ನವದೆಹಲಿ: ಕಳದೆ ಅಕ್ಟೋಬರ್ ಮೊದಲ ವಾರದಲ್ಲಿ ಸುಪ್ರೀಂಕೋರ್ಟ್ನಲ್ಲಿ ಸಿಜೆಐ ಆಗಿದ್ದ ಬಿ.ಆರ್.ಗವಾಯಿ ಮೇಲೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್ಗೆ(Rakesh Kishor) ಇಂದು(ಡಿ. 09) ದೆಹಲಿ ಕಾರ್ಕಾರ್ಡೂಮಾ ಕೋರ್ಟ್ ಆವರಣದಲ್ಲೇ ಕೆಲವರು ಚಪ್ಪಲಿಯಿಂದ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಅವರನ್ನು ಚಪ್ಪಲಿಯಿಂದ ಹೊಡೆಯುವುದು ಕಾಣುತ್ತಿದ್ದು, ಅದರಲ್ಲಿ ಹಲ್ಲೆ ಮಾಡುತ್ತಿರುವ ವ್ಯಕ್ತಿ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾ "ಸನಾತನ ಧರಮ್ ಕಿ ಜೈ ಹೋ ಎಂದು ಹೇಳುತ್ತಾ ಹಲ್ಲೆ ಮಾಡಿದ್ದಾನೆ. ಅದಕ್ಕೆ ಪ್ರತಿಯಾಗಿ ರಾಕೇಶ್ ಕಿಶೋರ್ ಸಹ ವಿರೋಧಿಸುತ್ತಿದ್ದು, ಜೊತೆಗಿದ್ದ ಮಹಿಳೆಯೊಬ್ಬರು ಹೊಡೆಯುವ ವ್ಯಕ್ತಿಯನ್ನು ನಿಲ್ಲಿಸುವಂತೆ ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಕುರಿತು ಎಎನ್ಐ ಜೊತೆ ಮಾತನಾಡಿರುವ ರಾಕೇಶ್ ಕಿಶೋರ್, ಇಂದು ಕಾರ್ಕಾರ್ಡೂಮಾ ಕೋರ್ಟ್ನಲ್ಲಿ 100-150 ಜನರು ತಮ್ಮ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಆ ಜನರು ನನ್ನನ್ನು ಹೊಡೆಯುತ್ತಿದ್ದಾಗ, ನಾನು ಅವರನ್ನು ಯಾಕೆ ಹಾಗೆ ಮಾಡುತ್ತಿದ್ದೀರಿ ಎಂದು ಕೇಳಿದೆ. ಅವರು ಆಗಿನ ಸಿಜೆಯ ಗವಾಯಿ ಮೇಲೆ ಘಟನೆಗೆ ಪ್ರತಿಯಾಗಿ ಹೊಡೆಯುತ್ತಿರುವುದಾಗಿ ಹೇಳಿದರು. ಜೊತೆಗೆ ಹಲ್ಲೆ ಮಾಡಿದವರು ಸನಾತನ ಧರ್ಮವನ್ನೂ ಅವಮಾನಿಸಿದರು ಎಂದು ತಿಳಿಸಿದ್ದಾರೆ.
ಅ. 5ರಂದು ಸುಪ್ರೀಂಕೋರ್ಟ್ನಲ್ಲಿ 71 ವರ್ಷದ ವಕೀಲ ರಾಕೇಶ್ ಕಿಶೋರ್ ವಿಚಾರಣೆ ನಡೆಯುವ ವೇಳೆಯೇ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದರು. ತಕ್ಷಣ ಭದ್ರತಾ ಸಿಬ್ಬಂದಿ ಅವರನ್ನು ಬಂಧಿಸಿ ಹೊರಗೆ ಕರೆದೊಯ್ದಿದ್ದರು. ಈ ವೇಳೆ ಸನಾತನ ಧರ್ಮದ ಅವಮಾನವನ್ನು ಸಹಿಸಲ್ಲ ಎಂದು ಘೋಷಣೆ ಕೂಗಿದ್ದರು.
ಮಧ್ಯಪ್ರದೇಶದಲ್ಲಿ ಹಾನಿಗೊಳಗಾದ ವಿಷ್ಣು ವಿಗ್ರಹದ ಪುನಃಸ್ಥಾಪನೆಗೆ ಸಂಬಂಧಿಸಿದ ವಿಚಾರಣೆಯ ಸಮಯದಲ್ಲಿ "ಹೋಗಿ ದೇವರನ್ನೇ ಕೇಳಿ" ಎಂದು ನ್ಯಾ. ಗವಾಯಿ ಹೇಳಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಅವರ ಮೇಲೆ ಟೀಕೆಗಳು ಬಂದವು. ಅದರ ಬಳಿಕ ಈ ಘಟನೆ ನಡೆದಿತ್ತು. ಇನ್ನೂ ಅವರನ್ನು ಏನೂ ಮಾಡದಂತೆ, ಘಟನೆಯನ್ನು ನಿರ್ಲಕ್ಷ್ಯಿಸುವಂತೆ ಸಿಜೆಐ ಆಗಿದ್ದ ಗವಾಯಿ ಹೇಳಿದ್ದರು (ಏಜೆನ್ಸೀಸ್).