ಕೇರಳದ ಕೆಲವು ಭಾಗಗಳಲ್ಲಿ ಹಿಂಸಾಚಾರ  
ದೇಶ

Kerala Civic Polls | ಯುಡಿಎಫ್​ ಗೆಲುವು...ರಾಜ್ಯದ ಅನೇಕ ಕಡೆಗಳಲ್ಲಿ ಘರ್ಷಣೆ...ಇಂದಿರಾ ಗಾಂಧಿ ಪ್ರತಿಮೆಗೂ ಹಾನಿ

ತಿರುವನಂತಪುರಂ: ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಸಿಪಿಐ ಮತ್ತು ಯುಡಿಎಫ್ ಕಾರ್ಯಕರ್ತರ ನಡುವಿನ ಮಾರಾಮಾರಿ ಹಿನ್ನಲೆಯಲ್ಲಿ ಕೇರಳದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ಕೋಝಿಕ್ಕೋಡ್ ಜಿಲ್ಲೆಯ ಎರಮಲದಲ್ಲಿ, ಸಿಪಿಐ(ಎಂ) ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಇಂದಿರಾ ಗಾಂಧಿ ಭವನದ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 200 ಜನರ ಮೆರವಣಿಗೆಯ ತಂಡ ಕಟ್ಟಡಕ್ಕೆ ಹಾನಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದು, ಸುಮಾರು 5 ಲಕ್ಷ ರೂಪಾಯಿ ನಷ್ಟವಾಗಿರುವ ಅಂದಾಜಿದೆ.
ಈ ದಾಳಿಯ ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪ್ರತಿಮೆಗೂ ಹಾನಿಯಾಗಿದೆ ಎನ್ನಲಾಗಿದ್ದು, ದಾಳಿಯ ಬಳಿಕ, ಯುಡಿಎಫ್ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ, ಪೊಲೀಸರು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ವರದಿಯಾಗಿದೆ.

ಮೆರವಣಿಗೆಯಲ್ಲಿ ಕಲ್ಲು ತೂರಾಟ....

ಮರಾಡ್‌ನಲ್ಲಿ ಯುಡಿಎಫ್ ವಿಜಯೋತ್ಸವ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದು, ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ, ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ, ಯುಡಿಎಫ್ ಕಾರ್ಯಕರ್ತ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಸಿಪಿಐ(ಎಂ) ಕಾರ್ಯಕರ್ತರು ದಾಳಿ ನಡೆಸಿದ ಆರೋಪದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ದುಷ್ಕೃತ್ಯದಲ್ಲಿ ಸುಮಾರು 40 ಜನರು ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ಪ್ರದೇಶದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ತನ್ನ ಮನೆಯ ಬಳಿ ಪಟಾಕಿ ಸಿಡಿಸುವುದನ್ನು ವಿರೋಧಿಸಿದ ಸಿಪಿಐ(ಎಂ) ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಯುಡಿಎಫ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕಣ್ಣೂರು ಮತ್ತು ಕಾಸರಗೋಡಿನಲ್ಲಿ ಘರ್ಷಣೆ...

ಕಣ್ಣೂರು ಜಿಲ್ಲೆಯ ಪಾನೂರಿನಲ್ಲಿ, ಸಿಪಿಐ(ಎಂ) ಕಾರ್ಯಕರ್ತರು ಮುಸ್ಲಿಂ ಲೀಗ್ ಕಾರ್ಯಕರ್ತರಿಗೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಮನೆಗಳ ಹೊರಗೆ ನಿಲ್ಲಿಸಲಾಗಿದ್ದ ವಾಹನಗಳಿಗೂ ಹಾನಿಯಾಗಿದೆ. ಸಿಪಿಐ(ಎಂ) ಕಾರ್ಯಕರ್ತರು ಯುಡಿಎಫ್ ವಿಜಯೋತ್ಸವ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದ ಬಳಿಕ ಹಿಂಸಾಚಾರ ಪ್ರಾರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟಣೆಯಲ್ಲಿ ಕೆಲ ಯುಡಿಎಫ್ ನಾಯಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಣ್ಣೂರಿನ ಉಲಿಕ್ಕಲ್‌ನಲ್ಲಿಯೂ ಘರ್ಷಣೆಗಳ ಬಗ್ಗೆ ವರದಿಯಾಗಿದ್ದು, ಸಿಪಿಐ(ಎಂ) ಮತ್ತು ಯುಡಿಎಫ್ ಕಾರ್ಯಕರ್ತರು ಮುಖಾಮುಖಿಯಾದರು. ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಬೇಡಕೊಂನಲ್ಲಿ, ಸಿಪಿಐ(ಎಂ) ಕಾರ್ಯಕರ್ತರು ಯುಡಿಎಫ್ ಕಾರ್ಯಕರ್ತರು ಹಾದುಹೋಗುವುದನ್ನು ತಡೆದ ಬಳಿಕ ಎಲ್‌ಡಿಎಫ್ ವಿಜಯೋತ್ಸವ ಮೆರವಣಿಗೆ ಹಿಂಸಾತ್ಮಕವಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸುವಾಗ ಕೆಲವು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ(ಏಜೆನ್ಸೀಸ್​).