ಚೆನ್ನೈ: ವಿವಾದಿತ ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ 'ದೀಪತೂನ್' ಕಂಬದ ಬಳಿ ನ. 24ರಂದು ಒಂದು ಬಾರಿ ದೀಪ ಹಚ್ಚಲು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಸಿಎಂ ಸಿ.ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಧಿಕ್ಕರಿಸಿದ್ದು, ಹಲವು ವರ್ಷಗಳಿಂದ ಸಂಪ್ರದಾಯವಾಗಿ ಬೆಳಗಿಸಲಾಗುತ್ತಿದ್ದ ಉಚ್ಚಿಪಿಳ್ಳೈಯಾರ್ ಮಂಟಪದಲ್ಲೇ ಈ ಬಾರಿಯೂ ದೀಪ ಹಚ್ಚಲಾಗಿದೆ.
ಶುಕ್ರವಾರ(ನ. 20) ತಮಿಳುನಾಡಿನ ತಿರುಪರಂಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ(ದೀಪತೂನ್) ದೀಪ ಬೆಳಗಿಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಆದರೂ, ನ. 24ರಂದು ಕಾರ್ತಿಕ ದೀಪಂ ಪ್ರಯುಕ್ತ ತಾತ್ಕಾಲಿಕವಾಗಿ ವಿವಾದಿತ ದೀಪತೂನ್ನಲ್ಲಿ ಒಂದು ಬಾರಿ ದೀಪ ಬೆಳಗಲು ಅವಕಾಶ ನೀಡಿ ಮಧ್ಯಂತರ ಆದೇಶ ನೀಡಿತ್ತು.
ಜೊತೆಗೆ ಇದರಿಂದ ಆ ಸ್ಥಳದ ಮೇಲೆ ಯಾವುದೇ ಸಾಂಪ್ರದಾಯಿಕ, ಧಾರ್ಮಿಕ ಅಥವಾ ಮಾಲೀಕತ್ವದ ಹಕ್ಕು ಸ್ಥಾಪನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ದೀಪ ಬೆಳಗಿಸುವ ವೇಳೆ ದೇವಸ್ಥಾನದ ಅಧಿಕೃತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸ್ಥಳಕ್ಕೆ ತೆರಳಲು ಅನುಮತಿ ನೀಡಿ ಅದಕ್ಕೆ ಬೇಕಾದ ಕ್ರಮಕೈಗೊಳ್ಳುವಂತೆ ಆದೇಶ ನೀಡಿತ್ತು.
ಆದರೆ ನಿನ್ನೆ(ನ. 24) ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ವಿಜಯ್ ಸರ್ಕಾರ ಮಧುರೈ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಹೇರಿ ತಿರುಪನಕುಂದ್ರಂ ದೇವಾಲಯದ ಬಳಿ ಬರೋಬ್ಬರಿ 5,600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿತ್ತು. ಮತ್ತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಸೇರಿದಂತೆ 750ಕ್ಕೂ ಹೆಚ್ಚು ಬಿಜೆಪಿ ಮತ್ತು ಹಿಂದೂ ಮುನ್ನಣಿ ಸಂಘಟನೆಯ ನಾಯಕರನ್ನು ಗೃಹಬಂಧನದಲ್ಲಿರಿಸಿತ್ತು ಎನ್ನಲಾಗಿದೆ.
ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ದೀಪ ಬೆಳಗಿಸದ ಹಿನ್ನೆಲೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ದೇವಸ್ಥಾನ ದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಇನ್ನೂ ಬೆಟ್ಟದ ಮೇಲಿನ ದೀಪತೂನ್ನಲ್ಲಿ ದೀಪವನ್ನು ಯಾಕೆ ಬೆಳಗಿಸಲಿಲ್ಲ ಎಂಬುದರ ಕುರಿತು ಆಡಳಿತಾರೂಢ ಪಕ್ಷವಾಗಲಿ ಅಥವಾ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಾಗಲಿ ಇಲ್ಲಿಯವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ತಿರುಪನಕುಂದ್ರಂನಲ್ಲಿರುವ ಪ್ರಸಿದ್ದ ಗುಹಾಂತರ ಮುರುಗನ್ ದೇವಾಲಯದಲ್ಲಿ ಪ್ರತಿವರ್ಷದಂತೆ ಕಾರ್ತಿಕ ದೀಪಂ ಹಬ್ಬವನ್ನು ಆಚರಿಸಲಾಗ್ತಿದೆ. ಬೆಟ್ಟದ ಮೇಲೆ ಒಂದು ದೀಪಥೂನ್ ಇದೆ. ಅಲ್ಲಿಂದ 50 ಮೀಟರ್ ದೂರದಲ್ಲಿ ಮತ್ತೊಂದು ದರ್ಗಾವಿದೆ. 1920ರಿಂದ ಬೆಟ್ಟದ ಮೇಲಿನ ಮಾಲಿಕತ್ವದ ಬಗ್ಗೆ ಹಿಂದೂ-ಮುಸ್ಲಿಂ ನಡುವೆ ವಿವಾದವಿದೆ ಎನ್ನಲಾಗಿದೆ.
ಕಳೆದ ವರ್ಷ ಕಾರ್ತಿಕ ದೀಪಂ ಹಬ್ಬದಲ್ಲಿ ಬೆಟ್ಟದ 'ದೀಪಥೂನ್' ಸ್ತಂಭದಲ್ಲಿ ಭಕ್ತರಿಗೆ 'ದೀಪ' ಬೆಳಗಲು ಅವಕಾಶ ನೀಡುವಂತೆ ಕೋರಿ ಹಿಂದೂ ತಮಿಳರ್ ಕಚ್ಚಿ ಸಂಸ್ಥಾಪಕ ರಾಮ ರವಿಕುಮಾರ್ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. 2025 ಡಿ. 01ರಂದು ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠದ ನ್ಯಾಯಮೂರ್ತಿ ಜಿ ಸ್ವಾಮಿನಾಥನ್ ನೇತೃತ್ವದ ಏಕಸದಸ್ಯ ಪೀಠವು, ಬೆಟ್ಟದ ಮೇಲೆ ದೀಪ ಬೆಳಗಲು ಅವಕಾಶ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಸಮಾಜದ ಶಾಂತಿಭಂಗದ ನೆಪವೊಡ್ಡಿ ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲೂ ವಿವಾದಿತ ದೀಪತೂನ್ ಬಳಿ ದೀಪ ಬೆಳಗಿಸಲು ಅನುಮತಿ ನೀಡಿದ್ದ ಮಧುರೈ ಹೈಕೋರ್ಟ್ ಪೀಠದ ಆದೇಶವನ್ನು ಕೋಮು ಸೌಹಾರ್ಧತೆಯ ನೆಪವೊಡ್ಡಿ ಆದೇಶವನ್ನು ದಿಕ್ಕರಿಸಿ ಡಿ. 03ರಂದು ನಡೆದ ಕಾರ್ತಿಕ ದೀಪಂ ಹಬ್ಬದ ವೇಳೆ ಬೆಟ್ಟದ ಮೇಲೆ ದೀಪ ಹಚ್ಚದೇ ಪ್ರತಿ ವರ್ಷ ನಡೆದು ಬಂದ ರೀತಿಯಲ್ಲಿ ದೇವಾಲಯದಲ್ಲಿ ಮಾತ್ರ ದೀಪ ಬೆಳಗಿಸಿತ್ತು. ಈ ಸಂಬಂಧ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆ ನಡೆಯುತ್ತಿದೆ (ಏಜೆನ್ಸೀಸ್).