Lenskart Controversy | ಲೆನ್ಸ್‌ಕಾರ್ಟ್ ಸಂಸ್ಥಾಪಕ ಪಿಯೂಷ್ ಬನ್ಸಾಲ್ 
ದೇಶ

ಲೆನ್ಸ್‌ಕಾರ್ಟ್‌ನಲ್ಲಿ 'ಧರ್ಮ' ಸಂಕಟ.. ಹಿಜಾಬ್‌ಗೆ ಇಲ್ಲದ ಅಡ್ಡಿ ಬಿಂದಿ-ತಿಲಕಕ್ಕೆ ಯಾಕೆ ಎಂದು ನೆಟ್ಟಿಗರ ಕಿಡಿ; ಸಿಇಒ ಬನ್ಸಾಲ್ ಹೇಳಿದ್ದೇನು..? | Lenskart Controversy

Lenskart Controversy: ಇತ್ತೀಚೆಗೆ ಲೆನ್ಸ್‌ಕಾರ್ಟ್ ಕಂಪನಿಯ ಡ್ರೆಸ್ ಕೋಡ್ ಪಾಲಿಸಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅದರಲ್ಲಿ ಹಿಂದೂ ಧಾರ್ಮಿಕ ಸಂಕೇತಗಳಾದ ಬಿಂದಿ, ಸಿಂಧೂರ ಮತ್ತು ತಿಲಕಕ್ಕೆ ನಿರ್ಬಂಧ ಹೇರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಶೇಷವೆಂದರೆ, ಇದೇ ಪಾಲಿಸಿಯಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಲಾಗಿದೆ ಎಂಬ ಅಂಶವು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ವಿವಾದದ ಕಿಡಿ ಹಚ್ತು ಆ ವೈರಲ್ ಪೋಸ್ಟ್!

ಕಳೆದ ಕೆಲವು ದಿನಗಳಿಂದ ಎಕ್ಸ್ ಮತ್ತು ವಾಟ್ಸಾಪ್ ಗ್ರೂಪ್‌ಗಳಲ್ಲಿ ಲೆನ್ಸ್‌ಕಾರ್ಟ್‌ನ ಗ್ರೂಮಿಂಗ್ ಗೈಡ್‌ಲೈನ್ಸ್ ಎಂಬ ಸ್ಕ್ರೀನ್‌ಶಾಟ್ ಹರಿದಾಡುತ್ತಿದ್ದು, ಇದರಲ್ಲಿ ನೌಕರರು ಅನುಸರಿಸಬೇಕಾದ ನಿಯಮಗಳನ್ನು ಪಟ್ಟಿ ಮಾಡಲಾಗಿದೆ. ಈ ಅಸಮಾನತೆಯ ನಿಯಮಗಳನ್ನು ಕಂಡ ನೆಟ್ಟಿಗರು ಬಾಯ್ಕಾಟ್ ಲೆನ್ಸ್‌ಕಾರ್ಟ್ (Boycott Lenskart) ಅಭಿಯಾನ ಆರಂಭಿಸಿದ್ದು, ಕಂಪನಿಯು ಒಂದು ಧರ್ಮಕ್ಕೆ ಮಾತ್ರ ರಿಯಾಯಿತಿ ನೀಡಿ ಮತ್ತೊಂದು ಧರ್ಮದ ಆಚರಣೆಗಳನ್ನು ಹತ್ತಿಕ್ಕುತ್ತಿದೆ ಎಂದು ಕಿಡಿಕಾರಿದ್ದಾರೆ.

ಲೆನ್ಸ್‌ಕಾರ್ಟ್ ಸಂಸ್ಥಾಪಕ ಪಿಯೂಷ್ ಬನ್ಸಾಲ್ ನೀಡಿದ ಸ್ಪಷ್ಟನೆ ಏನು?

