Ketan Agarwal Murder (ಚಿತ್ರ X) 
ದೇಶ

ಕೇತನ್ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಆರೋಪಿ ಸಿಯಾ ಸಹೋದರನಿಗೆ 10 ಕೋಟಿ ರೂ. ಮಾನನಷ್ಟ ನೋಟಿಸ್ ಕೊಟ್ಟ ವಕೀಲ ಶ್ರೀವಾಸ್ತವ! Ketan Agarwal Murder

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿ ಮತ್ತು ಉದ್ಯಮಿ ಕೇತನ್ ಅಗರ್ವಾಲ್ ಭೀಕರ ಕೊಲೆ ಪ್ರಕರಣ
  • ಸಿಯಾ ಕುಟುಂಬಸ್ಥರು ಹಾಗೂ ವಕೀಲ ಅಶುತೋಷ್ ಶ್ರೀವಾಸ್ತವ ನಡುವೆ ಭಾರಿ ಕಾನೂನು ಸಮರ
  • ತಮ್ಮ ಕುಟುಂಬವು ಅಶುತೋಷ್ ಶ್ರೀವಾಸ್ತವ ಅವರ ಕಾನೂನು ಸೇವೆಯನ್ನು ಪಡೆದುಕೊಂಡಿಲ್ಲ- ಸಾಹಿಲ್​
ಪುಣೆ: ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿ ಮತ್ತು ಉದ್ಯಮಿ ಕೇತನ್ ಅಗರ್ವಾಲ್ ಭೀಕರ ಕೊಲೆ (Ketan Agarwal Murder) ಪ್ರಕರಣವು ದಿನಕ್ಕೊಂದು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸದ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಯಾ ಕುಟುಂಬಸ್ಥರು ಹಾಗೂ ವಕೀಲ ಅಶುತೋಷ್ ಶ್ರೀವಾಸ್ತವ ನಡುವೆ ಭಾರಿ ಕಾನೂನು ಸಮರ ಶುರುವಾಗಿದ್ದು, ತನ್ನ ವೃತ್ತಿಪರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ವಕೀಲ ಶ್ರೀವಾಸ್ತವ ಅವರು ಆರೋಪಿ ಸಿಯಾ ಸಹೋದರ ಸಾಹಿಲ್ ಗೋಯಲ್ ವಿರುದ್ಧ ಬರೋಬ್ಬರಿ 10 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದಾರೆ.
ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ ಸಾಹಿಲ್ ಗೋಯಲ್, ತಮ್ಮ ಕುಟುಂಬವು ಅಶುತೋಷ್ ಶ್ರೀವಾಸ್ತವ ಅವರ ಕಾನೂನು ಸೇವೆಯನ್ನು ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಷ್ಟೇ ಅಲ್ಲದೆ, ವಕೀಲ ಶ್ರೀವಾಸ್ತವ ಅವರು ವಂಚನೆ ಹಾಗೂ ಮೋಸದ ದಾರಿಯ ಮೂಲಕ ಸಿಯಾ ಗೋಯಲ್ ಅವರಿಂದ ಕೆಲವು ಕಾನೂನು ದಾಖಲೆಗಳಿಗೆ ಸಹಿ ಪಡೆದುಕೊಂಡಿರಬಹುದು ಎಂದು ಗಂಭೀರ ಆರೋಪ ಮಾಡಿದ್ದರು.
ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಶ್ರೀವಾಸ್ತವ, ಸಾಹಿಲ್ ಅವರ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತವಾಗಿದ್ದು, ಇದರಿಂದ ನನ್ನ ವೃತ್ತಿಪರ ಕ್ಷೇತ್ರಕ್ಕೆ ಭಾರಿ ಹಾನಿಯಾಗಿದೆ. ಹಾಗಾಗಿ 10 ಕೋಟಿ ರೂ. ಪರಿಹಾರವನ್ನು ನೀಡಿ, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಜೊತೆಗೆ ಭವಿಷ್ಯದಲ್ಲಿ ಇಂತಹ ತಪ್ಪುಗಳು ಆಗುವುದಿಲ್ಲ ಎಂದು ಲಿಖಿತ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.
ಸೋಮವಾರ ಶ್ರೀವಾಸ್ತವ ಅವರು ನ್ಯಾಯಾಲಯಕ್ಕೆ ಹಾಜರಾಗಿ, ಸಿಯಾ ಗೋಯಲ್ ಸಹಿ ಮಾಡಿರುವ ವಕಾಲತ್ತುನಾಮೆಯನ್ನು ಸಲ್ಲಿಕೆ ಮಾಡಿ ತಾವು ಆಕೆಯ ಪರ ವಾದ ಮಂಡಿಸುತ್ತಿರುವುದಾಗಿ ತಿಳಿಸಿದರು. ಈ ವೇಳೆ ಕಟಕಟೆಯಲ್ಲಿ ನಿಂತಿದ್ದ ಆರೋಪಿ ಸಿಯಾ, ಶ್ರೀವಾಸ್ತವ ತಮ್ಮ ವಕೀಲರಲ್ಲ, ಬದಲಿಗೆ ವಕೀಲ ವಿಪುಲ್ ದುಶಿಂಗ್ ಅವರು ತಮ್ಮ ಪರವಾಗಿ ವಾದಿಸಲಿದ್ದಾರೆ ಎಂದು ಜಡ್ಜ್ ಎದುರೇ ನೇರವಾಗಿ ಹೇಳಿದರು. ಸಿಯಾ ಕುಟುಂಬಸ್ಥರು ಸಹ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿ, ವಿಪುಲ್ ದುಶಿಂಗ್ ಅವರೇ ಅಧಿಕೃತ ವಕೀಲರು ಎಂದು ಪುನರುಚ್ಚರಿಸಿದರು.

