ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆ 
ದೇಶ

ಥೂ... ಹೀಗೂ ಮಾಡ್ತಾರಾ? ತಗೋ ಕೂಲ್​ ಡ್ರಿಂಕ್ಸ್​ ಅನ್ನೋರಿಗೆ ಮೊದಲು ಈ ವಿಡಿಯೋ ತೋರ್ಸಿ! Leftover Drinks

ಪ್ರಮುಖ ಮುಖ್ಯಾಂಶಗಳು

  • ದೆಹಲಿಯ ಅರುಣ್​ ಜೆಟ್ಲಿ ಸ್ಟೇಡಿಯಂನಲ್ಲಿ ಈ ಘಟನೆ ಸೆರೆ
  • ಜನರು ಕುಡಿದು ಬಿಟ್ಟ ಕೂಲ್​ ಡ್ರಿಂಕ್ಸ್ ಮರುಬಳಕೆ
  • ಬಾಟಲಿಗೆ ತುಂಬಿ ಅದೇ ದರಕ್ಕೆ ಮಾರಾಟ
ನವದೆಹಲಿ: ಐಸಿಸಿ ಟಿ20 ವಿಶ್ವಕಪ್​ ಟೂರ್ನಿ ಆರಂಭವಾಗಿ ಇಂದಿಗೆ 5 ದಿನಗಳು ಕಳೆದಿವೆ. ಬಹುತೇಕ ಎಲ್ಲ ಪಂದ್ಯಗಳು ಕುತೂಹಲಕಾರಿ ಹಾಗೂ ರೋಚಕವಾಗಿ ಮೂಡಿಬರುತ್ತಿರುವುದು ಸದ್ಯ ಕ್ರಿಕೆಟ್​ ಪ್ರಿಯರನ್ನು ಆಯಾ ಸ್ಟೇಡಿಯಂಗಳಿಗೆ ಹೋಗಿ, ಲೈವ್​ ಮ್ಯಾಚ್​ ನೋಡುವಂತೆ ಸೆಳೆಯುತ್ತಿದೆ. ಟೂರ್ನಿಯನ್ನು ಆಯೋಜಿಸಿರುವ ಭಾರತ, ದೇಶದ ಹಲವು ಪ್ರಮುಖ ಕ್ರೀಡಾಂಗಣಗಳಲ್ಲಿ ಗ್ರೂಪ್​ ಸ್ಟೇಜ್​ ಪಂದ್ಯಗಳನ್ನು ಆಡಿಸುತ್ತಿದೆ. ಈ ಮಧ್ಯೆ, ದೆಹಲಿಯ ಅರುಣ್​ ಜೆಟ್ಲಿ ಸ್ಟೇಡಿಯಂನಲ್ಲಿ ಪಂದ್ಯ ನೋಡಲು ಬರುವ ಕ್ರೀಡಾಭಿಮಾನಿಗಳಿಗೆ ಆಗುತ್ತಿರುವ ಮಹಾ ಮೋಸದ ಬಗ್ಗೆ ಒಂದು ವಿಡಿಯೋ ಜಾಲತಾಣಗಳಲ್ಲಿ ಭಾರೀ ಕಿಡಿ ಹಚ್ಚಿದೆ,(Leftover Drinks).

ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ...

ಇದು ಎಷ್ಟು ದಿನಗಳಿಂದ ನಡೆಯುತ್ತಿದೆಯೋ ಅಸ್ಪಷ್ಟ. ಆದ್ರೆ, ಈ ದೃಶ್ಯ ದೆಹಲಿಯ ಅರುಣ್​ ಜೆಟ್ಲಿ ಸ್ಟೇಡಿಯಂನಲ್ಲಿ ಸೆರೆಯಾಗಿದೆ. ಪಂದ್ಯ ನೋಡಲು ಬರುವ ಕ್ರಿಕೆಟ್​ ಪ್ರಿಯರು, ಸುಮ್ಮನೆ ಕುಳಿತು ಮ್ಯಾಚ್​ ನೋಡ್ತಾರಾ ಹೇಳಿ? ಖಂಡಿತವಾಗಿ, ಬಹುತೇಕರು ಫ್ರೂಟ್​ ಜ್ಯೂಸ್​, ಕೂಲ್​ ಡ್ರಿಂಕ್ಸ್​, ಪಾಪ್​ಕಾರ್ನ್​ ಸೇರಿದಂತೆ ಇನ್ನಿತರ ತಿಂಡಿ-ತಿನಿಸುಗಳನ್ನು ಕ್ರೀಡಾಂಗಣದ ಸ್ಟಾಲ್​ಗಳಿಂದ ಆರ್ಡರ್​ ಮಾಡ್ತಾರೆ. ಆದರೆ, ಇಲ್ಲೊಂದು ಅಂಗಡಿಯವ, ಜನರು ತಮ್ಮಿಂದ ತೆಗೆದುಕೊಂಡು ಹೋದ ಕಪ್​ ಕೂಲ್​ ಡ್ರಿಂಕ್ಸ್ ಅನ್ನು ಪಂದ್ಯದ ಬಳಿಕ ಕಸದ ಬುಟ್ಟಿಗೆ ಎಸೆಯುವ ಬದಲು ಕುಳಿತಲ್ಲೇ ಬಿಟ್ಟೋಗ್ತಾರೆ ಎಂಬುದನ್ನು ಚೆನ್ನಾಗಿ ಅರಿತಿದ್ದು, ಇದನ್ನೇ ಲಾಭದ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾನೆ.

