Shiv Sena Split: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಬಣಕ್ಕೆ ಹಿನ್ನಡೆಗಳ ಸರಣಿ ಮುಂದುವರಿದಿದ್ದು, ಆರು ಮಂದಿ ಲೋಕಸಭಾ ಸಂಸದರು ಡಿಸಿಎಂ ಏಕನಾಥ್ ಶಿಂಧೆ ಬಣಕ್ಕೆ ಸೇರಿದ ಬೆನ್ನಲ್ಲೇ, ಈಗ ನವದೆಹಲಿಯ ಸಂಸತ್ ಭವನ ಸಂಕೀರ್ಣದಲ್ಲಿರುವ ಪಕ್ಷದ ಕಚೇರಿಯೂ ಕೈತಪ್ಪುವ ಭೀತಿ ಎದುರಾಗಿದೆ. ಸಂಸತ್ತಿನಲ್ಲಿ ಪಕ್ಷದ ಬಲ ಕುಸಿದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಆರು ಸಂಸದರ ವಿಲೀನ ಪ್ರಕ್ರಿಯೆಗೆ ಅಧಿಕೃತ ಮುದ್ರೆ ಒತ್ತಿದ ತಕ್ಷಣ, ಉದ್ಧವ್ ಠಾಕ್ರೆ ಬಣದ ಲೋಕಸಭಾ ಸಂಸದರ ಸಂಖ್ಯೆ ಕೇವಲ ಮೂರಕ್ಕೆ ಕುಸಿಯಲಿದೆ. ಸಂಸತ್ತಿನ ನಿಯಮಗಳ ಪ್ರಕಾರ, ಐದು ಅಥವಾ ಅದಕ್ಕಿಂತ ಹೆಚ್ಚು ಸಂಸದರನ್ನು ಹೊಂದಿರುವ ರಾಜಕೀಯ ಪಕ್ಷಗಳಿಗೆ ಮಾತ್ರ ಸಂಸತ್ ಭವನದಲ್ಲಿ ಪ್ರತ್ಯೇಕ ಕಚೇರಿ ಸ್ಥಳವನ್ನು ನಿಗದಿಪಡಿಸಲಾಗುತ್ತದೆ. ಈಗ ಉದ್ಧವ್ ಬಣದ ಸಂಖ್ಯಾಬಲ ಐದಕ್ಕಿಂತ ಕಡಿಮೆ ಆಗುತ್ತಿರುವುದರಿಂದ, ಪ್ರಸ್ತುತ ಇರುವ ಕಚೇರಿಯನ್ನು ಅವರು ಕಳೆದುಕೊಳ್ಳಬೇಕಾಗಬಹುದು.
ರೂಮ್ ನಂಬರ್ 128A ಕೈತಪ್ಪುವ ಆತಂಕ
ಸದ್ಯ ಹಳೆಯ ಸಂಸತ್ ಭವನ ಕಟ್ಟಡದ (ಸಂವಿಧಾನ ಸದನ) ರೂಮ್ ನಂಬರ್ 128A ನಲ್ಲಿ ಶಿವಸೇನಾ (UBT) ಸಂಸದೀಯ ಪಕ್ಷದ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಇದು ಪಕ್ಷ ಇಭ್ಭಾಗವಾಗುವ ಮುನ್ನ ಅವಿಭಜಿತ ಶಿವಸೇನೆಗೆ ನೀಡಲಾಗಿದ್ದ ರೂಮ್ ನಂಬರ್ 128ರ ಪಕ್ಕದಲ್ಲೇ ಇದೆ. ಸಂಸದರ ಸಂಖ್ಯೆ ಕುಸಿದಿರುವುದರಿಂದ ಈ ಕಚೇರಿಯನ್ನು ಉಳಿಸಿಕೊಳ್ಳಲು ಉದ್ಧವ್ ಬಣಕ್ಕೆ ಅನುಮತಿ ಸಿಗುತ್ತದೆಯೇ ಇಲ್ಲವೇ ಎಂಬ ತೀವ್ರ ಅನಿಶ್ಚಿತತೆ ಸೃಷ್ಟಿಯಾಗಿದೆ.
