ತಮಿಳುನಾಡು ಸಿಎಂ ವಿಜಯ್ 
ದೇಶ

ಆರ್​ಟಿಐ ವ್ಯಾಪ್ತಿಯಿಂದ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆ ಹೊರಗೆ; ವಿರೋಧದ ಬಳಿಕ ಆದೇಶ ಹಿಂಪಡೆದ ವಿಜಯ್ ಸರ್ಕಾರ | RTI

ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆಯನ್ನು ಮಾಹಿತಿ ಹಕ್ಕು ಕಾಯಿದೆಯ(RTI) ವ್ಯಾಪ್ತಿಯಿಂದ ಹೊರಗಿಡುವ ಆದೇಶವನ್ನು, ವಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರ ತೀವ್ರ ವಿರೋಧದ ಬಳಿಕ ಭಾನುವಾರ(ಸೆ. 27) ತಮಿಳುನಾಡು ಸರ್ಕಾರ ಹಿಂಪಡೆದಿದೆ.

ಚೆನ್ನೈ: ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆಯನ್ನು ಮಾಹಿತಿ ಹಕ್ಕು ಕಾಯಿದೆಯ(RTI) ವ್ಯಾಪ್ತಿಯಿಂದ ಹೊರಗಿಡುವ ಆದೇಶವನ್ನು, ವಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರ ತೀವ್ರ ವಿರೋಧದ ಬಳಿಕ ಭಾನುವಾರ(ಸೆ. 27) ತಮಿಳುನಾಡು ಸರ್ಕಾರ ಹಿಂಪಡೆದಿದೆ.

ಸೆ. 21ರಂದು ತಮಿಳುನಾಡಿನ ಟಿವಿಕೆ ಸರ್ಕಾರವು, ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆಯು ಗುಪ್ತಚರ ಮತ್ತು ಭದ್ರತಾ ಸಂಸ್ಥೆಯಾಗಿದೆ ಎಂಬ ಕಾರಣ ನೀಡಿ ಅದನ್ನು ಮಾಹಿತಿ ಹಕ್ಕು ಕಾಯ್ದೆ-2005ರ ವ್ಯಾಪ್ತಿಯಿಂದ ಹೊರಗಿಡುವ ಆದೇಶವನ್ನು ಹೊರಡಿಸಿತ್ತು

ಈ ಆದೇಶದ ಪ್ರಕಾರ, ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ವಿಭಾಗವು ಪೊಲೀಸ್ ಗುಂಡಿನ ದಾಳಿ, ಲಾಕಪ್​ ಡೆತ್​, ಪೊಲೀಸ್ ದೌರ್ಜನ್ಯ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದ ತನಿಖಾ ವರದಿಗಳಂತಹ ಅನೇಕ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಪಡೆಯಲು ಸಾಧ್ಯವಿರಲಿಲ್ಲ.

ಕಾನೂನು-ಸುವ್ಯವಸ್ಥೆ ಮತ್ತು ಪೊಲೀಸ್ ಜವಾಬ್ದಾರಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುವ ಸಾರ್ವಜನಿಕರ ಅವಕಾಶವನ್ನು ಈ ಆದೇಶ ನಿರ್ಬಂಧಿಸುತ್ತದೆ ಎಂದು ಸಾರ್ವಜನಿಕ ಟೀಕೆ ಕೇಳಿ ಬಂದ ಹಿನ್ನೆಲೆ ವಾಪಸ್ ಪಡೆದಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸರ್ಕಾರ, ಆರ್‌ಟಿಐ ಕಾಯ್ದೆ-2005ರ ಸೆಕ್ಷನ್ 24ರ ಉಪ-ವಿಭಾಗ (4)ರ ಅಡಿಯಲ್ಲಿ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆಗೆ ನೀಡಲಾಗಿದ್ದ ವಿನಾಯಿತಿಗೆ ಸಂಬಂಧಿಸಿದ, ಮಾನವ ಸಂಪನ್ಮೂಲ ನಿರ್ವಹಣೆ ಇಲಾಖೆಯ ದಿನಾಂಕ 21 ಸೆಪ್ಟೆಂಬರ್ 2026ರ ಸರ್ಕಾರಿ ಆದೇಶ ಸಂಖ್ಯೆ Ms.No 57 ಅನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ (ಏಜೆನ್ಸೀಸ್).