Lamp Lighting Row | ಲೋಕಸಭೆಯ ಸ್ಪೀಕರ್‌ಗೆ 120 ಸದಸ್ಯರ ಸಹಿಗಳುಳ್ಳ ನೋಟಿಸ್ ಸಲ್ಲಿಸಿದ ಇಂಡಿಯಾ ಒಕ್ಕೂಟದ ಸಂಸದರ ನಿಯೋಗ  
ದೇಶ

Lamp Lighting Row | ದೀಪ ಬೆಳಗಿಸುವ ವಿವಾದ; ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಮಹಾಭಿಯೋಗ ಪ್ರಕ್ರಿಯೆಗೆ ವಿಪಕ್ಷಗಳ ಒತ್ತಾಯ

ದೆಹಲಿ: ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಜಿ.ಆರ್. ಸ್ವಾಮಿನಾಥನ್ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ನಡೆಸುವಂತೆ ಒತ್ತಾಯಿಸಿ ಡಿಎಂಕೆ ಸೇರಿದಂತೆ ಇಂಡಿಯಾ ಒಕ್ಕೂಟದ ಸಂಸದರ ನಿಯೋಗ ಮಂಗಳವಾರ (ಡಿ.9) ಲೋಕಸಭೆಯ ಸ್ಪೀಕರ್‌ಗೆ 120 ಸದಸ್ಯರ ಸಹಿಗಳುಳ್ಳ ನೋಟಿಸ್ ಸಲ್ಲಿಸಿದೆ.
ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೊಳಿ, ಸಂಸದ ಟಿಆರ್ ಬಾಲು, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಹಾಭಿಯೋಗದ ನೋಟಿಸ್ ನೀಡಿದ್ದಾರೆ.
ಇಂದು ಹೊರಡಿಸಲಾದ ಮಹಾಭಿಯೋಗ ಸೂಚನೆಯ ಪ್ರಕಾರ, ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಪದಚ್ಯುತಿಗಾಗಿ ಭಾರತದ ಸಂವಿಧಾನದ 124 ನೇ ವಿಧಿಯೊಂದಿಗೆ ಓದಲಾದ 217 ನೇ ವಿಧಿಯ ಅಡಿಯಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. ನ್ಯಾಯಾದೀಶ ಸ್ವಾಮಿನಾಥನ್ ನಡವಳಿಕೆಯು ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ, ಅವರ ತೀರ್ಪುಗಳು ರಾಜಕೀಯ ಸಿದ್ಧಾಂತದಿಂದ ಪ್ರಭಾವಿತವಾಗಿವೆ, ಇದು ಜಾತ್ಯತೀತ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಭಾರತದ ರಾಷ್ಟ್ರಪತಿ ಮತ್ತು ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾದ ಪತ್ರಗಳ ಪ್ರತಿಗಳನ್ನು ಸಹ ಈ ಪ್ರಸ್ತಾವನೆಯೊಂದಿಗೆ ಲಗತ್ತಿಸಲಾಗಿದೆ.
 ಏನಿದು ವಿವಾದ..?
ದೇವಾಲಯ ಮತ್ತು ಹತ್ತಿರದ ದರ್ಗಾ ಹೊಂದಿರುವ ತಿರುಪರಂಕುಂದ್ರಂನಲ್ಲಿರುವ ಬೆಟ್ಟದ ಮೇಲೆ ಸಾಂಪ್ರದಾಯಿಕ ಕಾರ್ತಿಕ ದೀಪವನ್ನು ಬೆಳಗಿಸುವ ಆಚರಣೆಗೆ ಅನುಮತಿ ನೀಡಿದ ಆದೇಶದ ಬಳಿಕ ವಿಪಕ್ಷಗಳು ಮಹಾಭಿಯೋಗ ಕ್ರಮದ ನಿರ್ಧಾರಕ್ಕೆ ಬಂದಿವೆ.
ನ್ಯಾಯಾಧೀಶರ ತೀರ್ಪಿನ ಪ್ರಕಾರ, ಡಿಸೆಂಬರ್ 4 ರೊಳಗೆ "ದೀಪಥೂನ್" ಕಂಬದ ಮೇಲೆ ದೀಪವನ್ನು ಬೆಳಗಿಸಬೇಕಿತ್ತು. ದೇವಾಲಯದ ಅಧಿಕಾರಿಗಳು ಮತ್ತು ದರ್ಗಾ ಆಡಳಿತ ಮಂಡಳಿಯ ಆಕ್ಷೇಪಣೆಗಳನ್ನು ನ್ಯಾಯಾಲುಯದ ತೀರ್ಪು ತಿರಸ್ಕರಿಸಿತು ಮತ್ತು ಇದು ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಪ್ರತಿಪಾದಿಸಿತು. ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಸೀಮಿತ ಜನಕ್ಕೆ ಈ ಆಚರಣೆಯನ್ನು ಮಾಡಲು ಅವಕಾಶ ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿತ್ತು.
ಈ ನಡುವೆ ಕಾನೂನು ಮತ್ತು ಸುವ್ಯವಸ್ಥೆಯ ಕಾರಣವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವು ತೀರ್ಪನ್ನು ಜಾರಿಗೆ ತರಲು ನಿರಾಕರಿಸಿತು. ಇದು ಹಿಂದೂ ಪರ ಸಂಘಟನೆಗಳ ಕಣ್ಣು ಕೆಂಪಾಗಿಸಿತು. ಆದ್ದರಿಂದ ರಾಜ್ಯದಲ್ಲಿ ಪ್ರತಿಭಟನೆಗಳು, ಪೊಲೀಸರೊಂದಿಗೆ ಘರ್ಷಣೆಗಗಳು ಆರಂಭವಾದವು. ಈಗ ಈ ಪ್ರಕರಣ ರಾಜಕೀಯ ಮತ್ತು ನ್ಯಾಯಾಂಗದ ಸಂಘರ್ಷವಾಗಿ ಮಾರ್ಪಟ್ಟಿದೆ.

ಬಿಜೆಪಿ ತಿರುಗೇಟು..

ಮಹಾಭಿಯೋಗ ಕ್ರಮಕ್ಕೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇಂಡಿಯಾ ಬ್ಲಾಕ್ ಗೌರವದ ಬ್ಯಾಡ್ಜ್‌ನಂತೆ ತಮ್ಮ ಹಿಂದೂ ವಿರೋಧಿ ನಡೆಗಳನ್ನು ಪುನರಾವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಬಾಕಿ ಉಳಿದಿದ್ದರೂ, ಮಹಾಭಿಯೋಗ ನಿರ್ಣಯವು ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕೀಯದ ಭಾಗವಾಗಿದೆ ಎನ್ನುವುದನ್ನು ಸಂಸದರ ಈ ನಡೆ ಬಹಿರಂಗಪಡಿಸಿದೆ. ಈ ಕ್ರಮವು ರಾಜಕೀಯ ಒತ್ತಡದ ಮೂಲಕ ತೀರ್ಪುಗಳನ್ನು ಪ್ರಶ್ನಿಸಬಹುದು ಎಂಬ ಸಂದೇಶವನ್ನು ರವಾನಿಸಿದ್ದು, ಇದು ಸಾಂವಿಧಾನಿಕ ಮೌಲ್ಯಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಅಣ್ಣಾಮಲೈ ಕಳವಳ ವ್ಯಕ್ತಪಡಿಸಿದರು(ಏಜೆನ್ಸೀಸ್​).