ವೇಸ್ಟ್ ಬೆಂಗಾಲ್ ಸುವ್ಯವಸ್ಥಿತ ವೆಸ್ಟ್ ಬೆಂಗಾಲ್ ಆಗಲಿ 
ದೇಶ

ವೇಸ್ಟ್ ಬೆಂಗಾಲ್ ಸುವ್ಯವಸ್ಥಿತ ವೆಸ್ಟ್ ಬೆಂಗಾಲ್ ಆಗಲಿ

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು).
ಪಶ್ಚಿಮ ಬಂಗಾಳದ ಮಹಿಳೆಯರಿಗೆ ಮಾಸಿಕ 1,500 ರೂ. ನೀಡುವ ವ್ಯವಸ್ಥೆಯನ್ನು ಮಮತಾ ಬ್ಯಾನರ್ಜಿ ಸರ್ಕಾರ ಮಾಡಿತ್ತು. ಇಂತಹದಕ್ಕೆ ಜನರನ್ನು ಒಗ್ಗಿಸಿಬಿಟ್ಟರೆ ಅದನ್ನು ನಿಲ್ಲಿಸುವುದು ಬಲು ಕಷ್ಟ. ನಿಲ್ಲಿಸುವ ನೀತಿಯನ್ನು ಯಾವುದೇ ಪಕ್ಷ ಅನುಸರಿಸುತ್ತದೆಂಬ ಸೂಚನೆ ಸಿಕ್ಕಿದರೆ ಆ ಪಕ್ಷಕ್ಕೆ ಚುನಾವಣೆಯಲ್ಲಿ ಜಯ ಕನಸಿನ ಮಾತು. ಇದನ್ನರಿತ ಸುವೇಂದು ಅಧಿಕಾರಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ, ತಾನು ಅಧಿಕಾರಕ್ಕೆ ಬಂದರೆ ಆ ಸಹಯಧನವನ್ನು ನಿಲ್ಲಿಸುವುದಿಲ್ಲವೆಂದೂ, ಬದಲಿಗೆ ಅದನ್ನು 3,000 ರೂ.ಗೆ ಏರಿಸುವುದಾಗಿಯೂ ಹೇಳಿತ್ತು. ಇಂದು ಆ ಪಕ್ಷ ಪ್ರಚಂಡ ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿದೆ. ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿದ್ದಾರೆ. ‘ನಮಗೆ 1,500 ರೂ.ಗಳೂ ಬೇಡ, 3,000 ರೂ.ಗಳೂ ಬೇಡ. ನಾವು ಮತ್ತು ನಮ್ಮ ಹೆಣ್ಣುಮಕ್ಕಳು ಮನೆಯಿಂದ ಹೊರಟರೆ ಕ್ಷೇಮವಾಗಿ ಮನೆಗೆ ಹಿಂತಿರುಗುವುವಷ್ಟು ಸುರಕ್ಷೆ ನೀಡಿ’ ಎಂದು ಪಶ್ಚಿಮ ಬಂಗಾಳದ ಮಹಿಳೆಯರು ಹೇಳುತ್ತಿದ್ದಾರೆ!

