Landslide Buries Houses In Pune
- ಪುಣೆಯಲ್ಲಿ ಭಾರಿ ಮಳೆ ಮಾವಲ್ ಗ್ರಾಮದಲ್ಲಿ ಮೂರು ಕಡೆ ಭೂ ಕುಸಿತ.
- ಒಂದೇ ಕುಟುಂಬದ ಮೂವರು ನಾಪತ್ತೆಯಾಗಿರುವ ಮೂವರು ಮೃತ
- ಹಳೆಯ ಪುಣೆ-ಮುಂಬೈ ಹೈವೇ ಸಂಪೂರ್ಣ ಸ್ಥಗಿತ.
ಪುಣೆ: ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಜೋರಾಗಿದೆ. ನಿತ್ಯ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ಆಸ್ತಿ-ಪಾಸ್ತಿ ನಾಶ ಹಾಗೂ ಸಾವು ನೋವು ಸಂಭವಿಸುತ್ತಿದೆ. ಈ ಮಧ್ಯೆ ಪುಣೆಯಲ್ಲಿ ಮೂರು ಕಡೆ ಭಾರೀ ಭೂ ಕುಸಿತ(Landslide Buries Houses In Pune) ಉಂಟಾಗಿದ್ದು, ಐದು ಮನೆಗಳು ಅವಶೇಷಗಳಡಿ ಸಿಲುಕಿದೆ. ಮೂವರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದೆ.
ಮೂವರು ಮಣ್ಣಿನಲ್ಲಿ ಸಿಲುಕಿರುವ ಶಂಕೆ
ಪುಣೆಯ ಮಾವಲ್ ತಾಲೂಕಿನ ಹಳ್ಳಿಯೊಂದರಲ್ಲಿ ಭಾರಿ ಮಳೆಯಿಂದಾಗಿ ಮೂರು ಕಡೆ ಭೂಕುಸಿತ ಸಂಭವಿಸಿದೆ. ಈ ಪೈಕಿ ಒಂದು ಘಟನೆಯಲ್ಲಿ ಇಡೀ ಮನೆ ಮಣ್ಣಿನ ಅವಶೇಷಗಳಡಿ ಸಿಲುಕಿದ್ದು, ಒಂದೇ ಕುಟುಂಬದ ಮೂವರು ಸದಸ್ಯರು ಮೃತಪಟ್ಟಿದ್ದಾರೆ ಎಂದು ಲೋನಾವಾಲಾ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (DySP) ಗಜಾನನ್ ತೋಂಪೆ ತಿಳಿಸಿದ್ದಾರೆ.
ಭೂಕುಸಿತದ ಬಗ್ಗೆ ಎಮರ್ಜೆನ್ಸಿ ಕರೆ ರಾಷ್ಟ್ರೀಯ ವಿಪತ್ತು ಕಚೇರಿಗೆ ಬಂತು. ಕೂಡಲೇ ಪುಣೆಯಲ್ಲಿರುವ ಎನ್ಡಿಆರ್ಎಫ್ ಪಡೆಯ 30 ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿತ್ತು. ಅವರು ಅವಶೇಷಗಳ ಅಡಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸಂಪೂರ್ಣ ಸಂಚಾರ ಸ್ಥಗಿತ
ಭೂ ಕುಸಿತ ಸಂಭವಿಸಿದ ಪ್ರದೇಶದಲ್ಲಿ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಹಳೆಯ ಪುಣೆ-ಮುಂಬೈ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸವಾರರಿಗೆ ಭಾರಿ ಸಂಕಷ್ಟ ಉಂಟಾಗಿದೆ. ಯಶವಂತರಾವ್ ಚವಾಣ್ ಎಕ್ಸ್‌ಪ್ರೆಸ್‌ವೇ ಸಂಚಾರವನ್ನು ಕೂಡ ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಮಳೆಯಿಂದ ಜನಜೀವನ ಅಸ್ತವ್ಯಸ್ತ
ಮುಂಬೈ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರು ಹೈರಾಣಾಗಿದ್ದಾರೆ. ರೈಲು ಸಂಚಾರ ಸ್ಥಗಿತಗೊಂಡಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಎರಡು ದಿನದ ಹಿಂದೆ ವರುಣಾರ್ಭಟಕ್ಕೆ ಮರಗಳು ಉರುಳಿ ಇಬ್ಬರು ಮೃತಪಟ್ಟಿದ್ದರು ಜೂನ್ 30 ರಂದು, ಶಾಲಾ ಬಸ್ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ11 ವರ್ಷದ ಬಾಲಕ ಸಾವನ್ನಪ್ಪಿದ್ದ ಘಟನೆ ಬೆಳಕಿಗೆ ಬಂದಿತ್ತು, (ಏಜೆನ್ಸೀಸ್).