ ನೀಡಲು ಬಾಧ್ಯವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್‌ನ ಇತ್ತೀಚಿನ ತೀರ್ಪು ನೀಡಿದೆ.
ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಂದ ಸಲ್ಲಿಸಲಾದ 12 ಅರ್ಜಿಗಳನ್ನುಒಟ್ಟಾಗಿ ವಿಚಾರಣೆ ನಡೆಸಿ, ಕುಟುಂಬ ಸದಸ್ಯರಿಂದ ಬೆದರಿಕೆ ಎದುರಿಸುತ್ತಿರುವ ಲಿವ್-ಇನ್ ಜೋಡಿಗಳಿಗೆ ತಕ್ಷಣದ ಪೊಲೀಸ್ ರಕ್ಷಣೆ ನೀಡುವಂತೆ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್ ಅವರಿದ್ದ ಏಕಸದಸ್ಯ ಪೀಠ ನಿರ್ದೇಶನ ನೀಡಿದೆ.
ಲಿವ್-ಇನ್ ಸಂಬಂಧದ ಪರಿಕಲ್ಪನೆಯು ಎಲ್ಲರಿಗೂ ಸ್ವೀಕಾರಾರ್ಹವಲ್ಲದಿದ್ದರೂ, ಅದು ಅಕ್ರಮವಲ್ಲ ಅಥವಾ ವಿವಾಹವಿಲ್ಲದೆ ಒಟ್ಟಿಗೆ ವಾಸಿಸುವುದು ಅಪರಾಧವಲ್ಲ. ಪ್ರೌಢಾವಸ್ಥೆಯಲ್ಲಿರುವ ಇಬ್ಬರು ವ್ಯಕ್ತಿಗಳು ತಮ್ಮ ಇಚ್ಛೆಯಂತೆ ಒಟ್ಟಿಗೆ ವಾಸಿಸಲು ಆಯ್ಕೆ ಮಾಡಿಕೊಂಡರೆ, ಕುಟುಂಬ ಸದಸ್ಯರು ಸೇರಿದಂತೆ ಯಾರೂ ಅಡ್ಡಿಪಡಿಸಲು ಹಕ್ಕಿಲ್ಲ. ಸಂವಿಧಾನದ ಅಡಿಯಲ್ಲಿ ರಾಜ್ಯದ ಮೇಲೆ ಪ್ರತಿಯೊಬ್ಬ ಪೌರನ ಜೀವನ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಕರ್ತವ್ಯವಿದೆ (ಅನುಚ್ಛೇದ 21). ದೀರ್ಘಕಾಲ ಒಟ್ಟಿಗೆ ವಾಸಿಸುತ್ತಿರುವ ಜೋಡಿಗಳನ್ನು ವಿವಾಹಿತರೆಂದು ಊಹಿಸಬಹುದು ಎಂದು ಭಾರತೀಯ ಸಾಕ್ಷ್ಯಾಧಾರ ಕಾಯ್ದೆಯ ಸೆಕ್ಷನ್ 114ರ ಉಲ್ಲೇಖಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಈ ತೀರ್ಪು ಸುಪ್ರೀಂ ಕೋರ್ಟ್‌ನ ಹಲವು ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ್ದು, ಲಿವ್-ಇನ್ ಸಂಬಂಧಗಳನ್ನು ಕಾನೂನುಬಾಹಿರ ಎಂದು ಖಂಡಿಸಿಲ್ಲ ಎಂದು ಒತ್ತಿ ಹೇಳಿದೆ. ಅಲ್ಲದೆ, ಪೊಲೀಸರು ಜೋಡಿಗಳ ವಯಸ್ಸು ಮತ್ತು ಸ್ವಯಂ ಇಚ್ಛೆಯನ್ನು ಪರಿಶೀಲಿಸಿ ರಕ್ಷಣೆ ನೀಡಬೇಕು ಎಂದು ಸೂಚನೆ ನೀಡಿದೆ. ಈ ತೀರ್ಪು ವಯಸ್ಕರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆಯ್ಕೆಯ ಹಕ್ಕನ್ನು ದೃಢೀಕರಿಸುವ ಮಹತ್ವದ್ದಾಗಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).