ಮಹಿಳಾ ಮುಖ್ಯಮಂತ್ರಿಯ ಆಡಳಿತದಲ್ಲಿ ಮಹಿಳೆಯರು ಅದೆಂತಹ ಅಸುರಕ್ಷೆ ಅನುಭವಿಸುತ್ತಿದ್ದರು ಎನ್ನುವುದು ಇದರಿಂದ ಮನವರಿಕೆಯಾಗುತ್ತದೆ. ಸಂದೇಶ್ಖಾಲಿಯಲ್ಲಿ ಮಾಜಿ ಸಿಪಿಐ(ಎಂ) ಕಾರ್ಯಕರ್ತ, ಹಾಲಿ ಟಿಎಂಸಿ ನಾಯಕ ಷಹಜಹಾನ್ ಶೇಖ್ ಮತ್ತು ಫಾಲ್ತಾ ಕ್ಷೇತ್ರದ ಮಾಜಿ ಟಿಎಂಸಿ ಶಾಸಕ ಹಾಗೂ ಅದೇ ಕ್ಷೇತ್ರದಲ್ಲಿ ಮೇ 21ರಂದು ನಡೆಯಲಿರುವ ಚುನಾವಣೆಯಲ್ಲಿ ಅದೇ ಪಕ್ಷದ ಅಭ್ಯರ್ಥಿಯಾಗಿರುವ ಜಹಾಂಗೀರ್ ಖಾನ್ ಮಹಿಳೆಯರ ಮೇಲೆ ನಡೆಸಿದ ಅನಾಚಾರಗಳ ಒಂದಂಶವಷ್ಟೇ ಬಹಿರಂಗಗೊಂಡು ದೇಶದ ಅಂತಃಸಾಕ್ಷಿಯನ್ನೇ ಕಲಕಿಬಿಟ್ಟಿವೆ. ಬಹಿರಂಗವಾಗದ ದುಷ್ಕೃತ್ಯಗಳು ಅಗಣಿತ. ಇದು ಒಂದಿಡೀ ದಶಕದಿಂದಲೂ ನಿರಂತರವಾಗಿ ರಾಜ್ಯದೆಲ್ಲೆಡೆ, ಮುಖ್ಯವಾಗಿ ಮಧ್ಯ ಹಾಗೂ ದಕ್ಷಿಣ ಬಂಗಾಳದಲ್ಲಿ, ನಡೆಯುತ್ತಾ ಬಂದಿದೆ. ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಯವರ ಸಂಸತ್ ಕ್ಷೇತ್ರ ಡೈಮಂಡ್ ಹಾರ್ಬರ್‌ನ ಭಾಗವಾದ ಫಾಲ್ತಾ ಕ್ಷೇತ್ರದಲ್ಲಿ ಜಹಾಂಗೀರ್ ಖಾನ್ ನಡೆಸುವ ಸಭೆಗಳಲ್ಲಿ ಮಹಿಳೆಯರಿಗೇ ಒಂದು ಭಾಗ ಮೀಸಲು. ಅಲ್ಲಿ ಮುಂದಿನ ಸಾಲುಗಳಲ್ಲಿ ಕೂರಬೇಕಾಗಿದ್ದವರು ಆ ಟಿಎಂಸಿ ಸಂಸದ ಮತ್ತವನ ಹಿಂಬಾಲಕರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯರಂತೆ. ಪ್ರತಿಭಟಿಸುವ ದನಿಯೆತ್ತಲೂ ಆಗದ ಆ ನತದೃಷ್ಟೆಯರು ಅಲ್ಲಿ ಜೀವಂತ ಶವಗಳಂತೆ ಕೂರುತ್ತಿದ್ದರಂತೆ! ಇವರಲ್ಲಿ ಹಿಂದೂಗಳೂ ಇದ್ದಾರೆ, ಮುಸ್ಲಿಮರೂ ಇದ್ದಾರೆ. ಅತ್ಯಾಚಾರಿಗಳ ಕಣ್ಣಿಗೆ ಧರ್ಮ ಕಾಣುವುದಿಲ್ಲ. ಕಾಣುವುದು ಹೆಣ್ಣಿನ ದೇಹ ಮಾತ್ರ.
