Sandeep Patil | ಅಭಿಷೇಕ್, ವೈಭವ್ ಆಟದ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಹಿರಿಯ ಕ್ರಿಕೆಟಿಗ  
ದೇಶ

ಇಬರಿಬ್ಬರ ಕಥೆ ಇಷ್ಟೆ!....ಅಭಿಷೇಕ್, ವೈಭವ್ ಆಟದ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಹಿರಿಯ ಕ್ರಿಕೆಟಿಗ | Sandeep Patil

ಮಣಿಕಂಠ ಪಾ ಹಿರೇಮಠ
Sandeep Patil: ಟೀಮ್ ಇಂಡಿಯಾದ ಯುವ ಬ್ಯಾಟರ್‌ಗಳಾದ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಅವರ ಸ್ಫೋಟಕ ಆಟವನ್ನು ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಮುಕ್ತಕಂಠದಿಂದ ಶ್ಲಾಘಿಸಿದ್ದು, ಇಬ್ಬರೂ ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳಾಗಿದ್ದರೂ, ವಿದೇಶಿ ಮಣ್ಣಿನಲ್ಲಿ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಪೋರ್ಟ್ಸ್​ ನೆಕ್ಷ್ಟ್ ಜೊತೆ ಮಾತನಾಡಿದ​ ಸಂದೀಪ್​ ಪಾಟೀಲ್, ಕಳೆದ ಜುಲೈನಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದ ಸರಣಿಯಲ್ಲಿ ಅಭಿಷೇಕ್ ಐದು ಪಂದ್ಯಗಳಿಂದ 131 ರನ್ ಗಳಿಸಿದರೆ, ಪದಾರ್ಪಣೆ ಮಾಡಿದ ಸೂರ್ಯವಂಶಿ ಮೂರು ಪಂದ್ಯಗಳಲ್ಲಿ ಕೇವಲ 42 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ತವರು ಮಣ್ಣಿನಲ್ಲಿ ಬಾರಿಸುವಂತೆ ವಿದೇಶದಲ್ಲೂ ಪ್ರಭಾವ ಬೀರಲು ಇವರಿಬ್ಬರೂ ವಿಫಲರಾಗಿದ್ದಾರೆ ಎಂಬುದನ್ನು ಈ ಅಂಕಿಅಂಶಗಳ ಸಮೇತ ಎತ್ತಿ ತೋರಿಸಿದ್ದಾರೆ.
ಅವರಿಬ್ಬರ ಬ್ಯಾಟಿಂಗ್ ಬಗ್ಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಅವರಿಗೆ ನೀಡಬೇಕಾದ ಗೌರವವನ್ನು ನೀಡುತ್ತಲೇ ಹೇಳುವುದಾದರೆ, ಅವರು ಭಾರತದಿಂದ ಹೊರಗೆ ಪ್ರಯಾಣಿಸಿದಾಗ ಮತ್ತು ಚೆಂಡು ಸ್ವಲ್ಪ ಮೂವ್ ಆಗಲು ಪ್ರಾರಂಭಿಸಿದಾಗ ಅವರು ಕೆಲವು ತೊಂದರೆಗಳನ್ನು ಎದುರಿಸಿದ್ದನ್ನು ನಾವು ನೋಡಿದ್ದೇವೆ. ಈ ಇಬ್ಬರು ಯುವ ಆಟಗಾರರು ಆ ವಿಷಯದತ್ತಲೂ ಗಮನ ಹರಿಸಿ, ಅದರ ಮೇಲೆ ಕೆಲಸ ಮಾಡಬೇಕಾಗಿದೆ. ದೇಶದಲ್ಲಿ ಸಿಂಹ, ವಿದೇಶದಲ್ಲಿ ಬೆಕ್ಕು ಎನ್ನುವ ರೀತಿ ಆಗಬಾರದು ಎಂದು ಸಂದೀಪ್ ಪಾಟೀಲ್ ಸಲಹೆ ನೀಡಿದ್ದಾರೆ.
ಇಂಗ್ಲೆಂಡ್ ಟಿ20 ಸರಣಿಯ ನಂತರ, ಭಾರತ ತಂಡವು ಈ ಮಾದರಿಯಲ್ಲಿ ಝಿಂಬಾಬ್ವೆಯನ್ನು 3-0 ಅಂತರದಿಂದ ಸೋಲಿಸಿತು. ಇದರಲ್ಲಿ ಸೂರ್ಯವಂಶಿ ಸರಣಿ ಶ್ರೇಷ್ಠ (ಪ್ಲೇಯರ್ ಆಫ್ ది ಸೀರೀಸ್) ಪ್ರಶಸ್ತಿಯ ಜೊತೆಗೆ ಫೈನಲ್ ಪಂದ್ಯದ ಶ್ರೇಷ್ಠ (ಪ್ಲೇಯರ್ ಆಫ್ ದಿ ಮ್ಯಾಚ್) ಪ್ರಶಸ್ತಿಯನ್ನೂ ಪಡೆದರು. ಇತ್ತೀಚೆಗೆ, ಭಾರತವು ಟಿ20 ಸರಣಿಯಲ್ಲಿ ಅಫ್ಘಾನಿಸ್ತಾನವನ್ನು 3-0 ಅಂತರದಿಂದ ಸಂಪೂರ್ಣವಾಗಿ ಮಣಿಸಿತು. ಇದರಲ್ಲಿ ಅಭಿಷೇಕ್ ಅಂತಿಮ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ದಾಖಲೆಯ ಶತಕ ಸಿಡಿಸಿದರು.

