equal society 
ದೇಶ

ಸಂಪಾದಕೀಯ: ಸಮ ಸಮಾಜಕ್ಕೆ ನಾಂದಿಯಾಗಲಿ

ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಒಳಮೀಸಲಾತಿ ಎಂಬುದು ಹಲವು ದಶಕಗಳ ಕಾಲದ ಸಂಘರ್ಷ ಮತ್ತು ಆಶಯಗಳ ಪ್ರತಿಬಿಂಬವಾಗಿದೆ. ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳಮೀಸಲಾತಿಯನ್ನು ಜಾರಿಗೊಳಿಸಲು ಇದೀಗ ಗಂಭೀರ ಹೆಜ್ಜೆ ಇಟ್ಟಿರುವುದು ಅತ್ಯಂತ ಸ್ವಾಗತಾರ್ಹ ಸಂಗತಿ. ಇದು ಕೇವಲ ಒಂದು ಆಡಳಿತಾತ್ಮಕ ತೀರ್ವನವಲ್ಲ; ಮೀಸಲಾತಿಯ ಫಲದಿಂದ ವಂಚಿತರಾದ ಕಟ್ಟಕಡೆಯ ಸಮುದಾಯಗಳಿಗೆ ನ್ಯಾಯ ಒದಗಿಸುವ ದಿಸೆಯಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ.
ಪರಿಶಿಷ್ಟ ಜಾತಿಯಡಿಯಲ್ಲಿ ಬರುವ ನೂರಕ್ಕೂ ಹೆಚ್ಚು ಉಪಜಾತಿಗಳಲ್ಲಿ ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿ ಸಮಾನವಾಗಿ ಹಂಚಿಕೆಯಾಗಿಲ್ಲ ಎಂಬುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದಂತಹ ಕಹಿ ಸತ್ಯ. ಮೀಸಲಾತಿಯ ಬಹುಪಾಲು ಲಾಭಗಳು ಸಂಘಟಿತ ಮತ್ತು ಪ್ರಭಾವಿಯಾಗಿರುವ ಉಪಜಾತಿಗಳಿಗೆ ಸೀಮಿತವಾಗಿದ್ದರೆ, ಅಸ್ಪೃ್ಯ ಹಾಗೂ ಅಲೆಮಾರಿ ಸಮುದಾಯಗಳು ಇಂದಿಗೂ ಸಮಾಜದ ಮುಖ್ಯವಾಹಿನಿಯಿಂದ ಹೊರಗೇ ಉಳಿದಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯೂ ಸೇರಿದಂತೆ ಹಲವು ಹೋರಾಟಗಳು ನಡೆದಿದ್ದವು. ಈಗ ಸುಪ್ರೀಂ ಕೋರ್ಟ್​ನ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಈ ವರ್ಗೀಕರಣ ಮಾಡಲು ಕಾನೂನಾತ್ಮಕ ಬಲ ಸಿಕ್ಕಿದೆ.
ಆದರೆ, ಈ ಪ್ರಕ್ರಿಯೆ ಕೇವಲ ರಾಜಕೀಯ ಲಾಭದ ದೃಷ್ಟಿಯಿಂದ ಮಾಡುವ ಓಲೈಕೆ ಆಗಬಾರದು. ಒಳಮೀಸಲಾತಿಯ ಹಂಚಿಕೆ ಸಂಪೂರ್ಣವಾಗಿ ವೈಜ್ಞಾನಿಕ ದತ್ತಾಂಶ ಮತ್ತು ಸುಪ್ರೀಂ ಕೋರ್ಟ್​ನ ಮಾರ್ಗಸೂಚಿಗಳ ಆಧಾರದ ಮೇಲೆ ನಡೆಯಬೇಕು. ಯಾವ ಸಮುದಾಯ ಎಷ್ಟು ಜನಸಂಖ್ಯೆ ಹೊಂದಿದೆ ಮತ್ತು ಆಯಾ ಸಮುದಾಯಗಳು ಇದುವರೆಗೆ ಪಡೆದಿರುವ ಪ್ರಾತಿನಿಧ್ಯ ಎಷ್ಟು ಎಂಬ ನಿಖರ ಅಂಕಿ-ಅಂಶಗಳು ಈ ನಿರ್ಧಾರಕ್ಕೆ ಆಧಾರವಾಗಬೇಕು. ಇಲ್ಲದಿದ್ದರೆ, ಇದು ಕಾನೂನು ಸಂಘರ್ಷಗಳಿಗೆ ದಾರಿ ಮಾಡಿಕೊಡುವುದಲ್ಲದೆ, ಸಾಮಾಜಿಕ ಅಸ್ಥಿರತೆಗೂ ಕಾರಣವಾಗಬಹುದು.