ರಾಜ್ಯದೆಲ್ಲೆಡೆ ಟಿಎಂಸಿ ವಿರುದ್ಧದ ಪುರುಷರ ಮನೆಯ ಮಹಿಳೆಯರು ದುಷ್ಕೃತ್ಯಗಳಿಗೆ ಬಲಿಯಾಗುವುದು ಪ್ರತಿ ಚುನಾವಣೆಯ ಸಮಯದಲ್ಲಿ ಹಾಗೂ ನಂತರ ಮಾಮೂಲಾಗಿಹೋಗಿತ್ತು. ಮಹಿಳೆಯರ ವಿರುದ್ಧದ ದುಷ್ಕೃತ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳುವುದಷ್ಟೇ ಅಲ್ಲ, ಇದುವರೆಗೆ ನಡೆದಿರುವ ಅನಾಚಾರಗಳನ್ನು ತನಿಖೆ ಮಾಡಿ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡುವ ವಾಗ್ದಾನವನ್ನೂ ರಾಜ್ಯ ಬಿಜೆಪಿ ಜನತೆಗೆ ನೀಡಿತ್ತು. ಅದರಲ್ಲಿ ಮೊದಲ ಹೆಜ್ಜೆಯನ್ನದು ಇದೇ ಮೇ 18ರಂದು ಇಟ್ಟಿದೆ. ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶೆ ಸಮಾಪ್ತಿ ಚಟರ್ಜಿಯವರ ನೇತೃತ್ವದಲ್ಲಿ ಅಪರಾಧ ಶೋಧನಾ ಸಮಿತಿಯನ್ನು ಸುವೇಂದು ಅಧಿಕಾರಿ ಸರ್ಕಾರ ರಚಿಸಿದೆ. ಸಮಿತಿ ಇದೇ ಜೂನ್ 1ರಿಂದ ಕಾರ್ಯಾರಂಭ ಮಾಡಲಿದೆ. ಸಮಿತಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುತ್ತದೆಂದು ಆಶಿಸೋಣ. ಭವಿಷ್ಯದ ಅತ್ಯಾಚಾರಿಗಳಿಗೆ, ಅವರ ಪರವಾಗಿ ನಿಂತು ಮಹಿಳೆಯರನ್ನು ಹೀನಾಯವಾಗಿ ಕಾಣುವ ರಾಜಕೀಯ ಪಕ್ಷಗಳಿಗೆ ಅದೊಂದು ಪಾಠವಾಗಲಿ.