ಅಭಿಷೇಕ್ ಪ್ರದರ್ಶನ ಆಶ್ಚರ್ಯ ತಂದಿಲ್ಲ ಎಂದ ಸಂದೀಪ್

ಅಭಿಷೇಕ್ ಶರ್ಮಾ ದಾಖಲೆಯ ಶತಕದ ಬಗ್ಗೆ ಮಾತನಾಡಿದ ಸಂದೀಪ್ ಪಾಟೀಲ್, ಇದರಿಂದ ನನಗೇನೂ ಆಶ್ಚರ್ಯವಾಗಿಲ್ಲ. ಅಭಿಷೇಕ್ ಶತಕ ಬಾರಿಸಿದರು ಮತ್ತು ಭಾರತ ತಂಡ ಕೇವಲ ಆರು ಓವರ್‌ಗಳಲ್ಲಿ 100 ರನ್ ಕಲೆಹಾಕಿತು. ಇದು ಮೊದಲ ಅಥವಾ ಕೊನೆಯ ಬಾರಿಗೆ ನಡೆದಿದೆಯೇ, ಅಥವಾ ಮತ್ತೆ ಇದು ಯಾವಾಗ ನಡೆಯುತ್ತದೆ ಎಂದು ನನಗೆ ಗೊತ್ತಿಲ್ಲ. ಆದರೆ ಈ ಯುವ ಆಟಗಾರರಿಗೆ ಕ್ರೆಡಿಟ್ ನೀಡಲೇಬೇಕು. ಇಂದಿನ ಆಧುನಿಕ ಕ್ರಿಕೆಟ್‌ನ ಯುವ ಆಟಗಾರರಿಗೆ ಆಕ್ರಮಣಕಾರಿ ಆಟದ ಪೂರ್ಣ ಸ್ವಾತಂತ್ರ್ಯ (ಲೈಸೆನ್ಸ್ ಟು ಕಿಲ್) ನೀಡಲಾಗಿದೆ ಮತ್ತು ಅವರು ಅದನ್ನು ಸರಿಯಾದ ರೀತಿಯಲ್ಲೇ ಬಳಸಿಕೊಳ್ಳುತ್ತಿದ್ದಾರೆ. ಅಭಿಷೇಕ್ ಇರಲಿ ಅಥವಾ ವೈಭವ್ ಸೂರ್ಯವಂಶಿ ಇರಲಿ, ಇವರ ಈ ಆಟ ನಿಜಕ್ಕೂ ಗಮನಾರ್ಹವಾದದ್ದು ಎಂದು ಹೇಳಿದರು.
ಅವರಿಬ್ಬರಲ್ಲಿ ಅಪಾರ ಶಕ್ತಿ, ಗುಣಮಟ್ಟ ಮತ್ತು ಕೌಶಲ್ಯವಿದೆ ಮತ್ತು ಅವರು ಆ ಕೌಶಲ್ಯಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ನಾವು ಯಾವಾಗಲೂ ಅರ್ಧ ಮನಸ್ಸಿನಿಂದ ಆಡಬೇಡಿ ಎಂದು ಹೇಳುತ್ತಿದ್ದೆವು. ಅವರು ಪೂರ್ಣ ಬದ್ಧತೆಯಿಂದ ಆಡುತ್ತಾರೆ ಮತ್ತು ಮೊದಲ ಎಸೆತದಿಂದಲೇ ತಮ್ಮ ಶಾಟ್‌ಗಳಿಗೆ ಹೋಗುತ್ತಾರೆ. ಇದನ್ನು ನೀವು ಅದ್ಭುತ ಅಥವಾ ಗಮನಾರ್ಹ ಎಂದೇ ಕರೆಯಬೇಕು ಎಂದು ಸಂದೀಪ್​ ಪಾಟೀಲ್​ ಹೇಳಿದ್ದಾರೆ(ಏಜೆನ್ಸೀಸ್​).