ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್, ನಟಿ ತ್ರಷಾ ಕೃಷ್ಣನ್​, ತಳಪತಿ ವಿಜಯ್​ 
ದೇಶ

ತ್ರಿಶಾ ಮನೆಯಿಂದ ಆಚೆ ಬಂದು ವಿಜಯ್ ಕುಟುಂಬ ಸರಿಪಡಿಸಿಕೊಳ್ಳಲಿ; ಕಿಡಿ ಹೊತ್ತಿಸಿದ ಬಿಜೆಪಿ ಅಧ್ಯಕ್ಷ ನಾಗೇಂದ್ರನ್; ನಟಿ ತ್ರಿಶಾ ಹೇಳಿದ್ದೇನು? | Trisha Krishnan

ಚೆನ್ನೈ: ಮುಂಬರುವ ತಮಿಳುನಾಡು ಚುನಾವಣೆಗೆ ಹೊಸದಾಗಿ ಪಕ್ಷ ಕಟ್ಟಿ ರಾಜಕಾರಣದಲ್ಲಿ ಧೂಳೆಬ್ಬಿಸಿರುವ ನಟ ದಳಪತಿ ವಿಜಯ್ ಅವರನ್ನು ನಟಿ ತ್ರಿಶಾ(Trisha Krishnan) ಹೆಸರಿನ ಜೊತೆ ಗುರಿಯಾಗಿಸಿ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರ ನೀಡಿದ ಹೇಳಿಕೆ ರಾಜ್ಯದಲ್ಲಿ ತೀವ್ರ ರಾಜಕೀಯ ಕೋಲಾಹಲವನ್ನೇ ಸೃಷ್ಟಿಸಿದೆ. ಪಕ್ಷಾತೀತವಾಗಿ ಹೇಳಿಕೆ ವಿರುದ್ಧ ಖಂಡನೆ ವ್ಯಕ್ತವಾಗಿದೆ.
ಶುಕ್ರವಾರ ಸೇಲಂನಲ್ಲಿ ಪಕ್ಷದ ಸಮಾರಂಭದಲ್ಲಿ ಮಾತನಾಡಿದ್ದ ದಳಪತಿ ವಿಜಯ್, ತಮಿಳುನಾಡಿನಲ್ಲಿ ಡಿಎಂಕೆಗೆ ಪ್ರಮುಖ ವಿರೋಧಿ ಟಿವಿಕೆ ಮಾತ್ರ. ನಮ್ಮ ಪಕ್ಷವು ರಾಜ್ಯದಲ್ಲಿ ಶೇ. 30ರಷ್ಟು ಮತದಾರರನ್ನು ಹೊಂದಿದೆ ಎಂದು ಹೇಳಿದ್ದರು. 
ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್, ವಿಜಯ್ ಅವರಿಗೆ ರಾಜಕೀಯ ಅನುಭವವಿಲ್ಲ. ಟಿವಿಕೆ ಪಕ್ಷಕ್ಕೆ ಒಬ್ಬ ಕೌನ್ಸಿಲರ್ ಕೂಡ ಇಲ್ಲ. ಮೊದಲು ಅವರು ನಟಿ ತ್ರಿಶಾ ಮನೆಯಿಂದ ಹೊರಬಂದು, ತಮ್ಮ ಸ್ವಂತ ಕುಟುಂಬದೊಂದಿಗೆ ಸಂಬಂಧವನ್ನು ಸರಿಪಡಿಸಿಕೊಳ್ಳಬೇಕು. ಮೊದಲು ಕುಟುಂಬದ ವ್ಯಕ್ತಿಯಾಗಬೇಕು. ನಂತರ ಪಕ್ಷವನ್ನು ಮುನ್ನಡೆಸಬಹುದು ಎಂದು ಹೇಳಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಪಕ್ಷಾತೀತವಾಗಿ ನಾಗೇಂದ್ರನ್ ಹೇಳಿಕೆಗೆ ಖಂಡನೆ