ಮಹಿಳಾ ಟ್ರೈನಿ ಡಾಕ್ಟರ್ ಒಬ್ಬರ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣವನ್ನು ಉಲ್ಲೇಖಿಸಲೇಬೇಕು. ಮಮತಾ ಆಡಳಿತದಲ್ಲಿ ಮಹಿಳೆಯರ ಅಸುರಕ್ಷತೆ, ವ್ಯವಹಾರ, ಅವುಗಳಲ್ಲಿ ಆಡಳಿತ ಪಕ್ಷ ಹಾಗೂ ಸರ್ಕಾರದ ಪಾತ್ರ, ದುಷ್ಕೃತ್ಯದಲ್ಲಿ ಹಣದ ಪಾತ್ರ ಮತ್ತು ಕಾನೂನಿನ ತೀವ್ರ ನಿರ್ಲಕ್ಷ್ಯಗಳಿಗೆ ಇದೊಂದು ಜ್ವಲಂತ ಉದಾಹರಣೆ.
ಅತ್ಯಾಚಾರ ಹಾಗೂ ಹತ್ಯೆಯ ಅಪರಾಧಕ್ಕಾಗಿ 2025ರ ಜನವರಿಯಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಸಂಜಯ್ ರಾಯ್, ದುಷ್ಕೃತ್ಯ ನಡೆಸಿದ್ದು ‘ಮೇಲಿನವರು’, ತಾನು ನಿರಪರಾಧಿ, ತನ್ನನ್ನು ಬಲಿಪಶುವಾಗಿಸಲಾಗಿದೆ ಎಂದು ಮತ್ತೆಮತ್ತೆ ಹೇಳುತ್ತಿದ್ದಾರೆ. ದುಷ್ಕೃತ್ಯವನ್ನು ವಿರೋಧಿಸುವ ನೆಪದಲ್ಲಿ ಜಮಾಯಿಸಿದ ಜನ ಅತ್ಯಾಚಾರ ಮತ್ತು ಕೊಲೆಯ ಸಾಕ್ಷ್ಯಗಳನ್ನು ಹಾಳುಗೆಡವಿದ್ದು, ಕಾಲೇಜಿನ ಆಡಳಿತಮಂಡಳಿ ಅದಕ್ಕೆ ಅವಕಾಶ ನೀಡಿದ್ದಲ್ಲದೇ ದುಷ್ಕೃತ್ಯ ನಡೆದ ಸೆಮಿನಾರ್ ಹಾಲ್‌ನಲ್ಲಿ ಆತುರಾತುರವಾಗಿ ದುರಸ್ತಿ ಕಾರ್ಯ ಕೈಗೊಂಡದ್ದು ಇಡೀ ಪ್ರಕರಣ ಏನೋ ಮುಚ್ಚಿಹಾಕುವ ವ್ಯವಸ್ಥಿತ ಪ್ರಯತ್ನದಂತೆ ಕಾಣುತ್ತದೆ. ಹಣದ ಜತೆ ಇನ್ನಿತರ ಅವ್ಯವಹಾರಗಳು ಆ ಕಾಲೇಜಿನಲ್ಲಿ ನಡೆಯುತ್ತಿದ್ದವು, ಅವುಗಳ ಸುಳಿವು ಹೊರಬೀಳದಂತೆ ತಡೆಯುವ ಒಂದು ಪ್ರಯತ್ನವೇ ಮಹಿಳಾ ಟ್ರೈನಿ ಡಾಕ್ಟರ್ ಮೇಲಿನ ದುಷ್ಕೃತ್ಯಕ್ಕೆ ಕಾರಣ ಎಂಬ ಮಾತುಗಳು ಅಂದಿನಿಂದಲೂ ಕೇಳಿಬರುತ್ತಿವೆ. ಬಲಿಯಾದ ಮಹಿಳೆಯ ತಾಯಿಯನ್ನು ಮೌನವಾಗಿಸಲು 10 ಲಕ್ಷ ರೂ.ಗಳ ಆಮಿಷ ಒಡ್ಡಲಾಗಿತ್ತು ಎಂಬ ವಿಷಯ ವ್ಯವಸ್ಥೆ ಕುಸಿದಿದ್ದ ಕೆಳಮಟ್ಟಕ್ಕೆ ಸಾಕ್ಷಿ. ‘ನನಗೆ ಆ 10 ಲಕ್ಷ ಬೇಡ, ಬದಲಿಗೆ ನಾನೇ 20 ಲಕ್ಷ ಕೊಡುತ್ತೇನೆ, ನನಗೆ ನನ್ನ ಮಗಳನ್ನು ಕೊಡಿ’ ಎಂದು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಹೇಳಿದ ರತ್ನಾ ದೇವನಾಥ್ ಈಗ ಆ ಕ್ಷೇತ್ರದ ಬಿಜೆಪಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಮೆಡಿಕಲ್ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಡಾ. ಸಂದೀಪ್ ಘೋಷ್ ಅವರ ಮೇಲಿನ ಹಣದ ದುರ್ವ್ಯವಹಾರಗಳ ಕುರಿತಾದ ಆಪಾದನೆಗಳನ್ನು ತನಿಖೆ ಮಾಡಲು ಮಮತಾ ಬ್ಯಾನರ್ಜಿ ಮೀನಮೇಷ ಎಣಿಸುತ್ತಿದ್ದರು. ಆ ತನಿಖೆಯನ್ನು ನಡೆಸಲು ಸುವೇಂದು ಅಧಿಕಾರಿ ಸರ್ಕಾರ ಇದೇ ಮೇ 18ರಂದು ಎನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ (ಇಡಿ) ಗೆ ಅನುಮತಿ ನೀಡಿದೆ. ಇದೆಲ್ಲವೂ ಸಮರ್ಪಕವಾಗಿ ನಡೆದು ಅಪರಾಧಿಗಳಿಗೆ ಶಿಕ್ಷೆಯಾದರೆ ಬಿಜೆಪಿ ಸರ್ಕಾರದ ಮೇಲೆ ಜನರ ವಿಶ್ವಾಸ ಉಳಿಯುತ್ತದೆ. ಜನವಿರೋಧಿಗಳು, ಅಪರಾಧಿಗಳು, ಅವ್ಯವಹಾರಿಗಳು ಮತ್ತೆ ಅಧಿಕಾರಕ್ಕೆ ಬಾರದಿರುವಂತಾಗುತ್ತದೆ.
