ಸಾಂದರ್ಭಿಕ ಚಿತ್ರ 
ದೇಶ

ಇಂದು ಪಶ್ಚಿಮ ಬಂಗಾಳದ ಕೊನೆಯ ಹಂತದ ಚುನಾವಣೆ; ರಾಜಧಾನಿ ಕೋಲ್ಕತ್ತಾ ಸೇರಿ 142 ಕ್ಷೇತ್ರಗಳಲ್ಲಿ ಮತದಾನ | West Bengal elections

ಕೋಲ್ಕತ್ತಾ: ತೀವ್ರ ಕೂತುಹಲ ಮೂಡಿಸಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ(West Bengal elections) ಕೊನೆಯ ಹಂತದ ಚುನಾವಣೆ ಇಂದು(ಏ. 29) ನಡೆಯುತ್ತಿದ್ದು, ರಾಜಧಾನಿ ಕೋಲ್ಕತ್ತಾದ 11 ಸ್ಥಾನಗಳು ಸೇರಿ ಒಟ್ಟು 142 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ 1,448 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆ 7ಗಂಟೆಗೆ ಮತದಾನ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಕಳೆದ ಏ. 23ರಂದು ಮೊದಲ ಹಂತದಲ್ಲಿ 152 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು,ಶೇ. 92ರಷ್ಟು ಮತದಾನವಾಗಿತ್ತು.
ಈ ಭಾರಿ ಟಿಎಂಸಿಯ ಭದ್ರ ಕೋಟೆ ಎಂದೇ ಬಿಂಬಿತವಾಗಿರುವ ದಕ್ಷಿಣ ಬಂಗಾಳದ 142 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಕಳೆದ 2021ರ ಚುನಾವಣೆಯಲ್ಲಿ ಈ ಭಾಗದಲ್ಲಿ ಟಿಎಂಸಿ 123 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿಯೂ ಟಿಎಂಸಿ ಅದೇ ಗೆಲುವಿನ ವಿಶ್ವಾಸದಲ್ಲಿದೆ.
41,001 ಕೇಂದ್ರಗಳಲ್ಲಿ ಮತದಾನ ನಡೆಯಲಿದ್ದು, ಎಲ್ಲಾ ಮತಗಟ್ಟೆಗಳನ್ನು ವೆಬ್‌ಕಾಸ್ಟಿಂಗ್ ಅಳವಡಿಸಲಾಗಿದೆ. ಚುನಾವಣಾ ಆಯೋಗವು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ನಿಯೋಜಿಸಿದ್ದು, ಏಳು ಜಿಲ್ಲೆಗಳಲ್ಲಿ 2,321 ಕೇಂದ್ರ ಪಡೆಗಳ ತಂಡಗಳನ್ನು ನಿಯೋಜಿಸಿದೆ. ಒಟ್ಟು 142 ಸಾಮಾನ್ಯ ವೀಕ್ಷಕರು, 95 ಪೊಲೀಸ್ ವೀಕ್ಷಕರು ಮತ್ತು 100 ಖರ್ಚು ವೀಕ್ಷಕರನ್ನು ನಿಯೋಜಿಸಲಾಗಿದೆ.
ಕೋಲ್ಕತ್ತಾದ ಭಬಾನಿಪುರ ಕ್ಷೇತ್ರ ದೇಶಾದ್ಯಂತ ಸದ್ದು ಮಾಡಲಿದ್ದು, ಅದು ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿರುವ ಸ್ವಕ್ಷೇತ್ರ. ಅವರನ್ನು ಬಿಜೆಪಿ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಎದುರಿಸಲಿದ್ದಾರೆ (ಏಜೆನ್ಸೀಸ್).