ಇನ್ನೂ ವಿಜಯ್ ಜೊತೆ ನಟಿ ತ್ರಿಶಾ ಹೆಸರು ಬಳಸಿ ನೈನಾರ್ ನಾಗೇಂದ್ರನ್ ನೀಡಿರುವ ಈ ಹೇಳಿಕೆ ಈದೀಗ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದು, ಹಲವಾರು ರಾಜಕೀಯ ನಾಯಕರು ಈ ಹೇಳಿಕೆ ನಾಗೇಂದ್ರನ್ ಅವರ ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಟಿವಿಕೆಯ ಜಂಟಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಮಾತನಾಡಿ, ರಾಜಕೀಯ ಪಕ್ಷವೊಂದರಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಇಂತಹ ಅನಾಗರಿಕ ಹೇಳಿಕೆಗಳನ್ನು ನೀಡುತ್ತಿರುವುದು ದುರದೃಷ್ಟಕರ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಇನ್ನೂ ಕೆಟ್ಟದಾಗಿ ಸೋಲುತ್ತದೆ ಎಂದು ಕಿಡಿಕಾರಿದ್ದಾರೆ.
ಡಿಎಂಕೆ ವಕ್ತಾರ ಟಿಕೆಎಸ್ ಎಳಂಗೋವನ್, ಬಿಜೆಪಿಯವರು ಮಹಿಳೆಯರಿಗೆ ಎಂದಿಗೂ ಗೌರವ ನೀಡದ ಮನು ಧರ್ಮವನ್ನು ಪಾಲಿಸುವ ಕಾರಣ, ಸ್ವಾಭಾವಿಕವಾಗಿ ನಾಗೇಂದ್ರನ್​ ಈ ರೀತಿ ಮಾತನಾಡಿದ್ದಾರೆ, ಇದೇ ಕಾರಣಕ್ಕೆ ತಮಿಳುನಾಡಿನ ಜನರು ಬಿಜೆಪಿಯನ್ನು ವಿರೋಧಿಸುತ್ತಾರೆ ಎಂದು ಹೇಳಿದ್ದಾರೆ.

ನಟಿ ತ್ರಿಶಾ ಹೇಳಿದ್ದೇನು?

ಇನ್ನೂ ವಿಜಯ್ ಜೊತೆ ತಮ್ಮ ಹೆಸರು ಬಳಿಸಿ ಹೇಳಿಕೆ ನೀಡಿದ್ದನ್ನು ಸಾರ್ವಜನಿಕವಾಗಿ ಖಂಡಿಸಿರುವ ಬಹುಭಾಷಾ ನಟಿ ತ್ರಿಷಾ ಕೃಷ್ಣನ್, ಅಗೌರವವನ್ನು ಯಾವಾಗಲೂ ಖಂಡಿಸಬೇಕು ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಿರುವ ತ್ರಿಶಾ, ತಮ್ಮ ಕಾನೂನು ಸಲಹೆಗಾರ ನಿತ್ಯೇಶ್ ನಟರಾಜ್ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಎಲ್ಲೂ ಕೂಡ ರಾಜಕೀಯ ನಾಯಕರ ಹೆಸರನ್ನು ಎತ್ತದೇ ಪ್ರತಿಕ್ರಿಯೆ ನೀಡಿದ್ದಾರೆ.
ನಿತ್ಯೇಶ್ ನಟರಾಜ್ ಅವರ ಪತ್ರಿಕಾ ಹೇಳಿಕೆಯಲ್ಲಿ, ನನ್ನ ಕಕ್ಷಿದಾರ(ತ್ರಿಶಾ) ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಹೊಂದಿರುವ ವ್ಯಕ್ತಿಯಿಂದ ಇಂತಹ ಅಸಹ್ಯಕರ ಮತ್ತು ಅನುಚಿತ ಹೇಳಿಕೆಯನ್ನು ಮಾಡುತ್ತಾರೆಂದು ಎಂದಿಗೂ ನಿರೀಕ್ಷಿಸಿರಲಿಲ್ಲ. ಅವರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಮತ್ತು ಆಗುವ ಉದ್ದೇಶವೂ ಇಲ್ಲ. ರಾಜಕೀಯದ ವಿಷಯಕ್ಕೆ ಬಂದಾಗ ನಟಿ ಯಾವಾಗಲೂ ತಟಸ್ಥ ನಿಲುವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಆದರೆ ನನ್ನ ಕಕ್ಷಿದಾರರು ತಮ್ಮ ಕಲೆಯಿಂದ ಮಾತ್ರ ಗುರುತಿಸಲ್ಪಡುತ್ತಾರೆ. ಮತ್ತು ಯಾವುದೇ ಆಪಾದಿತ ರಾಜಕೀಯ ಹೊಂದಾಣಿಕೆಯಿಂದಲ್ಲ. ಮತ್ತು ಮುಖ್ಯವಾಗಿ, ವೈಯಕ್ತಿಕ ಜೀವನವನ್ನು ಎಂದಿಗೂ ಸಾರ್ವಜನಿಕ ವ್ಯಾಖ್ಯಾನ ಅಥವಾ ಚರ್ಚೆಯ ವಿಷಯವನ್ನಾಗಿ ಮಾಡಬಾರದು ಎಂಬುದು ಸಾಮಾನ್ಯ ಮಾತು, ಮತ್ತು ಉನ್ನತ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳು ಸಾರ್ವಜನಿಕ ಚರ್ಚೆಯಲ್ಲಿ ಜವಾಬ್ದಾರಿ ಮತ್ತು ಸಮಚಿತ್ತತೆಯನ್ನು ಕಾಯ್ದುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ. ನನ್ನ ಕಕ್ಷಿದಾರರ ಹೆಸರನ್ನು ಅವರಿಗೆ ಸಂಬಂಧಿಸದ ವಿಷಯಗಳಲ್ಲಿ ಸೇರಿಸಬಾರದು ಎಂದು ವಿನಂತಿ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).