ಜನತೆಯಲ್ಲಿ ಸುರಕ್ಷೆಯ ಭಾವನೆ ಮೂಡಿಸಲು ಅಧಿಕಾರಿ ಸರ್ಕಾರ ಕೈಗೊಂಡಿರುವ ಮತ್ತೊಂದು ಮುಖ್ಯ ಕ್ರಮ ಪ್ರತಿ ಶುಕ್ರವಾರ ಸಾರ್ವಜನಿಕ ರಸ್ತೆಗಳಲ್ಲೇ ಆಯೋಜನೆಗೊಂಡು ಜನರಿಗೆ ಅನಾನುಕೂಲ ಉಂಟು ಮಾಡುತ್ತಿದ್ದ ನಮಾಜ್‌ಗಳು. ಟಿಎಂಸಿ ಸರ್ಕಾರದ ಬೆಂಬಲದಿಂದಲೇ ರಾಜ್ಯದೆಲ್ಲೆಡೆ ನಡೆಯುತ್ತಿದ್ದ ಈ ಸಾರ್ವಜನಿಕ ಪ್ರಾರ್ಥನೆಗಳನ್ನು ಅಧಿಕಾರಿ ಸರ್ಕಾರ ಪ್ರತಿಬಂಧಿಸಿದೆ. ಎಲ್ಲ ಧರ್ಮಗಳ ಪೂಜಾಸ್ಥಳಗಳಲ್ಲಿ ಲೌಡ್ ಸ್ಪೀಕರ್‌ಗಳ ಶಬ್ದವನ್ನು ಸೀಮಿತಗೊಳಿಸಲು ಆದೇಶ ಹೊರಡಿಸಲಾಗಿದೆ. ಈ ಕ್ರಮಗಳಿಗೆ ಹೆಚ್ಚಿನ ವಿರೋಧ ವ್ಯಕ್ತವಾಗದಿದ್ದುದು ಸಮಾಧಾನದ ವಿಷಯ. ಗಮನಾರ್ಹ ಪ್ರಮಾಣದಲ್ಲಿ ವಿರೋಧ ವ್ಯಕ್ತವಾದದ್ದು ಎರಡು ಸ್ಥಳಗಳಲ್ಲಿ ಮಾತ್ರ. ಕೊಲ್ಕತಾದ ಎಲ್ಲ ಕಡೆಗಳಿಂದಲೂ ಏಳು ರಸ್ತೆಗಳು ಬಂದು ಒಟ್ಟುಗೂಡುವ, ಆ ಮಹಾನಗರದ ಸಂಚಾರ ವ್ಯವಸ್ಥೆಯ ಕೇಂದ್ರೀಯ ನರಮಂಡಲವೇ ಅನಿಸುವ ಸೆವೆನ್ ಪಾಯಿಂಟ್ಸ್ ಅಥವಾ ಪಾರ್ಕ್ ಸರ್ಕಸ್ ಎಂಬ ಸ್ಥಳದಲ್ಲಿ ಪ್ರತಿ ಶುಕ್ರವಾರ ವಾಹನ ಸಂಚಾರ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿಹೋಗಿತ್ತು. ಇದೇ ಮೇ 15ರಂದು ಅಲ್ಲಿ 22 ಸಾವಿರ ಜನ ಸೇರಿ ಬಹಿರಂಗ ಪ್ರಾರ್ಥನೆಗಾಗಿ ಒತ್ತಾಯಿಸಿ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆಗಳ ಮೇಲೆ ಕಲ್ಲುತೂರಾಟ ಆರಂಭಿಸಿ ಹಲವರನ್ನು ಗಾಯಗೊಳಿಸಿದಾಗ ಲಾಠಿಚಾರ್ಜ್ ಆರಂಭಿಸುವ ಕ್ರಮವನ್ನು ಸಿಆರ್‌ಪಿಎಫ್ ಅಧಿಕಾರಿ ಕೈಗೊಂಡರು. ಜತೆಗೆ ಗಲಭೆಕೋರರ 40ಕ್ಕಿಂತಲೂ ಹೆಚ್ಚು ಮುಂದಾಳುಗಳನ್ನು ಬಂಧಿಸಿದ ಮೇಲೆ ಪರಿಸ್ಥಿತಿ ತಹಬಂದಿಗೆ ಬಂತು.
ಅತ್ತ ಅಸಾನ್ಸೋಲ್ ನಗರದ ಜಹಾಂಗೀರ್ ಮೊಹಲ್ಲಾದಲ್ಲಿ ಲೌಡ್ ಸ್ಪೀಕರ್ ಶಬ್ದಮಿತಿಯನ್ನು ವಿರೋಧಿಸಿ ಒಂದಷ್ಟು ಜನ ಸ್ಥಳೀಯ ಪೊಲೀಸ್ ಠಾಣೆಯ ಮೇಲೇ ದಾಳಿ ಮಾಡಿ ಆಸ್ತಿಪಾಸ್ತಿಗೆ ಹಾನಿಯೆಸಗಿದರು. ಪರಿಣಾಮವಾಗಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಆದ ಹಾನಿಯನ್ನು ಹಾನಿಯೆಸಗಿದವರ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಭರಿಸಲಾಗುವುದು ಎಂದು ಮುಖ್ಯಮಂತ್ರಿ ಅಧಿಕಾರಿ ಘೋಷಿಸಬೇಕಾಯಿತು. ನಂತರ ಅಲ್ಲೂ ಶಾಂತಿ. ಒಟ್ಟಾರೆ ಪ್ರಾರ್ಥನೆಗಾಗಿ ರಸ್ತೆ ತಡೆ ಇನ್ನುಮುಂದೆ ನಿಲ್ಲುವುದು ನಿಶ್ಚಿತ.