ವಕೀಲರ ವಾದವೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ಶ್ರೀವಾಸ್ತವ, "ನಮ್ಮ ಕಾನೂನು ತಂಡವು ಸಿಯಾ ಗೋಯಲ್ ಅವರನ್ನು ನೇರವಾಗಿ ಭೇಟಿಯಾಗಿತ್ತು. ಆಕೆಗೆ ಕಾನೂನು ನೆರವಿನ ಅಗತ್ಯವಿದ್ದ ಕಾರಣ ಆಕೆಯೇ ಸ್ವಇಚ್ಛೆಯಿಂದ ವಕಾಲತ್ತುನಾಮೆಗೆ ಸಹಿ ಹಾಕಿದ್ದಾಳೆ. ಸಿಯಾ ಚಿಕ್ಕ ಹುಡುಗಿಯೇನಲ್ಲ. ಅವಳಿಗೆ ಒಳ್ಳೆಯದನ್ನು ನಿರ್ಧರಿಸುವ ಹಕ್ಕಿದೆ. ಆದರೆ, ನಾವು ಸಾಹಿಲ್​ ಜೊತೆ ಮಾತನಾಡಿಯೇ ಇಲ್ಲ. ಬಾಂಬೆ ಹೈಕೋರ್ಟ್‌ವರೆಗೂ ಮಾನ್ಯತೆ ಇರುವ ಈ ದಾಖಲೆಯಲ್ಲಿ ಆಕೆಯ ನಿಜವಾದ ಸಹಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೊಲೆ ಪ್ರಕರಣದ ಹಿನ್ನೆಲೆ

ಇನ್ನೊಂದೆಡೆ, ಪೊಲೀಸರು ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್​ ಚೌಧರಿಯನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೇವಲ 20 ವರ್ಷದ ಸಿಯಾ ಗೋಯಲ್, ತನಗೆ ನಿಶ್ಚಯವಾಗಿದ್ದ ಉದ್ಯಮಿ ಕೇತನ್ ಅಗರ್ವಾಲ್‌ನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಹಾಗಂತ ಮದುವೆ ಮುರಿದುಕೊಂಡರೆ ಕುಟುಂಬದ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ, 22 ವರ್ಷದ ಪ್ರಿಯಕರ ಚೌಧರಿ ಜೊತೆ ಸೇರಿ ಕೇತನ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.
ಇವರಿಬ್ಬರು ಒಟ್ಟಿಗೆ ಪುಣೆಯ ಲೋಹಗಢ ಕೋಟೆಗೆ ಭೇಟಿ ನೀಡಿ, ಎಲ್ಲಿಂದ ತಳ್ಳಿದರೆ ಕೇತನ್​ ಸಾಯಬಹುದು ಎಂಬುದನ್ನು ಗುರುತಿಸಿದ್ದರು. ನಂತರ ಕೇತನ್‌ನನ್ನು ಅದೇ ಲೋಹಗಢ ಕೋಟೆಯ ಕಂದಕಕ್ಕೆ ತಳ್ಳಿ ಭೀಕರವಾಗಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಡಿಲೀಟ್ ಆಗಿರುವ ಡಿಜಿಟಲ್ ಡೇಟಾವನ್ನು ರಿಕವರಿ ಮಾಡಲು ಯತ್ನಿಸುತ್ತಿದ್ದು, ಸಾಕ್ಷ್ಯ ನಾಶಪಡಿಸಲು ಎಸೆದಿದ್ದ ಕೇತನ್‌ನ ಪಾಸ್‌ಪೋರ್ಟ್ ಪತ್ತೆ ಹಚ್ಚುತ್ತಿದ್ದಾರೆ. ತನಿಖೆ ಚುರುಕಾಗಿ ಸಾಗುತ್ತಿರುವ ಬೆನ್ನಲ್ಲೇ ಈ ವಕೀಲರ ವಿವಾದ ಪ್ರಕರಣಕ್ಕೆ ಹೊಸ ತಿರುವು ನೀಡಿದೆ (ಏಜೆನ್ಸೀಸ್​).