Noel Tata | ಐಪಿಒ ಲಿಸ್ಟಿಂಗ್‌ಗೆ ಬ್ರೇಕ್ ಹಾಕಿದ ನೋಯೆಲ್ ಟಾಟಾ
Noel Tata: ಟಾಟಾ ಗ್ರೂಪ್‌ನ ಮಾತೃ ಸಂಸ್ಥೆಯಾದ ಟಾಟಾ ಸನ್ಸ್ ಅನ್ನು ಸಾರ್ವಜನಿಕ ರಂಗದಲ್ಲಿ ಪಟ್ಟಿಯಾಸು ಮಾಡುವ ವಿಚಾರವಾಗಿ ಟ್ರಸ್ಟ್ ಮತ್ತು ಟಾಟಾ ಸನ್ಸ್ ಆಡಳಿತ ಮಂಡಳಿ ನಡುವೆ ತೀವ್ರ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಟಾಟಾ ಸನ್ಸ್ ಸಂಸ್ಥೆಯನ್ನು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡುವುದರಿಂದ ಶತಮಾನಗಳ ಇತಿಹಾಸವಿರುವ ಟಾಟಾ ಗ್ರೂಪ್‌ನ ಮೂಲ ಸ್ವರೂಪ ಮತ್ತು ಸಿದ್ಧಾಂತಕ್ಕೇ ಧಕ್ಕೆಯಾಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು (ಗುರುವಾರ ಸೆ.17) ನಡೆದ ಟಾಟಾ ಸನ್ಸ್ ಮಂಡಳಿ ಸಭೆಯಲ್ಲಿ ಎನ್. ಚಂದ್ರಶೇಖರನ್ ಅವರನ್ನು ಮತ್ತೊಮ್ಮೆ ಐದು ವರ್ಷಗಳ ಅವಧಿಗೆ ಕಾರ್ಯಾಂಗ ಅಧ್ಯಕ್ಷರಾಗಿ ಮರುನೇಮಕ ಮಾಡಲು ಅನುಮೋದನೆ ನೀಡಲಾಯಿತು. ಇದೇ ವೇಳೆ ಸಂಸ್ಥೆಯ ಲಿಸ್ಟಿಂಗ್ ಪ್ರಕ್ರಿಯೆಗೆ ಮುಂದಾಗಲು ಮಂಡಳಿ ನಿರ್ಧರಿಸಿದಾಗ, ಟಾಟಾ ಸನ್ಸ್‌ನಲ್ಲಿ ಶೇಕಡಾ 66ರಷ್ಟು ಪಾಲು ಹೊಂದಿರುವ ಟಾಟಾ ಟ್ರಸ್ಟ್ ಈ ನಿರ್ಧಾರವನ್ನು ಖಂಡತುಂಡವಾಗಿ ವಿರೋಧಿಸಿದೆ.
ನೋಯೆಲ್ ಟಾಟಾ ಅವರ ಪ್ರಕಾರ, ಟಾಟಾ ಸನ್ಸ್ ಎಂಬುದು ಕೇವಲ ಒಂದು ಸಾಂಪ್ರದಾಯಿಕ ಹೊಲ್ಡಿಂಗ್ ಕಂಪನಿಯಲ್ಲ. ಇದರ ಮಾಲೀಕತ್ವದ ರಚನೆಯು ವ್ಯಾಪಾರ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಒಂದಕ್ಕೊಂದು ಬೆಸೆದಿದೆ. ಒಂದು ವೇಳೆ ಸಂಸ್ಥೆಯು ಷೇರು ಮಾರುಕಟ್ಟೆ ಪ್ರವೇಶಿಸಿದರೆ, ಅದು ಹಣಕಾಸಿನ ಲಾಭವನ್ನು ಮಾತ್ರ ಬಯಸುವ ವಿದೇಶಿ ಮತ್ತು ಸಾಂಸ್ಥಿಕ ಹೂಡಿಕೆದಾರರಿಗೆ ಉತ್ತರಿಸಬೇಕಾಗುತ್ತದೆ.