ಕಮ್ಯೂನಿಸ್ಟರ ಕಾಲದಲ್ಲೇ ಆರಂಭಗೊಂಡಿದ್ದ ಲ್ಯಾಂಡ್ ಮಾಫಿಯಾ, ಸ್ಯಾಂಡ್ ಮಾಫಿಯಾ, ಮೆಡಿಕಲ್ ಮಾಫಿಯಾ, ಫಾರ್ಮಾ ಮಾಫಿಯಾಗಳು ಟಿಎಂಸಿ ಆಡಳಿತಾವಧಿಯಲ್ಲಿ ಮತ್ತಷ್ಟು ಹುಲುಸಾಗಿ ಬೆಳೆದವು. ಅವುಗಳ ಸೂತ್ರಧಾರರು ಮತ್ತು ಫಲಾನುಭವಿಗಳು ಟಿಎಂಸಿ ನೇತಾರರು ಮತ್ತು ಕಾರ್ಯಕರ್ತರೇ. ಕೇವಲ ಸಂಸತ್ ಸದಸ್ಯರಾಗಿರುವ ಅಭಿಷೇಕ್ ಬ್ಯಾನರ್ಜಿ ಕೊಲ್ಕತಾ ನಗರದಲ್ಲೇ ನೂರು ಕೋಟಿಗೂ ಹೆಚ್ಚಿನ ಮೌಲ್ಯದ 24 ದೊಡ್ಡ ಆಸ್ತಿಗಳನ್ನು ಹೊಂದಿದ್ದಾರಂತೆ. ಈಗ ಅವುಗಳ ಕುರಿತಾಗಿ ಅಧಿಕಾರಿ ಸರ್ಕಾರ ತನಿಖೆ ಆರಂಭಿಸಲಿದೆ. ಮುನಿಸಿಪಾಲಿಟಿ ಹುದ್ದೆಗಳ ಅವ್ಯವಹಾರ ನಡೆಸಿದ್ದರೆನ್ನಲಾದ ಮಾಜಿ ಟಿಎಂಸಿ ಮಂತ್ರಿ ಸುಜಿತ್ ಬಸು ಅವರನ್ನು ಈಗಾಗಲೇ ಬಂಧಿಸಿ ತನಿಖೆಗೊಳಪಡಿಸಲಾಗಿದೆ. ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವೆಸಗಿ ತಾವೂ ಅಪಾರ ಹಣ ಮಾಡಿಕೊಂಡದ್ದಲ್ಲದೆ ಗೆಳತಿಯ ಅಪಾರ್ಟ್‌ಮೆಂಟ್‌ನಲ್ಲಿ 50 ಕೋಟಿಯಷ್ಟು ಹಣ ಅಡಗಿಸಿಟ್ಟು ನಂತರ ಕಾರಾಗೃಹ ಸೇರಿದ ಮಾಜಿ ಶಿಕ್ಷಣ ಮಂತ್ರಿ ಪಾರ್ಥೋ ಚಟರ್ಜಿಯವರ ವಿರುದ್ಧ ನಿಜವಾದ ತನಿಖೆ ಇನ್ನು ಆರಂಭವಾಗಬಹುದು. ಟಿಎಂಸಿ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರಗಳನ್ನು ತನಿಖೆಗೊಳಪಡಿಸಲಾಗುವುದು ಎನ್ನುವುದು ಬಿಜೆಪಿ ಚುನಾವಣಾ ವಾಗ್ದಾನಗಳಲ್ಲೊಂದು. ಅದಕ್ಕನುಗುಣವಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಅಧ್ಯಕ್ಷತೆಯಲ್ಲಿ ಸಮಿತಿಯೊಂದು ಮೇ 18ರಂದು ರಚನೆಯಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರದ ಕೊಳೆಯನ್ನು ತೊಳೆಯುವುದು ಹೀಗೆ ಆರಂಭವಾಗಿದೆ.