ಈ ವಿವಾದ ಕೈಮೀರಿ ಹೋಗುತ್ತಿರುವುದನ್ನು ಗಮನಿಸಿದ ಲೆನ್ಸ್‌ಕಾರ್ಟ್ ಸಂಸ್ಥಾಪಕ ಮತ್ತು ಶಾರ್ಕ್ ಟ್ಯಾಂಕ್ ಇಂಡಿಯಾ ಖ್ಯಾತಿಯ ಪಿಯೂಷ್ ಬನ್ಸಾಲ್ ತಮ್ಮ ಎಕ್ಸ್ ಖಾತೆಯ ಮೂಲಕ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಾಲಿಸಿ ತಪ್ಪು ಮಾಹಿತಿಯಿಂದ ಕೂಡಿದ್ದು, ಅದು ನಮ್ಮ ಪ್ರಸ್ತುತ ಮಾರ್ಗಸೂಚಿಗಳನ್ನು ಪ್ರತಿನಿಧಿಸುವುದಿಲ್ಲ. ಲೆನ್ಸ್‌ಕಾರ್ಟ್‌ನಲ್ಲಿ ಯಾವುದೇ ರೀತಿಯ ಧಾರ್ಮಿಕ ಸಂಕೇತಗಳಿಗೆ (ಬಿಂದಿ, ತಿಲಕ ಸೇರಿದಂತೆ) ನಿರ್ಬಂಧವಿಲ್ಲ. ನಮ್ಮ ಕಂಪನಿಯು ಎಲ್ಲಾ ಸಂಸ್ಕೃತಿ ಮತ್ತು ಧರ್ಮಗಳನ್ನು ಗೌರವಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ವೈರಲ್ ಆಗಿರುವ ಮಾರ್ಗಸೂಚಿ ಹಳೆಯ ಆವೃತ್ತಿಯದ್ದಾಗಿರಬಹುದು. ಕಾಲಕಾಲಕ್ಕೆ ನಮ್ಮ ನಿಯಮಗಳನ್ನು ನಾವು ಪರಿಷ್ಕರಿಸುತ್ತೇವೆ. ಈ ಗೊಂದಲದಿಂದ ಯಾರಿಗಾದರೂ ನೋವಾಗಿದ್ದರೆ ನಾವು ಕ್ಷಮೆ ಯಾಚಿಸುತ್ತೇವೆ ಎಂದು ಬನ್ಸಾಲ್ ಟ್ವೀಟ್ ಮಾಡಿದ್ದಾರೆ.

ಸ್ಪಷ್ಟನೆಯ ಬಳಿಕವೂ ನಿಲ್ಲದ ಆಕ್ರೋಶ!

ಪಿಯೂಷ್ ಬನ್ಸಾಲ್ ಸ್ಪಷ್ಟನೆಯ ಹೊರತಾಗಿಯೂ ಜನರ ಆಕ್ರೋಶ ತಣ್ಣಗಾಗಿಲ್ಲ. ಹಳೆಯ ಪಾಲಿಸಿಯಾಗಿದ್ದರೂ ಸಹ, ಇಂತಹ ತಾರತಮ್ಯದ ನಿಯಮವನ್ನು ರೂಪಿಸಲು ಹೇಗೆ ಸಾಧ್ಯ..? ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಸೆಕ್ಯುಲರಿಸಂ ಹೆಸರಿನಲ್ಲಿ ಹಿಂದೂ ಧರ್ಮದ ಆಚರಣೆಗಳನ್ನು ಉದ್ಯೋಗ ಸ್ಥಳಗಳಲ್ಲಿ ಹತ್ತಿಕ್ಕಲಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರು ಬ್ರ್ಯಾಂಡ್‌ಗಳ ಸಾಮಾಜಿಕ ಮತ್ತು ಧಾರ್ಮಿಕ ನಿಲುವುಗಳ ಬಗ್ಗೆ ಹೆಚ್ಚು ಜಾಗರೂಕರಾಗಿದ್ದು, ಈ ಹಿಂದೆ ಮಾನ್ಯವರ್ ಮತ್ತು ತನಿಷ್ಕ್ ದಂತಹ ದೊಡ್ಡ ಬ್ರ್ಯಾಂಡ್‌ಗಳು ಕೂಡ ಇಂತಹದೇ ವಿವಾದಗಳಿಗೆ ಸಿಲುಕಿ ಸಾರ್ವಜನಿಕರ ಕ್ಷಮೆಯಾಚಿಸಿದ್ದವು. ಲೆನ್ಸ್‌ಕಾರ್ಟ್ ಕೂಡ ಈಗ ಅದೇ ಹಾದಿಯಲ್ಲಿದ್ದು, ಉದ್ಯೋಗಿಗಳಿಗೆ ಕಾಮನ್​ ಡ್ರೆಸ್ ಕೋಡ್ ಜಾರಿಗೆ ತರುವ ಭರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಎಚ್ಚರ ವಹಿಸುವುದು ಕಂಪನಿಗಳಿಗೆ ಸವಾಲಾಗಿ ಪರಿಣಮಿಸಿದೆ(ಏಜೆನ್ಸೀಸ್​).