ಕೊಲೆಗಡುಕಿ ಮಗಳ ವಿರುದ್ಧ ಚಿಕ್ಕಪ್ಪ ಸ್ಫೋಟಕ ಹೇಳಿಕೆ  
ದೇಶ

ತಾಯಿ ಮಾತ್ರವಲ್ಲ! ತಂದೆಯ ಉಸಿರು ನಿಲ್ಲಿಸಿದ್ದು ಈ ಪಾಪಿಯೇ; ಕೊಲೆಗಡುಕಿ ಮಗಳ ವಿರುದ್ಧ ಚಿಕ್ಕಪ್ಪ ಸ್ಫೋಟಕ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಆಸ್ತಿ ಮತ್ತು ಸರ್ಕಾರಿ ಉದ್ಯೋಗಕ್ಕಾಗಿ ಹೆತ್ತ ತಾಯಿಯನ್ನೇ ಮುಗಿಸಿದ ಮಗಳು
  • ಕಾರು ಗುದ್ದಿಸಿ ಅಪಘಾತ ಎನ್ನುವಂತೆ ಬಿಂಬಿಸಿ ಕೊಲೆ
  • ತಾಯಿ ಮಾತ್ರವಲ್ಲ ತಂದೆಯನ್ನೇ ಕೊಲೆ ಮಾಡಿದ್ದು ಈಕೆಯ ಎಂದು ಚಿಕ್ಕಪ್ಪ ಆರೋಪ
ರಾಜಸ್ಥಾನ: ಜೈಪುರದಲ್ಲಿ ಕುಟುಂಬದ ಆಸ್ತಿ ಮತ್ತು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ಸಲುವಾಗಿ ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿಸಿದ ಕಾನೂನು ವಿದ್ಯಾರ್ಥಿನಿ ವಿರುದ್ಧ ಇದೀಗ ಮತ್ತೊಂದು ಸ್ಪೋಟಕ ಆರೋಪವೊಂದು ಕೇಳಿಬಂದಿದೆ.
ಜೈಪುರ ನ್ಯಾಯಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ನೀರಜ್ ಶರ್ಮಾರ ಮೇಲೆ ಜುಲೈ 3ರಂದು ಕಾರು ಹರಿಸಿ ಅಪಘಾತದ ರೂಪದಲ್ಲಿ ಕೊಲೆ ಮಾಡಿಸಿದ ಮಗಳು, ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿ ಆಯುಷಿ ಸದ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾಳೆ. ಈ ಪ್ರಕರಣದ ತನಿಖೆಯನ್ನು ಸದ್ಯ ಪೊಲೀಸರು ಚುರುಕುಗೊಳಿಸಿದ್ದಾರೆ. ಇದರ ನಡುವೆಯೇ ಆರೋಪಿಯ ಚಿಕ್ಕಪ್ಪ ರಾಕೇಶ್ ಶರ್ಮಾ, ಕಳೆದ ವರ್ಷ ತಂದೆಯನ್ನೂ ಕೊಲೆ ಮಾಡಿದ್ದು ಈಕೆಯೇ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.

3 ತಿಂಗಳು ಕತ್ತಲು ಕೋಣೆಯಲ್ಲಿ ತಂದೆ

ಹೊಸ ಬಾಂಬ್ ಸಿಡಿಸಿರುವ ರಾಕೇಶ್ ಶರ್ಮಾ, ಕಳೆದ ವರ್ಷ ಆರೋಪಿಯ ತಂದೆ ವಿಜಯ್ ಶರ್ಮಾ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿತ್ತು. ಆಯುಷಿ ಮತ್ತು ಬಲರಾಮ್ ಸೇರಿ ಅವರನ್ನು ಯಾರಿಗೂ ತಿಳಿಸದೆ ಯಾವುದೋ ದೂರದ ಆಸ್ಪತ್ರೆಗೆ ದಾಖಲಿಸಿದ್ದರು. ಮೂರು ತಿಂಗಳ ಕಾಲ ತಂದೆಯ ಚಿಕಿತ್ಸೆಯ ಬಗ್ಗೆ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೆ, ಅವರ ಮುಖ ನೋಡಲು ಸಹ ಬಿಟ್ಟಿರಲಿಲ್ಲ ಎಂದಿದ್ದಾರೆ.
ಇದರಿಂದ ಅನುಮಾನಗೊಂಡ ತಾಯಿ ಮಗಳನ್ನು ಪದೇ ಪದೇ ಪ್ರಶ್ನಿಸಿದಾಗ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾಗಿ ಸುಳ್ಳು ಹೇಳಿದ್ದಳು. ಕೊನೆಗೆ ವಿಜಯ್​ರನ್ನು ಬಹುದಿನಗಳ ಬಳಿಕ ಮನೆಗೆ ಕರೆತಂದಾಗ ಅವರ ಹಲವು ಅಂಗಾಂಗಗಳು ವೈಫಲ್ಯಗೊಂಡಿದ್ದವು. ಆಯುಷಿಯೇ ತನ್ನ ತಂದೆಗೆ ಅಳವಡಿಸಲಾಗಿದ್ದ ಫೀಡಿಂಗ್ ಟ್ಯೂಬ್ ಅನ್ನು ಉದ್ದೇಶಪೂರ್ವಕವಾಗಿ ಕಿತ್ತೆಸೆದು, ಅವರು ಸಾಯುವಂತೆ ಮಾಡಿದ್ದಾಳೆ ಎಂದು ರಾಕೇಶ್ ಆರೋಪಿಸಿದ್ದಾರೆ.

ತಾಯಿ ಕೊಲೆಗೆ 7 ಲಕ್ಷ ರೂ. ಸುಪಾರಿ!

ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ಆಯುಷಿ ತನ್ನ ಸೋದರಸಂಬಂಧಿ ಬಲರಾಮ್ ಸಹಾಯದೊಂದಿಗೆ ತಾಯಿಯನ್ನು ಮುಗಿಸಲು 7 ಲಕ್ಷ ರೂ. ಕೊಟ್ಟು ಕೊಲೆಗೆ ಸುಪಾರಿ ನೀಡಿದ್ದಳು. ಜುಲೈ 3ರಂದು ನೀರಜ್ ಶರ್ಮಾ ಅವರು ತಮ್ಮ ಕಿರಿಯ ಮಗನನ್ನು ಕೋಚಿಂಗ್ ಸೆಂಟರ್‌ಗೆ ಬಿಟ್ಟು ವಾಪಸ್ ಬರುತ್ತಿದ್ದಾಗ, ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಅವರಿಗೆ ಡಿಕ್ಕಿ ಹೊಡೆಯಿತು. ರಸ್ತೆ ಅಪಘಾತದಂತೆ ಬಿಂಬಿಸಲು ಸಂಚು ರೂಪಿಸಲಾಗಿತ್ತು. ಇದಕ್ಕೂ ಒಂದು ತಿಂಗಳ ಮುಂಚೆಯೇ ಕೊಲೆಗೈಯಲು ಪ್ರಯತ್ನಿಸಲಾಗಿತ್ತು. ಆದ್ರೆ, ಟ್ರಾಫಿಕ್ ಸಮಸ್ಯೆಯಿಂದ ಆ ಪ್ರಯತ್ನ ವಿಫಲವಾಗಿತ್ತು ಎಂಬುದು ಶಾಕಿಂಗ್ ಸಂಗತಿ,(ಏಜೆನ್ಸೀಸ್).