Supriya Sule Remembers Ajit Pawar
- ರಕ್ಷಾ ಬಂಧನದಂದು ಸಹೋದರ ಅಜಿತ್ ಪವಾರ್ರನ್ನು ನೆನೆದ ಸಂಸದೆ ಸುಪ್ರಿಯಾ ಸುಳೆ
- ಈಗಲೂ ನೀವು ಎಲ್ಲಿಂದಲೋ ಬರುತ್ತೀರಿ, ನಮ್ಮೊಂದಿಗೆ ಹರಟುತ್ತೀರಿ ಎನ್ನುವಂತೆ ಭಾಸವಾಗುತ್ತಿದೆ
- ಅಜಿತ್ ಪವಾರ್ರನ್ನು ನೆನೆದು ಎಕ್ಸ್ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡ ಸುಪ್ರಿಯಾ ಸುಳೆ
ಮುಂಬೈ: ಇಂದು ದೇಶದಾದ್ಯಂತ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿದೆ. ಈ ಹೊತ್ತಲ್ಲೇ ಈ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ವಿಮಾನ ದುರಂತದಿಂದ ಮೃತಪಟ್ಟ ಸೋದರಸಂಬಂಧಿ ಮತ್ತು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರನ್ನು ಸಂಸದೆ ಸುಪ್ರಿಯಾ ಸುಳೆ ನೆನೆದಿದ್ದಾರೆ. ಭೀಕರ ದುರಂತ ನಡೆದು ಏಳು ತಿಂಗಳ ನಂತರವೂ ಇಂದಿಗೂ ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಸುಪ್ರಿಯಾ ಸುಳೆ ಭಾವುಕರಾಗಿದ್ದಾರೆ.
ಅಜಿತ್ ಪವಾರ್ ಅವರು ಚುನಾವಣಾ ವಿಚಾರವಾಗಿ ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದಾಗ ವಿಮಾನ ಪತನದಿಂದಾಗಿ ಇದೇ ವರ್ಷ ಜ.28ರಂದು ಮೃತಪಟ್ಟಿದ್ದರು. ದಟ್ಟ ಮಂಜಿನಿಂದಾಗಿ, ತುರ್ತು ಭೂಸ್ಪರ್ಶ ಮಾಡಲು ಯತ್ನಿಸುವ ವೇಳೆ ಈ ದುರಂತ ಸಂಭವಿಸಿತ್ತು.
ಸುಪ್ರಿಯಾ ಪೋಸ್ಟ್ನಲ್ಲಿ ಏನಿದೆ?
'ಪ್ರಿಯ ದಾದಾ ಅಜಿತ್ ಪವಾರ್ ಅವರಿಗೆ ರಾಖಿ ಕಟ್ಟುತ್ತಿರುವ ಹಳೆಯ ಪೋಟೋವೊಂದನ್ನು ಹಂಚಿಕೊಂಡು, ಹೀಗೆ ಬರೆದುಕೊಂಡಿದ್ದಾರೆ
ಇಂದು ರಕ್ಷಾಬಂದನ ಆದರೆ, ಈ ಬಾರಿ ನೀವು ನಮ್ಮೊಂದಿಗೆ ಇಲ್ಲ. ಇಂತಹ ಆಲೋಚನೆ ನನ್ನ ಹೃದಯವನ್ನು ಇರಿಯುವಂತೆ ಮಾಡುರತ್ತದೆ. ದುರಂತ ನಡೆದು ಏಳು ತಿಂಗಳು ಕಳೆದಿದೆ. ಆ ಭೀಕರ ಬೆಳಿಗ್ಗೆ ಮತ್ತು ನಿಮ್ಮ ಅನಿರೀಕ್ಷಿತ ಅಗಲಿಕೆ, ಇಂದಿಗೂ ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ' ಎಂದು ಬರೆದುಕೊಂಡು ಭಾವುಕರಾಗಿದ್ದಾರೆ.