1960ರ ದಶಕದವರೆಗೂ ಪಶ್ಚಿಮ ಬಂಗಾಳ ವಾರ್ಷಿಕ ಆದಾಯದಲ್ಲಿ ದೇಶದಲ್ಲಿ ಮೂರನೆಯ ಸ್ಥಾನದಲ್ಲಿತ್ತು. ಈಗ ಅದು 17ನೇ ಸ್ಥಾನಕ್ಕಿಳಿದಿದೆ. ಅಪಾರ ಸಂಪನ್ಮೂಲಗಳ ಆ ರಾಜ್ಯದಲ್ಲಿ ಮೊದಲಿಗೆ ಕೈಗಾರಿಕೆಗಳನ್ನು ಹೊರಗಟ್ಟಿದ್ದು ಕಮ್ಯೂನಿಸ್ಟ್ ಸರ್ಕಾರ. ಅದಕ್ಕಾಗಿ ಅದು ಅನುಸರಿಸಿದ ವಿಧಾನಗಳಲ್ಲಿ ಕರಾಳವಾದದ್ದು ಕೈಗಾರಿಕೋದ್ಯಮಿಗಳನ್ನು ಬೆದರಿಸಿ ಓಡಿಸುವುದು. 1993ರಲ್ಲಿ ಘಟಿಸಿದ ಅಂತಹ ಒಂದು ಕೃತ್ಯದಲ್ಲಿ ದೇಶದ ಅತ್ಯಂತ ಹಿರಿಯ ಕೈಗಾರಿಕಾ ಪರಿವಾರವೊಂದರ ಪ್ರಮುಖ ಉದ್ಯಮಿಯೊಬ್ಬರನ್ನು (ಉದ್ದೇಶಪೂರ್ವಕವಾಗಿ ಅವರ ಹೆಸರನ್ನು ನಾನಿಲ್ಲಿ ಬಹಿರಂಗಗೊಳಿಸುತ್ತಿಲ್ಲ) ಕಮ್ಯೂನಿಸ್ಟ್ ಕಾರ್ಯಕರ್ತರು ಸರ್ಕಾರದ ಕೇಂದ್ರ ರೈಟರ್ಸ್ ಬಿಲ್ಡಿಂಗ್ ಮುಂದೆಯೇ ಅರೆಬೆತ್ತಲೆಗೊಳಿಸಿ ಹಲ್ಲೆಗೈದರು. ಹೇಗೋ ಬಚಾವಾದ ಅವರು ಹತ್ತಿರದ ಕಟ್ಟಡವೊಂದರೊಳಗೆ ಹೋಗಿ ನಂತರ ಸರಿಯಾದ ಬಟ್ಟೆ ಧರಿಸಿ ನಗರದಿಂದ ಹೊರಹೋಗುವುದರಲ್ಲಿ ಯಶಸ್ವಿಯಾದರು. ಅದಾದ ಕೆಲವೇ ದಿನಗಳಲ್ಲಿ ಅವರು ಪಶ್ಚಿಮ ಬಂಗಾಳದಲ್ಲಿನ ತಮ್ಮೆಲ್ಲ ವ್ಯವಹಾರಗಳನ್ನು ಮುಂಬೈಗೆ ಸ್ಥಳಾಂತರಿಸಿದರು. ಎಡಪಂಥೀಯರ ಹಿಡಿತದಲ್ಲಿದ್ದ ಆಂಗ್ಲ ಸುದ್ದಿಮಾಧ್ಯಮ ಇದನ್ನು ಸರಿಯಾಗಿ ದೇಶಕ್ಕೆ ತಿಳಿಸಲಿಲ್ಲ. ಆದರೆ ಪ್ರಕರಣಕ್ಕೆ ಸಾಕ್ಷಿಯಾದವರು ಕೊಲ್ಕತಾದಲ್ಲಿ ಇನ್ನೂ ಇದ್ದಾರೆ.
