ವಿರಾಟ್, ರೋಹಿತ್ ಬಿಡಿ.. ಆರ್ಚರ್ ನಡುಗಿಸಿದ್ದು ಈ ಕನ್ನಡಿಗ! ತಮಗೆ ಎದುರಾದ ಕಠಿಣ ಬ್ಯಾಟರ್ ಹೆಸರಿಸಿದ ಇಂಗ್ಲೆಂಡ್ ಸ್ಪೀಡ್‌ಸ್ಟಾರ್! 
ದೇಶ

ವಿರಾಟ್, ರೋಹಿತ್ ಬಿಡಿ.. ಆರ್ಚರ್ ನಡುಗಿಸಿದ್ದು ಈ ಕನ್ನಡಿಗ! ತಮಗೆ ಎದುರಾದ ಕಠಿಣ ಬ್ಯಾಟರ್ ಹೆಸರಿಸಿದ ಇಂಗ್ಲೆಂಡ್ ಸ್ಪೀಡ್‌ಸ್ಟಾರ್! Jofra Archer

ನವದೆಹಲಿ: ವಿಶ್ವ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಹಾಗೂ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ (Jofra Archer), IPL ಇತಿಹಾಸದಲ್ಲಿ ತಮಗೆ ಬೌಲಿಂಗ್ ಮಾಡಲು ಅತ್ಯಂತ ಕಷ್ಟ ಎನಿಸಿದ ಭಾರತದ ಬ್ಯಾಟರ್ ಯಾರು ಎಂಬುದನ್ನು ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ. ಸಾಮಾನ್ಯವಾಗಿ ಇಂತಹ ಪ್ರಶ್ನೆ ಎದುರಾದಾಗ ವಿಶ್ವದ ಬಹುತೇಕ ಬೌಲರ್‌ಗಳು ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಅವರ ಹೆಸರನ್ನು ಹೇಳುತ್ತಾರೆ. ಆದರೆ, ಆರ್ಚರ್ ಅವರ ಉತ್ತರ ಮಾತ್ರ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ಅಚ್ಚರಿ ಮೂಡಿಸಿದೆ.
ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಕಾರ್ಲೋಸ್ ಬ್ರಾತ್‌ವೈಟ್ ಅವರ ‘ದಿ ಸೂಪರ್ ಓವರ್ ಶೋ’ ಟಾಕ್ ಶೋನಲ್ಲಿ ಭಾಗವಹಿಸಿದ್ದ ಜೋಫ್ರಾ ಆರ್ಚರ್, ತಮಗೆ ಮೈದಾನದಲ್ಲಿ ಅತಿ ಹೆಚ್ಚು ಬೆವರು ಹರಿಸಿದ ಬ್ಯಾಟರ್ ಭಾರತದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಎಂದು ತಕ್ಷಣವೇ ಉತ್ತರಿಸಿದ್ದಾರೆ.

ಯಾವ ಚೆಂಡನ್ನು ಎಲ್ಲಿಗೆ ಬೇಕಾದರೂ ಹೊಡೆಯಬಲ್ಲರು!

