Mallikarjun Kharge | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 
ದೇಶ

ಪತ್ರ ಬರಲಿ, ನಮ್ಮವರು ಉತ್ತರಿಸುತ್ತಾರೆ.. ಚುನಾವಣಾ ಆಯೋಗದ ಶೋಕಾಸ್ ನೋಟಿಸ್‌ಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಪ್ರತಿಕ್ರಿಯೆ! | Mallikarjun Kharge

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ (MallikarjunKharge) ಕೇಂದ್ರ ಚುನಾವಣಾ ಆಯೋಗವು ಬುಧವಾರ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖರ್ಗೆ, ನೋಟಿಸ್ ಬರಲಿ, ಅದಕ್ಕೆ ಸಂಜೆ ನಾವು ಉತ್ತರಿಸುತ್ತೇವೆ. ನಮ್ಮ ಜನರು (ಕಾನೂನು ತಂಡ) ಅದಕ್ಕೆ ಸಿದ್ಧರಾಗಿದ್ದಾರೆ ಎಂದು ಹೇಳಿದರು.
ಪ್ರಧಾನಿ ವಿರುದ್ಧದ ಈ ಹೇಳಿಕೆಯು ಮೇಲ್ನೋಟಕ್ಕೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗವು ಅಭಿಪ್ರಾಯಪಟ್ಟಿದ್ದು, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ.
ನೋಟಿಸ್‌ಗೆ ಪ್ರತಿಕ್ರಿಯಿಸಲು ಖರ್ಗೆ ಅವರಿಗೆ 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ತಮ್ಮ ನಿಲುವನ್ನು ವಿವರಿಸಲು ವಿಫಲವಾದರೆ, ಈ ವಿಷಯದಲ್ಲಿ ಅವರಿಗೆ ಹೇಳಲು ಏನೂ ಇಲ್ಲ ಎಂದು ಭಾವಿಸಲಾಗುವುದು ಮತ್ತು ಆಯೋಗವು ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದೆ.
ಈ ಪ್ರಕರಣದಲ್ಲಿ ಚುನಾವಣಾ ಆಯೋಗದ ಪ್ರಕ್ರಿಯೆಯು ಕೆಲವು ಕುತೂಹಲಕಾರಿ ತಿರುವುಗಳನ್ನು ಪಡೆದುಕೊಂಡಿತು. ಆರಂಭದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಟಿಎಂಸಿ ನಾಯಕ ಡೆರೆಕ್ ಒಬ್ರೇನ್ ದೂರುದಾರರು ಎಂದು ಉಲ್ಲೇಖಿಸಿ ಆಯೋಗವು ನೋಟಿಸ್ ನೀಡಿತ್ತು. ಇದಾದ ಬಳಿಕ ತನ್ನ ವೆಬ್‌ಸೈಟ್‌ನಿಂದ ಆ ನೋಟಿಸ್ ಹಿಂತೆಗೆದುಕೊಂಡು, ಡೆರೆಕ್ ಒ'ಬ್ರೇನ್ ಹೆಸರನ್ನು ತೆಗೆದುಹಾಕಿ ಹೊಸದಾಗಿ ನೋಟಿಸ್ ಜಾರಿ ಮಾಡಿದೆ.

ವಿವಾದದ ಹಿನ್ನೆಲೆ

ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ಕಟುವಾಗಿ ಟೀಕಿಸುವ ಸಂದರ್ಭದಲ್ಲಿ ಖರ್ಗೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪೆರಿಯಾರ್ ಮತ್ತು ಅಣ್ಣಾದೊರೈ ಅವರ ದ್ರಾವಿಡ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟ ಎಐಎಡಿಎಂಕೆ ಜನರು ಮೋದಿ ಅವರೊಂದಿಗೆ ಹೇಗೆ ಕೈಜೋಡಿಸುತ್ತಾರೆ? ಅವರು ಒಬ್ಬ ಭಯೋತ್ಪಾದಕ ಎಂದು ಹೇಳಿದ್ದರು.

ನಾನು ಹೇಳಿದ್ದು ಬೇರೆ ರೀತಿ ಎಂದ ಖರ್ಗೆ

ಇತ್ತ ತಮ್ಮ ಹೇಳಿಕೆಯಿಂದ ಸೃಷ್ಟಿಯಾದ ವಿವಾದದ ಬಗ್ಗೆ ಕಲ್ಬುರ್ಗಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ತಮ್ಮ ಮಾತುಗಳನ್ನು ಅಕ್ಷರಶಃ ತೆಗೆದುಕೊಳ್ಳಬಾರದು, ರಾಜಕೀಯ ವಿರೋಧಿಗಳಲ್ಲಿ ಭಯ ಸೃಷ್ಟಿಸಲು ಸರ್ಕಾರಿ ಸಂಸ್ಥೆಗಳನ್ನು ಬಳಸುತ್ತಿರುವುದನ್ನು ಟೀಕಿಸುವುದು ಮಾತ್ರ ತಮ್ಮ ಉದ್ದೇಶವಾಗಿತ್ತು ಎಂದು ಹೇಳಿದರು. ಚುನಾವಣೆಗಳ ಸಮಯದಲ್ಲಿ ಜನರನ್ನು ಮೌನಗೊಳಿಸಲು ಮತ್ತು ರಾಜಕೀಯ ಚಟುವಟಿಕೆಗಳ ಮೇಲೆ ಪ್ರಭಾವ ಬೀರಲು ಸಿಬಿಐ, ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ ಇಲಾಖೆಯಂತಹ ಕೇಂದ್ರ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸಲು ತಾವು ಆ ಪದ ಬಳಸಿದ್ದಾಗಿ ಅವರು ವಿವರಿಸಿದರು.
ನಾನು ಪ್ರಧಾನ ಮಂತ್ರಿಯವರನ್ನು ನೇರವಾಗಿ ಭಯೋತ್ಪಾದಕ ಎಂದು ಕರೆದಿಲ್ಲ, ಬದಲಾಗಿ ತನಿಖಾ ಸಂಸ್ಥೆಗಳ ದಾಳಿಗಳ ಮೂಲಕ ಅವರು ಜನರಲ್ಲಿ ಭಯೋತ್ಪಾದನೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಮತ್ತು ಜನರನ್ನು ಹೆದರಿಸಿ ಮೌನಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾಗಿ ಖರ್ಗೆ ತಿಳಿಸಿದರು. ವಿರೋಧ ಪಕ್ಷದ ನಾಯಕರನ್ನು ಬೆದರಿಸುವ ಮೂಲಕ ಚುನಾವಣೆಯಲ್ಲಿ ಅವರನ್ನು ಸೋಲಿಸುವ ತಂತ್ರವನ್ನು ತಾವು ಚೆನ್ನೈನಲ್ಲಿ ನೀಡಿದ್ದ ಹೇಳಿಕೆಯಲ್ಲಿ ಉಲ್ಲೇಖಿಸಿರುವುದಾಗಿ ಅವರು ಸ್ಪಷ್ಟಪಡಿಸಿದರು(ಏಜೆನ್ಸೀಸ್​).