ಇದರಿಂದ ಸುದೀರ್ಘ ಅವಧಿಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಹಾಗೂ ಬಿಕ್ಕಟ್ಟಿನ ಸಮಯದಲ್ಲಿ ಉದ್ಯಮಗಳನ್ನು ಬೆಂಬಲಿಸುವ ಸಂಸ್ಥೆಯ ಸಾಮರ್ಥ್ಯಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಲಿಸ್ಟಿಂಗ್ ಒಂದೇ ಅಂತಿಮ ಮಾರ್ಗವಲ್ಲ, ಬ್ಯಾಂಕಿಂಗ್ ನಿಯಂತ್ರಕ ಸಂಸ್ಥೆಯಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೊತೆ ಮಾತನಾಡಿ ಇತರ ಎಲ್ಲಾ ಪರ್ಯಾಯ ಆಯ್ಕೆಗಳನ್ನು ತಕ್ಷಣವೇ ಪರಿಶೀಲಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್, ಟಾಟಾ ಸನ್ಸ್ ಅನ್ನು ಅಪ್ಪರ್-ಲೇಯರ್ ಎನ್‌ಬಿಎಫ್‌ಸಿ ನಿಯಮಗಳಿಗೆ ಒಳಪಡುವಂತೆ ಸೂಚಿಸಿದ್ದು ನಿಜವಾದರೂ, ಅದು ಲಿಸ್ಟಿಂಗ್ ಮಾಡುವುದು ಕಡ್ಡಾಯ ಎಂದು ಎಲ್ಲೂ ಹೇಳಿಲ್ಲ ಎಂಬುದು ನೋಯೆಲ್ ಅವರ ವಾದವಾಗಿದೆ. ಈ ಹಿಂದೆ 2024ರ ಮಾರ್ಚ್‌ನಲ್ಲಿ ದಿವಂಗತ ರತನ್ ಟಾಟಾ ಅವರ ಮಾರ್ಗದರ್ಶನದಲ್ಲೇ ಟಾಟಾ ಸನ್ಸ್ ಅನ್ನು ಲಿಸ್ಟ್ ಮಾಡದಿರಲು ಮಂಡಳಿ ಸರ್ವಾನುಮತದಿಂದ ನಿರ್ಣಯಿಸಿತ್ತು. ಆ ನಿರ್ಧಾರವನ್ನು ಕಾಯ್ದುಕೊಳ್ಳಲು ಸಂಸ್ಥೆಯು ಸುಮಾರು 20,000 ಕೋಟಿ ರೂಪಾಯಿ ಸಾಲವನ್ನು ಮರುಪಾವತಿಸಿ, ಸಂಪೂರ್ಣ ಸಾಲರಹಿತ ಸಂಸ್ಥೆಯಾಗಿ ಹೊರಹೊಮ್ಮಿತ್ತು. ಅಲ್ಲದೆ, 2025ರ ಮೇ ಮತ್ತು ಜುಲೈ ತಿಂಗಳಲ್ಲಿ ಸರ್ ದೊರಾಬ್‌ಜಿ ಟಾಟಾ ಟ್ರಸ್ಟ್ ಹಾಗೂ ಸರ್ ರತನ್ ಟಾಟಾ ಟ್ರಸ್ಟ್‌ಗಳು ಟಾಟಾ ಸನ್ಸ್ ಖಾಸಗಿ ಸಂಸ್ಥೆಯಾಗಿಯೇ ಉಳಿಯಬೇಕು ಎಂದು ಪ್ರತ್ಯೇಕ ನಿರ್ಣಯಗಳನ್ನು ಅಂಗೀಕರಿಸಿದ್ದವು. ಈ ನಿರ್ಣಯಗಳು ಇಂದಿಗೂ ಜಾರಿಯಲ್ಲಿವೆ.
ಒಂದು ವೇಳೆ ಆರ್‌ಬಿಐ ನಿಯಮಗಳ ಪ್ರಕಾರ ಲಿಸ್ಟಿಂಗ್ ಅನಿವಾರ್ಯವೇ ಆದಲ್ಲಿ, ನಿಯಮಾವಳಿಗಳನ್ನು ಪೂರೈಸಲು ಕನಿಷ್ಠ ಮೂರು ವರ್ಷಗಳ ಕಾಲಾವಕಾಶ ಅಂದರೆ ಸೆಪ್ಟೆಂಬರ್ 2029 ರವರೆಗೆ ಸಮಯ ಕೇಳಬೇಕು ಎಂದು ನೋಯೆಲ್ ಸೂಚಿಸಿದ್ದಾರೆ. ಏರ್ ಇಂಡಿಯಾ, ಟಾಟಾ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಸಂಸ್ಥೆಯು ಭಾರಿ ಪ್ರಮಾಣದ ಹೂಡಿಕೆಗಳನ್ನು ಮಾಡುತ್ತಿರುವ ಈ ಸಂದರ್ಭದಲ್ಲಿ ಧಾವಂತದ ಲಿಸ್ಟಿಂಗ್ ಅಪಾಯಕಾರಿ. ಟಾಟಾ ಟ್ರಸ್ಟ್‌ನ ನಿರ್ಧಾರವನ್ನು ಮೀರಲು ಸಾಧ್ಯವಿಲ್ಲ ಎಂದಿರುವ ನೋಯೆಲ್ ಟಾಟಾ, ಆಡಳಿತ ಮಂಡಳಿಯಲ್ಲಿ ಲಿಸ್ಟಿಂಗ್ ಪರವಾಗಿ ಮತದಾನ ನಡೆದರೆ ತಾವು ತಮ್ಮ ವೀಟೋ ಅಧಿಕಾರ ಬಳಸಿ ಆ ನಿರ್ಧಾರವನ್ನು ತಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಮಂಡಳಿಯು ಲಿಸ್ಟಿಂಗ್ ಹೊರತಾದ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಸಮ್ಮತಿಸಿದೆ(ಏಜೆನ್ಸೀಸ್).