ಈ ಸಂಸದರ ಬಂಡಾಯ ದಿಢೀರನೆ ಸಂಭವಿಸಿದ್ದಲ್ಲ, ಬದಲಿಗೆ ಕಳೆದ ಕೆಲವು ದಿನಗಳಿಂದಲೇ ಇದಕ್ಕೆ ತಯಾರಿ ನಡೆದಿತ್ತು. ಜೂನ್ 17 ರಂದು ನವದೆಹಲಿಯಲ್ಲಿ ಉದ್ಧವ್ ಠಾಕ್ರೆ ಬಣ ಕರೆದಿದ್ದ ಪ್ರಮುಖ ಸಂಸದೀಯ ಸಭೆಗೆ ಆರು ಸಂಸದರು ಗೈರುಹಾಜರಾಗುವ ಮೂಲಕ ಪಕ್ಷಾಂತರದ ಮುನ್ಸೂಚನೆ ನೀಡಿದ್ದರು. ಆ ಸಭೆಗೆ ಕೇವಲ ಮೂವರು ಸಂಸದರು ಮಾತ್ರ ಹಾಜರಾಗಿದ್ದರು. ಉದ್ಧವ್ ಬಣ ತೊರೆದ ಸಂಸದರನ್ನು ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶ್‌ಮುಖ್, ಸಂಜಯ್ ಜಾಧವ್, ಭೌಸಾಹೇಬ್ ವಾಕಚೌರೆ, ನಾಗೇಶ್ ಪಾಟೀಲ್ ಅಷ್ಟಿಕರ್ ಮತ್ತು ಓಂರಾಜೇ ನಿಂಬಾಳ್ಕರ್ ಎಂದು ಗುರುತಿಸಲಾಗಿದೆ.
ಸಿಕ್ಸ್ ಬಾರಿಸಿದ್ದೇವೆ ಎಂದ ಶಿಂಧೆ
ಬಂಡಾಯಗಾರರ ವಿಷಯವಾಗಿ ಮಾತನಾಡಿರುವ ಡಿಸಿಎಂ ಏಕನಾಥ್ ಶಿಂಧೆ, ಇಂದು ನನ್ನೊಂದಿಗೆ ಒಬ್ಬರಲ್ಲ, ಇಬ್ಬರಲ್ಲ.. ಬರೋಬ್ಬರಿ ಆರು ಹುಲಿಗಳಿವೆ. ಈ ಬಾರಿ ನಾವು ಸಿಕ್ಸ್ ಬಾರಿಸಿದ್ದೇವೆ ಎಂದು ಉದ್ಧವ್ ಬಣಕ್ಕೆ ಲೇವಡಿ ಮಾಡಿದ್ದರು. 2022ರಲ್ಲಿ ಶಿವಸೇನೆಯಲ್ಲಿ ಆರಂಭವಾದ ಬಿರುಕಿನ ಮುಂದುವರಿದ ಭಾಗವೇ ಇದು ಎಂದು ಅವರು ಬಣ್ಣಿಸಿದ್ದಾರೆ. ಸಂಸತ್ತಿನಲ್ಲಿ ಕಚೇರಿ ಕಳೆದುಕೊಳ್ಳುವುದಷ್ಟೇ ಅಲ್ಲದೆ, ಉದ್ಧವ್ ಠಾಕ್ರೆ ಬಣಕ್ಕೆ ರಾಷ್ಟ್ರೀಯ ಮಟ್ಟದ ಸಮಾಲೋಚನೆಗಳಲ್ಲೂ ಹಿನ್ನಡೆಯಾಗಲಿದೆ. ಸಾಮಾನ್ಯವಾಗಿ ಐದಕ್ಕಿಂತ ಕಡಿಮೆ ಸಂಸದರನ್ನು ಹೊಂದಿರುವ ಪಕ್ಷಗಳನ್ನು ಕೇಂದ್ರ ಸರ್ಕಾರ ಕರೆಯುವ ಎಲ್ಲಾ ಸರ್ವಪಕ್ಷ ಸಭೆಗಳಿಗೆ ಆಹ್ವಾನಿಸುವುದಿಲ್ಲ. ಸದ್ಯ ಇಡೀ ರಾಜಕೀಯ ವಲಯದ ಕಣ್ಣು ಲೋಕಸಭಾ ಸ್ಪೀಕರ್ ಅವರ ನಿರ್ಧಾರದ ಮೇಲಿದ್ದು, ಇದು ಉದ್ಧವ್ ಠಾಕ್ರೆ ಬಣದ ಭವಿಷ್ಯದ ರಾಜಕೀಯ ಹಾದಿಯನ್ನು ನಿರ್ಧರಿಸಲಿದೆ(ಏಜೆನ್ಸೀಸ್).