ಮುಂಬೈ: ಭಾರತೀಯ ಚಿತ್ರರಂಗದ ದಂತಕಥೆ, ಹಿರಿಯ ಗಾಯಕಿ ಆಶಾ ಭೋಂಸ್ಲೆ (92)(Asha Bhosle) ಅವರ ಆರೋಗ್ಯ ಸ್ಥಿತಿ ಏರುಪೇರಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ (ಏಪ್ರಿಲ್ 11) ಅವರಿಗೆ ಹೃದಯಾಘಾತ (Cardiac Arrest) ಸಂಭವಿಸಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ
ಮೂಲಗಳ ಪ್ರಕಾರ, 92 ವರ್ಷದ ಗಾಯಕಿ ಆಶಾ ಭೋಂಸ್ಲೆ ಅವರನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ (EMS) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಡಾ. ಪ್ರತೀತ್ ಸಮದಾನಿ ಅವರು ಟೈಮ್ಸ್ ನೌಗೆ ಮಾಹಿತಿ ನೀಡಿ, "ಆಶಾ ಅವರ ಸ್ಥಿತಿ ಈಗ ಗಂಭೀರವಾಗಿದೆ" ಎಂದು ಖಚಿತಪಡಿಸಿದ್ದಾರೆ.
ಪ್ರಾರ್ಥಿಸುತ್ತಿರುವ ಅಭಿಮಾನಿ ಬಳಗ
ದಶಕಗಳ ಕಾಲ ಸಾವಿರಾರು ಹಾಡುಗಳ ಮೂಲಕ ಭಾರತೀಯರ ಮನಗೆದ್ದಿರುವ ಆಶಾ ಅವರ ಆರೋಗ್ಯದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಗಣ್ಯರು ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಈ ಕುರಿತು ಅವರ ಕುಟುಂಬದಿಂದ ಇನ್ನೂ ಅಧಿಕೃತ ಹೇಳಿಕೆ ಹೊರಬರಬೇಕಿದೆ.