ಲಾರೆನ್ಸ್ ಆಫ್ ಪಂಜಾಬ್ ವೆಬ್ ಸರಣಿ ಚಿತ್ರ 
ದೇಶ

ಲಾರೆನ್ಸ್​ ಆಫ್ ಪಂಜಾಬ್ ವೆಬ್​ ಸರಣಿ ಬ್ಯಾನ್ ಮಾಡುವಂತೆ ಕೇಂದ್ರಕ್ಕೆ ಪತ್ರ! ಕಾಂಗ್ರೆಸ್ ಮತ್ತು ಪೊಲೀಸರಿಂದ ಒತ್ತಾಯ | Lawrence of Punjab

ಚಂಡೀಗಢ: ಏ. 27ರಂದು ZEE5 ನಲ್ಲಿ ಬಿಡುಗಡೆ ಸಿದ್ಧಗೊಂಡಿರುವ ಲಾರೆನ್ಸ್ ಆಫ್ ಪಂಜಾಬ್ ವೆಬ್ ಸರಣಿ(Lawrence of Punjab) ಬ್ಯಾನ್​ ಮಾಡುವಂತೆ ಪಂಜಾಬ್ ಪೊಲೀಸ್ ಮತ್ತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಬರೆದಿರುವ ಪತ್ರದಲ್ಲಿ, ಲಾರೆನ್ಸ್ ಆಫ್ ಪಂಜಾಬ್ ಎಂಬ ಒಟಿಟಿ ಪ್ಲಾಟ್‌ಫಾರ್ಮ್ ಪ್ರಸಾರ ಮಾಡಲು ಯೋಜಿಸಿರುವ ವೆಬ್ ಸರಣಿಯ ಬಗ್ಗೆ ಧಯೆಯಿಂದ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಇದು ಪಂಜಾಬ್‌ನ ಸಾಂಸ್ಕೃತಿಕ ಗುರುತನ್ನು ಹಾನಿಗೊಳಿಸುವ ಅಪಾಯವಿದೆ ಎಂದು ಹೇಳಿದ್ದಾರೆ.
ಈ ಸರಣಿಯು ಭಯಾನಕ ಮತ್ತು ಕುಖ್ಯಾತ ಕ್ರಿಮಿನಲ್ ಮತ್ತು ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಜೀವನವನ್ನು ಆಧರಿಸಿದೆ. ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಕ್ರೂರ ಹತ್ಯೆ ಸೇರಿದಂತೆ ಹಲವು ಭೀಕರ ಅಪರಾಧಗಳಲ್ಲಿ ಭಾಗಿಯಾಗಿರುವ ಅವನನ್ನು ಈ ವೆಬ್​ ಸರಣಿ ವೈಭವಿಕರಿಸುವ ಗುರಿಯನ್ನು ಹೊಂದಿದೆ.
ಕ್ರಿಮಿನಲ್​ವೊಬ್ಬನ ದೃಷ್ಟಿಕೋನದಿಂದ ಪಂಜಾಬ್ ಅನ್ನು ಚಿತ್ರಿಸುವುದು ಅದರ ಸಾಂಸ್ಕೃತಿಕ ಪರಂಪರೆಯನ್ನು ಅವಮಾನಿಸುತ್ತದೆ. ಇದು ಯುವ ವೀಕ್ಷಕರ ಮೇಲೆ ಪ್ರಭಾವ ಬೀರಬಹುದು. ತಕ್ಷಣ ಅದನ್ನು ಬಿಡುಗಡೆ ಮಾಡದಂತೆ ತಡೆಯಲು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.

ಪಂಜಾಬ್ ಪೊಲೀಸರಿಂದಲೂ ಒತ್ತಾಯ

ಇನ್ನೂ ಪ್ರತ್ಯೇಕವಾಗಿ ಪಂಜಾಬ್ ಪೊಲೀಸರು ಸಹ, ವೆಬ್​ ಸರಣಿಯನ್ನು ನಿರ್ಬಂಧಿಸುವಂತೆ ಕೋರಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಸೈಬರ್ ಅಪರಾಧ ವಿಭಾಗದ ವಿಶೇಷ ಡಿಜಿ ವಿ ನೀರಜಾ ಅವರು ಪತ್ರ ಬರೆದಿದ್ದು, ಈ ಸರಣಿ ಸಂಘಟಿತ ಅಪರಾಧವನ್ನು ವೈಭವೀಕರಿಸಬಹುದು ಮತ್ತು ಸರಳಗೊಳಿಸಬಹುದು. ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತಕ್ಷಣ 2009ರ ನಿರ್ಬಂಧಿಸುವ ನಿಯಮಗಳ ನಿಬಂಧನೆಗಳ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A(1) ರ ಅಡಿಯಲ್ಲಿ ಈಗಾಗಲೇ ಬಿಡುಗಡೆಗೊಂಡಿರುವ ಸರಣಿಯ ಟ್ರೇಲರ್ ಅನ್ನು ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ (ಏಜೆನ್ಸೀಸ್).