ಲಾಭದ ಆಸೆ ಇರಬೇಕು! ಆದ್ರೆ...

ಜನರು ಕುಡಿದು ಬಿಟ್ಟೋದ ಥಮ್ಸ್​ಅಪ್​ ಡ್ರಿಂಕ್ಸ್​ ಅನ್ನು ಒಂದೊಂದೇ ಕಪ್​ನಿಂದ ಮತ್ತೆ 2 ಲೀ. ಬಾಟಲಿಗೆ ತುಂಬಿಸಿ, ಹೊಸದಾಗಿ ಮಾರಾಟ ಮಾಡುತ್ತಿರುವ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದು, ಪಂದ್ಯ ನೋಡಲು ಹೋಗಿದ್ದ ನಾವೂ ಕೂಡ ಅದನ್ನೇ ಏನಾದರೂ ಕುಡಿದು ಬಿಟ್ಟೆವಾ? ಎಂದು ತೀರ ತಲೆಕೆಡಿಸಿಕೊಂಡಿದ್ದಾರೆ. ಅಸಲಿಗೆ, ಇದು ಘೋರ ಅಪರಾಧ! ವ್ಯಾಪಾರಿಗಳೇಕೆ ಜನರ ಜೀವದ ಜೊತೆ ಹೀಗೆ ಆಟವಾಡ್ತಿದ್ದಾರೆ? ಲಾಭದ ಆಸೆ ಇರಬೇಕು ಆದ್ರೆ, ಇಷ್ಟು ಕೀಳುಮಟ್ಟಿಗೆ ಇಳಿದೆರೆ ಹೇಗೆ? ಎಂಬ ಪ್ರಶ್ನೆಗಳು ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ. ​
ಪ್ರಕರಣ ಹಲವರ ಹುಬ್ಬೇರಿಸಿದ್ದು, ಈ ಬಗ್ಗೆ ದೆಹಲಿಯ ಅಧಿಕಾರಿಗಳು ಮತ್ತು ಜಿಲ್ಲಾ ಕ್ರಿಕೆಟ್​ ಅಸೋಸಿಯೆಷನ್ ಯಾವ ಕ್ರಮ ಜರುಗಿಸುತ್ತೆ? ವ್ಯಾಪಾರಿಯ ಲೈಸನ್ಸ್​ ಅನ್ನು ರದ್ದುಗೊಳಿಸುತ್ತಾ? ಎಂಬುದನ್ನು ಕಾದು ತಿಳಿಯಬೇಕಿದೆ. ಇದೊಂದು ಘಟನೆ ಸದ್ಯ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸುವ ಅಧಿಕಾರಿಗಳ ಕುತ್ತಿಗೆ ತಂದಿಟ್ಟಂತಾಗಿದೆ. ಸಾವಿರಾರು ರೂಪಾಯಿ ಕೊಟ್ಟು ಪಂದ್ಯ ವೀಕ್ಷಿಸಲು ಬರುವ ಜನರ ಆರೋಗ್ಯಕ್ಕೆ ಕುತ್ತು ತರುವಂತ ಇಂತಹ ಪ್ರಕರಣಗಳು ಆಯಾ ಸ್ಟೇಡಿಯಂ ಆಡಳಿತ ಮಂಡಳಿಗೂ ಕಳಂಕ ತಂದಿಡಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್). ​