ರಾಜ್ಯದಲ್ಲಿ ಕೈಗಾರಿಕೆಗಳನ್ನು ನಾಶಮಾಡುವ ಕೃತ್ಯವನ್ನು ಟಿಎಂಸಿ ಮುಂದುವರೆಸಿತು. ಆದಾಯ ಕಳೆದುಕೊಂಡ ಜನರಿಗೆ ಪುಕ್ಕಟೆಗಳನ್ನು ನೀಡುವ ಮೂಲಕ ಎರಡೂ ಪಕ್ಷಗಳ ಸರ್ಕಾರಗಳು ಅವರನ್ನು ವೋಟ್‌ಬ್ಯಾಂಕ್ ಮಾಡಿಕೊಂಡು ಮತ್ತೆಮತ್ತೆ ಚುನಾವಣೆಗಳನ್ನು ಗೆಲ್ಲುತ್ತ ಹೋದವು. ಅದಿನ್ನು ಅಂತ್ಯವಾಗಬೇಕಾಗಿದೆ. ಜನರಿಗೆ ಸ್ವಂತ ದುಡಿಮೆಯ ಬೆಲೆ ಅರಿಯುವುದನ್ನು ಮತ್ತದರಿಂದ ದೊರೆಯುವ ಆತ್ಮತೃಪ್ತಿ, ಆತ್ಮಗೌರವ ಅನುಭವಿಸುವುದನ್ನು ಅಧಿಕಾರಿ ಸರ್ಕಾರ ಜನತೆಗೆ ಕಲಿಸಬೇಕಾಗಿದೆ. ಅದಕ್ಕಾಗಿ ರಾಜ್ಯವನ್ನು ತೊರೆದುಹೋದ 65,000ಕ್ಕೂ ಹೆಚ್ಚಿನ ಕೈಗಾರಿಕೆಗಳನ್ನು ಮತ್ತೆ ಕರೆತರಬೇಕಾಗಿದೆ. ಅದಾಗಬೇಕಾದರೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸದೃಢವಾಗಬೇಕು, ಹೂಡಿದ ಬಂಡವಾಳ ಹೊಳೆಯಲ್ಲಿ ತೊಳೆದುಹೋದ ಹುಣಿಸೆಹಣ್ಣಾಗುವುದಿಲ್ಲ, ರಾಜ್ಯದಲ್ಲಿ ಲಾಭಕರವಾಗಿ ಉದ್ದಿಮೆಗಳನ್ನು ನಡೆಸಬಹುದು ಎಂಬ ನಂಬಿಕೆ ಉದ್ದಿಮೆದಾರರಲ್ಲಿ ಮೂಡಬೇಕು. ಅದಿಗೆ ಸಮಯ ಹಿಡಿಯುತ್ತದೆ. ಒಂದುಕಾಲದ ಅರಾಜಕ ಉತ್ತರಪ್ರದೇಶ ಯೋಗಿ ಆದಿತ್ಯನಾಥರ ಆಡಳಿತಕ್ರಮಗಳಿಂದ ಈಗ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಹೆಸರಾಗಿದ್ದರೂ ಖಾಸಗಿ ಉದ್ದಿಮೆದಾರರು ಅಲ್ಲಿಗೆ ಹೋಗಲು ಇನ್ನೂ ಮನಸ್ಸು ಮಾಡುತ್ತಿಲ್ಲ. ಆ ರಾಜ್ಯದ ಅನುಭವ ಸುವೇಂದು ಅಧಿಕಾರಿ ಸರ್ಕಾರಕ್ಕೆ ಪಾಠವಾಗುತ್ತದೆ. ಅದರ ಮುಂದಿನ ಹಾದಿ ಕಠಿಣ ಹಾಗೂ ದೀರ್ಘ. ಜನರ ನಂಬಿಕೆ ಗಳಿಸಿ ಮುಂದಿನ ಕನಿಷ್ಠ 2 ಅವಧಿಗಳನ್ನಾದರೂ ಅದು ಗಳಿಸಿಕೊಂಡು ಪ್ರಗತಿಯ ಭದ್ರ ಬುನಾದಿ ಹಾಕಿದರೆ ಕಮ್ಯೂನಿಸ್ಟರು ಮತ್ತು ಟಿಎಂಸಿ ದುರಾಡಳಿತದಿಂದ ‘ವೇಸ್ಟ್ ಬೆಂಗಾಲ್’ ಆಗಿರುವ ರಾಜ್ಯವನ್ನು ಮತ್ತೆ ಸುವ್ಯವಸ್ಥಿತ, ಶ್ರೀಮಂತ ವೆಸ್ಟ್ ಬೆಂಗಾಲ್ ಆಗಿಸಬಹುದು.