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮಾರಕ ಬೌಲಿಂಗ್ ದಾಳಿ ಸಂಘಟಿಸುವ ಜೋಫ್ರಾ ಆರ್ಚರ್, ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್ ವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಐಪಿಎಲ್‌ನ ಮೊದಲ ಕೆಲವು ವರ್ಷಗಳಲ್ಲಿ ಕೆ.ಎಲ್. ರಾಹುಲ್ ಅವರಿಗೆ ಬೌಲಿಂಗ್ ಮಾಡುವುದು ಅತ್ಯಂತ ಕಠಿಣವಾಗಿತ್ತು. ಆ ಸಮಯದಲ್ಲಿ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಅವರು ಮೈದಾನದ ಯಾವುದೇ ದಿಕ್ಕಿಗೆ, ಯಾವುದೇ ಎಸೆತವನ್ನಾದರೂ ಸಿಕ್ಸರ್ ಅಥವಾ ಬೌಂಡರಿಗೆ ಅಟ್ಟಬಲ್ಲ ಸಾಮರ್ಥ್ಯ ಹೊಂದಿದ್ದರು. ಅವರಿಗೆ ಎಲ್ಲಿ ಬೌಲಿಂಗ್ ಮಾಡಬೇಕೆಂಬುದೇ ದೊಡ್ಡ ಗೊಂದಲವಾಗುತ್ತಿತ್ತು ಎಂದು ಆರ್ಚರ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಕೆ.ಎಲ್. ರಾಹುಲ್ ಅವರ ರನ್ ಗಳಿಸುವ ಸುಲಭ ಶೈಲಿ, ಅತ್ಯದ್ಭುತ ಟೈಮಿಂಗ್ ಮತ್ತು ಮೈದಾನದ ನಾಲ್ಕೂ ಮೂಲೆಗೂ ಶಾಟ್‌ಗಳನ್ನು ಬಾರಿಸುವ ಮಿಸ್ಟರ್ 360 ಶೈಲಿಯ ಆಟವೇ ಆರ್ಚರ್ ಅವರ ಮನಸ್ಸಿನಲ್ಲಿ ಇಷ್ಟು ದೊಡ್ಡ ಪ್ರಭಾವ ಬೀರಲು ಪ್ರಮುಖ ಕಾರಣವಾಗಿದೆ.

ಐಪಿಎಲ್ 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ರಾಹುಲ್ ಅಬ್ಬರ!

ಕನ್ನಡಿಗ ಕೆ.ಎಲ್. ರಾಹುಲ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ವಿಕೆಟ್‌ಕೀಪರ್-ಬ್ಯಾಟರ್ ಆಗಿ ಜವಾಬ್ದಾರಿ ನಿಭಾಯಿಸಿದ ರಾಹುಲ್, ಆಡಿದ 14 ಪಂದ್ಯಗಳಿಂದ ಬರೋಬ್ಬರಿ 593 ರನ್‌ಗಳನ್ನು ಕೊಳ್ಳೆಹೊಡೆದಿದ್ದಾರೆ. 45.61 ರ ಸರಾಸರಿ ಹಾಗೂ 174.41 ರ ಭೀಕರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಅವರು, 1 ಭರ್ಜರಿ ಶತಕ ಹಾಗೂ 5 ಅರ್ಧಶತಕಗಳನ್ನು ಸಿಡಿಸಿ ಇಡೀ ಟೂರ್ನಿಯಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

ಆರ್ಚರ್ ಅವರಿಗೂ ಇದು ಯಶಸ್ವಿ ಸೀಸನ್

ಮತ್ತೊಂದೆಡೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಕೂಡ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ 2026ರಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಆರ್ಚರ್, 16 ಪಂದ್ಯಗಳಿಂದ ಒಟ್ಟು 25 ವಿಕೆಟ್‌ಗಳನ್ನು ಕಬಳಿಸಿ ರಾಜಸ್ಥಾನ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಿಶ್ವದ ದೊಡ್ಡ ದೊಡ್ಡ ಹಿಟ್ಟರ್‌ಗಳಾದ ಆ್ಯಂಡ್ರೆ ರಸೆಲ್, ಕ್ರಿಸ್ ಗೇಲ್ ಅವರಂತಹ ಬ್ಯಾಟರ್‌ಗಳಿಗೆ ಬೌಲಿಂಗ್ ಮಾಡಿರುವ ಆರ್ಚರ್, ಅವರೆಲ್ಲರನ್ನು ಬಿಟ್ಟು ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್ ತಮಗೆ ಅತ್ಯಂತ ಕಠಿಣ ಸವಾಲಾಗಿತ್ತು ಎಂದು ಹೇಳಿರುವುದು ರಾಹುಲ್ ಅವರ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ,(ಏಜೆನ್ಸೀಸ್​).