- ಓಪನ್ ಆಗಿದ್ದ ಲಿಫ್ಟ್‌ನ ಬಾಗಿಲು ಕ್ಲೋಸ್ ಆಗುವ ಮುನ್ನವೇ ದಿಢೀರ್ ಕುಸಿತ
- ಲಿಫ್ಟ್ ಕೆಳಗೆ ಚಲಿಸಿದ್ದರಿಂದ ಗಾಬರಿಗೊಂಡ ಮಹಿಳೆಯ ಹೊರಬರಲು ಯತ್ನಿಸಿದಾಗ ದುರಂತ
- ತಲೆ ಸಿಲುಕಿ ಸಹಾಯಕ್ಕಾಗಿ ಕೋರಿದರು ತಕ್ಷಣಕ್ಕೆ ಸಿಗಲಿಲ್ಲ ಸಹಾಯ
ಆಂಧ್ರಪ್ರದೇಶ: ಓಪನ್ ಆಗಿದ್ದ ಲಿಫ್ಟ್‌ನ ಬಾಗಿಲು ಕ್ಲೋಸ್ ಆಗುವ ಮುನ್ನವೇ ದಿಢೀರ್ ಕುಸಿದ ಕಾರಣ ಮಹಿಳೆಯೊಬ್ಬರು ದಾರುಣವಾಗಿ ಸಾವಿಗೀಡಾದ ಘಟನೆ ಪ್ರಕಾಶಂ ಜಿಲ್ಲೆಯ ಅಪಾರ್ಟ್ಮೆಂಟ್ನಲ್ಲಿ ವರದಿಯಾಗಿದೆ.
ಮೃತ ಮಹಿಳೆಯನ್ನು ವನಿತಾ (50) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ವರದಿಗಳ ಪ್ರಕಾರ, ಮಗಳು ಮತ್ತು ಮೊಮ್ಮಕ್ಕಳೊಂದಿಗೆ ಲಿಫ್ಟ್‌ನಲ್ಲಿ ಬಂದ ವನಿತಾ, ಪುತ್ರಿ ಮತ್ತು ಮೊಮ್ಮಗನ ಬಳಿಕ ಹೊರಬರಲು ಮುಂದಾದಾಗ ಲಿಫ್ಟ್ ದಿಢೀರ್ ಡೋರ್ ಮುಚ್ಚದೆಯೇ ಕೆಳಗೆ ಕುಸಿದಿದೆ. ಇದಕ್ಕಿದ್ದಂತೆ ಲಿಫ್ಟ್ ಕೆಳಗೆ ಚಲಿಸಿದ್ದರಿಂದ ಗಾಬರಿಗೊಂಡ ಮಹಿಳೆಯ ಹೊರಗೆ ಬರಲು ಯತ್ನಿಸಿದ್ದಾರೆ. ಈ ವೇಳೆ ಅವರ ಕತ್ತು ಹೊರಗೆ ಸಿಲುಕಿ, ದಾರುಣವಾಗಿ ಸಾವನ್ನಪ್ಪಿದ್ದಾರೆ.
ವನಿತಾ ಮತ್ತು ಅವರ ಪುತ್ರಿ ಸಹಾಯಕ್ಕಾಗಿ ಚೀರಾಡಿದ ಬೆನ್ನಲ್ಲೇ ಅಪಾರ್ಟ್ಮೆಂಟ್ನ ನಿವಾಸಿಗಳು ಮತ್ತು ಇತರರು ತಕ್ಷಣ ಸ್ಥಳಕ್ಕೆ ಓಡಿಬಂದು, ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ರವಾನಿಸಿದರು. ಆದರೆ, ಅದಾಗಲೇ ಉಸಿರು ಚೆಲ್ಲಿದ್ದ ವನಿತಾ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆಯು ಲಿಫ್ಟ್ ಸುರಕ್ಷತೆ, ನಿರ್ವಹಣೆ ಮತ್ತು ಅಪಾರ್ಟ್‌ಮೆಂಟ್ ಕಟ್ಟಡಗಳಲ್ಲಿನ ಸುರಕ್ಷತಾ ಕಾರ್ಯವಿಧಾನಗಳ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಲಿಫ್ಟ್ಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳಿಗೆ ಮತ್ತು ನಿರ್ವಹಣೆ ತಪಾಸಣೆಗೆ ಒಳಪಟ್ಟಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಯಾವುದೇ ನಿರ್ಲಕ್ಷ್ಯ ಅಥವಾ ತಾಂತ್ರಿಕ ವೈಫಲ್ಯವು ಅಪಘಾತಕ್ಕೆ ಕಾರಣವೇ ಎಂಬುದನ್ನೂ ತನಿಖೆ ಮಾಡಲಾಗುತ್ತಿದ್ದು, ಸಾಬೀತಾದರೆ ಅಪಾರ್ಟ್‌ಮೆಂಟ್ ಮಾಲೀಕರು ಅಥವಾ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).