ಯೂಟ್ಯೂಬರ್ ಅನುರಾಗ್ ದ್ವಿವೇದಿ
- ಯೂಟ್ಯೂಬ್ ಮೂಲಕ ಇಂದು ಲಕ್ಷಾಂತರ ಮಂದಿ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ
- ಕೆಲ ಯೂಟ್ಯೂಬರ್ಗಳು ಜೂಜಾಟದ ಆ್ಯಪ್ಗಳನ್ನು ಪ್ರಚಾರ ಮಾಡಿ ಅಕ್ರಮ ಹಣ ಸಂಪಾದಿಸುತ್ತಿದ್ದಾರೆ
- ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ದಾಳಿ ಮಾಡುವ ಮಟ್ಟದಲ್ಲಿ ಹಣ ಗಳಿಸುತ್ತಿದ್ದಾರೆ
- ಉತ್ತರ ಪ್ರದೇಶದ ಉನ್ನಾವೋ ಮೂಲದ ಯೂಟ್ಯೂಬರ್ ಇದೀಗ ಇಡಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ
ನವದೆಹಲಿ: ಇಂದಿನ ಇಂಟರ್ನೆಟ್ ಜಗತ್ತಿನಲ್ಲಿ ಚಾಂಪಿಯನ್ ಆಗಿರುವ ಯೂಟ್ಯೂಬ್ ( YouTuber ) ಕೇವಲ ಮನರಂಜನಾ ವೇದಿಕೆಯಾಗಿ ಮಾತ್ರವಲ್ಲದೆ, ಲಕ್ಷಾಂತರ ಜನರಿಗೆ ಜೀವನೋಪಾಯವಾಗಿಯೂ ಮಾರ್ಪಟ್ಟಿದೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ. ಭಾರತದಿಂದ ಯುನೈಟೆಡ್ ಸ್ಟೇಟ್ಸ್ವರೆಗೆ, ಯೂಟ್ಯೂಬ್ ಮೂಲಕ ಲಕ್ಷಾಂತರ ಡಾಲರ್ಗಳಿಸುವ ಅನೇಕ ಕಂಟೆಂಟ್ ಕ್ರಿಯೆಟರ್ಸ್ ಇದಾರೆ. ಕಂಟೆಂಟ್ ಕ್ರಿಯೆಟರ್ಗಳು ಯೂಟ್ಯೂಬ್ ಮೂಲಕ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ಇಲ್ಲಿ ಕೇವಲ ಯುವಕರು, ವಯಸ್ಕರು ಮಾತ್ರವಲ್ಲ, ಮಕ್ಕಳು ಕೂಡ ಯೂಟ್ಯೂಬ್ ಮೂಲಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ಆದರೆ, ಕೆಲ ಯೂಟ್ಯೂಬರ್ಗಳು ಜೂಜಾಟದ ಆ್ಯಪ್ಗಳನ್ನು ಪ್ರಚಾರ ಮಾಡುವ ಮೂಲಕ ಅಕ್ರಮವಾಗಿ ಹೆಚ್ಚಿನ ಹಣವನ್ನು ಗಳಿಸುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ದಾಳಿ ಮಾಡುವ ಮಟ್ಟದಲ್ಲಿ ಹಣ ಗಳಿಸುತ್ತಿದ್ದಾರೆ.
ಹೌದು, ಉತ್ತರ ಪ್ರದೇಶದ ಉನ್ನಾವೋ ಮೂಲದ ಯೂಟ್ಯೂಬರ್ ಇದೀಗ ಸಿಕ್ಕಿಬಿದ್ದಿದ್ದಾನೆ. ಆತನ ಹೆಸರು ಅನುರಾಗ್ ದ್ವಿವೇದಿ. ಆನ್‌ಲೈನ್ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ಆ್ಯಪ್ಗಳನ್ನು ಪ್ರಚಾರ ಮಾಡುವ ಮೂಲಕ ಕೋಟ್ಯಂತರ ಹಣವನ್ನು ಅಕ್ರಮವಾಗಿ ಗಳಿಕೆ ಮಾಡಿದ್ದಾನೆ. ಅದಕ್ಕೆ ಸಾಕ್ಷಿಯಾಗಿ ಈತನ ಗ್ಯಾರೇಜಿನಲ್ಲಿ ಹೈ ಎಂಡ್ ಸ್ಪೋರ್ಟ್ಸ್ ಕಾರುಗಳೇ ತುಂಬಿದ್ದು, ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾನೆ. ಆತನ ಬಗ್ಗೆ ತಿಳಿದ ಇಡಿ ಅಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಇಡಿ ಅಧಿಕಾರಿಗಳು, ಉನ್ನಾವೋದಲ್ಲಿರುವ ಅನುರಾಗ್ ದ್ವಿವೇದಿ ಮನೆಯಲ್ಲಿ ಶೋಧ ನಡೆಸಿದ ಸಮಯದಲ್ಲಿ, ಲಂಬೋರ್ಘಿನಿ ಉರುಸ್, BMW Z4 ಮತ್ತು ಮರ್ಸಿಡಿಸ್-ಬೆನ್ಜ್ ಸೇರಿದಂತೆ ನಾಲ್ಕು ಉನ್ನತ ದರ್ಜೆಯ ಕಾರುಗಳು ಪತ್ತೆಯಾಗಿವೆ. ಇದೆಲ್ಲ ಗ್ಯಾಂಬ್ಲಿಂಗ್ ಜಾಲದಿಂದ ಬಂದ ಹಣವಾಗಿದ್ದು, ಆತನ ಅಕ್ರಮ ಗಳಿಕೆಯ ಜಾಡನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ದ್ವಿವೇದಿ ಗಳಿಸಿದ ಹಣದ ಬಹುಪಾಲು ಭಾಗ ಸ್ಕೈ ಎಕ್ಸ್‌ಚೇಂಜ್ ಮತ್ತು ಇತರ ಜೂಜಿನ ಅಪ್ಲಿಕೇಶನ್‌ಗಳಿಂದ ಬಂದಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಈ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವ್ಯವಹಾರ ಮಾಡಲು ಅವಕಾಶ ನೀಡುತ್ತವೆ. ಆದರೆ, ಇದು ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಯಾಗಿದೆ. ಈ ಅಪ್ಲಿಕೇಶನ್‌ಗಳಿಂದ ಬರುವ ಆದಾಯವನ್ನು ವಿವಿಧ ವಿಧಾನಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿ, ನಂತರ ಐಷಾರಾಮಿ ಕಾರುಗಳು ಮತ್ತು ಇತರ ದುಬಾರಿ ವಸ್ತುಗಳನ್ನು ಖರೀದಿಸಲು ಬಳಸಲಾಗುತ್ತಿತ್ತು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಕ್ರಮ ಕೈಗೊಂಡಿದೆ. ಅಕ್ರಮ ಗಳಿಕೆಯಿಂದ ಖರೀದಿಸಿದ ಆಸ್ತಿಗಳನ್ನು ಮರೆಮಾಡಲು ಮತ್ತು ಅವುಗಳನ್ನು ಕಾನೂನುಬದ್ಧವೆಂದು ಬಿಂಬಿಸಲು ದ್ವಿವೇದಿ ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಎಲ್ಲಾ ಆಸ್ತಿಗಳನ್ನು ಪತ್ತೆಹಚ್ಚಲು ಇಡಿ ಉನ್ನಾವೋದಲ್ಲಿರುವ ದ್ವಿವೇದಿಯ ಮನೆಯನ್ನು ಶೋಧಿಸಿದೆ.
ಅಂದಹಾಗೆ, ಈ ದ್ವಿವೇದಿ ಬೆಟ್ಟಿಂಗ್ ಮತ್ತು ಜೂಜಾಟದ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಲೆಂದೇ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾನೆ. ಸಾಕಷ್ಟು ಫಾಲೋವರ್ಸ್ ಹೊಂದಿರುವ ಕಾರಣ ಹೆಚ್ಚಿನ ಸಂಖ್ಯೆಯ ಜನರು ಈ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡಿದ್ದಾರೆ. ಇನ್ನು ಈ ನೆಟ್‌ವರ್ಕ್‌ನಲ್ಲಿ ಬೇರೆ ಯಾರು ಭಾಗಿಯಾಗಿದ್ದಾರೆ? ಎಷ್ಟು ಹಣವನ್ನು ಅಕ್ರಮವಾಗಿ ಗಳಿಸಲಾಗಿದೆ? ಮತ್ತು ಆ ಹಣವನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ? ಎಂಬುದನ್ನು ಕಂಡುಹಿಡಿಯಲು ಇಡಿ ಪ್ರಯತ್ನಿಸುತ್ತಿದೆ. ಅಕ್ರಮವಾಗಿ ಸಂಪಾದಿಸಿದವರ ಆಸ್ತಿಗಳನ್ನು ಮುಂದಿನ ದಿನಗಳಲ್ಲಿ ವಶಪಡಿಸಿಕೊಳ್ಳಲಾಗುತ್ತದೆ. ಅಲ್ಲದೆ, ಅವರ ವಿರುದ್ಧ ಕಠಿಣ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುತ್ತದೆ.
ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ಗಳನ್ನು ಪ್ರಚಾರ ಮಾಡುವಲ್ಲಿ ದ್ವಿವೇದಿ ಸಕ್ರಿಯನಾಗಿದ್ದ. ಅಲ್ಲದೆ, ಈ ಜಾಲದಲ್ಲಿ ಮಹತ್ವದ ಪಾತ್ರ ವಹಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಪ್ರಚಾರದ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಪ್ರಸಾರ ಮಾಡುತ್ತಿದ್ದ. ಇದಕ್ಕಾಗಿ ಹವಾಲಾ ಮೂಲಕ ಹಣ ಪಡೆಯುತ್ತಿದ್ದ ಎಂಬುದನ್ನು ಇಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಅಲ್ಲದೆ, ದ್ವಿವೇದಿ ಕಂಪನಿಗಳ ಬ್ಯಾಂಕ್ ಖಾತೆಗಳಲ್ಲಿ ಮತ್ತು ಅವರ ಕುಟುಂಬ ಸದಸ್ಯರ ಖಾತೆಗಳಲ್ಲಿ ಕಾನೂನುಬದ್ಧವಾಗಿರದ ದೊಡ್ಡ ಮೊತ್ತವನ್ನೇ ಸ್ವೀಕರಿಸಲಾಗಿದೆ. ಅಕ್ರಮ ಹಣದಲ್ಲಿ ಭಾರತದಿಂದ ಹೊರಗೆ, ವಿಶೇಷವಾಗಿ ದುಬೈನಲ್ಲಿ ಸ್ಥಿರ ಆಸ್ತಿಗಳನ್ನು ಸಹ ಖರೀದಿಸಿದ್ದಾನೆಂದು ತಿಳಿದುಬಂದಿದೆ, (ಏಜೆನ್ಸೀಸ್).