ಮುಂದುವರೆದು, 'ನಾವಿಬ್ಬರು ಒಟ್ಟಿಗೆ ಬೆಳೆದದ್ದು, ನಮ್ಮ ಜಗಳಗಳು, ನಾವಿಬ್ಬರು ಪರಸ್ಪರವಾಗಿ ಹಂಚಿಕೊಂಡ ಪ್ರೀತಿ, ಒಬ್ಬರ ಬಗ್ಗೆ ಮತ್ತೊಬ್ಬರು ಹೊಂದಿದ್ದ ಹೆಮ್ಮೆ ಎಲ್ಲವು ನಮ್ಮಿಬ್ಬರ ಬಾಂಧವ್ಯಕ್ಕೆ ಅಡಿಪಾಯವಾಗಿತ್ತು. . ಈಗಲೂ ಸಹ, ನೀವು ಇದ್ದಕ್ಕಿದ್ದಂತೆ ಎಲ್ಲಿಂದಲೋ ಕಾಣಿಸಿಕೊಳ್ಳುತ್ತೀರಿ. ನಾನು ನಿಮಗೆ ರಾಖಿ ಕಟ್ಟುತ್ತೇನೆ. ನಿಮ್ಮ ಸಹೋದರಿಯರೊಂದಿಗೆ ಹರಟೆ ಹೊಡೆಯುತ್ತೀರಿ. ನಗುತ್ತೀರಿ ಮತ್ತು ಕುಟುಂಬದಲ್ಲಿ ಬೆರೆಯುತ್ತೀರಿ ಎನ್ನುವಂತೆ ಭಾಸವಾಗುತ್ತದೆ.
'ನಿಮ್ಮ ಅನುಪಸ್ಥಿತಿಯಿಂದ ಉಂಟಾದ ಶೂನ್ಯವನ್ನು ಎಂದಿಗೂ, ಯಾರಿಂದಲೂ ತುಂಬಲು ಸಾಧ್ಯವಿಲ್ಲ. ನೀವು ಎಲ್ಲೇ ಇದ್ದರೂ, ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳು ಯಾವಾಗಲೂ ನನ್ನೊಟ್ಟಿಗೆ ಶಾಶ್ವತವಾಗಿ ಇರಲಿ' ಎಂದು ಸಂಸದೆ ಸುಪ್ರಿಯಾ ಸುಳೆ ಭಾವುಕರಾಗಿ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಸುಪ್ರಿಯಾ ಸುಳೆ ವಿರುದ್ಧ ಪತ್ನಿಯನ್ನು ಕಣಕ್ಕಿಳಿಸಿದ್ದ ಅಜಿತ್ ಪವಾರ್
ಅಜಿತ್ ಪವಾರ್ ಅವರು ಪಕ್ಷವನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ - NCP ವಿಭಜಿಸಿದರು. 2024 ರ ಲೋಕಸಭಾ ಚುನಾವಣೆಯಲ್ಲಿ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಪತ್ನಿ ಸುನೇತ್ರಾ ಪವಾರ್ ಅವರನ್ನು ಕಣಕ್ಕಿಳಿಸಿದರು. ಸುನೇತ್ರಾ ಪವಾರ್ ಸೋತರು. ಸುಪ್ರಿಯಾ ಸುಳೆ ವಿರುದ್ಧ ಅವರನ್ನು ಕಣಕ್ಕಿಳಿಸಿದ್ದು ನನ್ನ ತಪ್ಪು ಎಂದು ಅಜಿತ್ ಪವಾರ್ ಆಗ ಹೇಳಿದ್ದರು, ಸಮಾಜದಲ್ಲಿ ಕುಟುಂಬಗಳ ಒಡಕು ಯಾರಿಗೂ ಇಷ್ಟವಾಗುವುದಿಲ್ಲ ಎಂದು ಅವರು ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು, (ಏಜೆನ್ಸೀಸ್).