ಎಲ್ಲಕ್ಕಿಂತ ಮುಖ್ಯವಾಗಿ, ಒಳಮೀಸಲಾತಿಯು ದಲಿತ ಸಮುದಾಯಗಳ ಒಗ್ಗಟ್ಟನ್ನು ಮುರಿಯುವ ಅಸ್ತ್ರವಾಗಬಾರದು. ಒಂದು ವರ್ಗಕ್ಕೆ ನ್ಯಾಯ ನೀಡುವಾಗ ಮತ್ತೊಂದು ವರ್ಗಕ್ಕೆ ಅನ್ಯಾಯವಾಗುತ್ತಿದೆ ಎಂಬ ಭಾವನೆ ಮೂಡದಂತೆ ಸರ್ಕಾರ ಎಚ್ಚರ ವಹಿಸಬೇಕು. ಸಮುದಾಯಗಳ ನಡುವೆ ಒಡಕು ಮೂಡಿಸುವ ಶಕ್ತಿಗಳ ಬಗ್ಗೆ ಜಾಗರೂಕರಾಗಿರುವುದು ಇಂದಿನ ತುರ್ತು ಅಗತ್ಯ. ದಲಿತ ಚಳವಳಿಯ ಮೂಲ ಆಶಯವಾದ ‘ಸಮಾನತೆ’ ಈ ಪ್ರಕ್ರಿಯೆಯಲ್ಲಿ ಮರೆಯಾಗಬಾರದು.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅನ್ವಯಿಸುವಾಗ, ಕೇವಲ ಅಂಕಿ-ಅಂಶಗಳನ್ನಷ್ಟೇ ಅಲ್ಲದೆ, ಸಾಮಾಜಿಕ ನ್ಯಾಯದ ಮಾನವೀಯ ಮುಖವನ್ನೂ ಸರ್ಕಾರ ಪರಿಗಣಿಸಬೇಕು. ಉದ್ಯೋಗ ಮತ್ತು ಶಿಕ್ಷಣದಲ್ಲಿನ ಅವಕಾಶಗಳು ನಿಜವಾದ ಅರ್ಹರಿಗೆ ಮತ್ತು ಇದುವರೆಗೆ ವಂಚಿತರಾದವರಿಗೆ ತಲುಪಿದಾಗ ಮಾತ್ರ ಮೀಸಲಾತಿಯ ಉದ್ದೇಶ ಸಾರ್ಥಕವಾಗುತ್ತದೆ.
ಒಟ್ಟಾರೆ, ಒಳಮೀಸಲಾತಿ ಜಾರಿ ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ, ಇಡೀ ಶೋಷಿತ ವರ್ಗದ ಸಬಲೀಕರಣಕ್ಕೆ ನಾಂದಿಯಾಗಬೇಕು. ಸರ್ಕಾರ ಸಂಪೂರ್ಣ ಪಾರದರ್ಶಕತೆ ಕಾಪಾಡಿಕೊಂಡು, ಎಲ್ಲ ಸಮುದಾಯಗಳ ವಿಶ್ವಾಸವನ್ನು ಗಳಿಸುವ ಮೂಲಕ ಈ ಐತಿಹಾಸಿಕ ನಿರ್ಧಾರವನ್ನು ಅನುಷ್ಠಾನಕ್ಕೆ ತರಬೇಕು. ಆಗ ಮಾತ್ರ ನಾವು ಹಂಬಲಿಸುವ ‘ಸಮ ಸಮಾಜ’ದ ನಿರ್ಮಾಣ ಸಾಧ್ಯ.