Tej Pratap Family 
ದೇಶ

ಕುಟುಂಬದ ಪುನರ್ಮಿಲನಕ್ಕೆ ಸಾಕ್ಷಿಯಾಯ್ತು ಸಂಕ್ರಾಂತಿ..ಪುತ್ರ ತೇಜ್​​ ಪ್ರತಾಪ್​ ಮನೆಯ ಸಂಭ್ರಮದಲ್ಲಿ ಲಾಲು ಹಾಜರ್​ | Tej Pratap Family

ಪಟನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬುಧವಾರ ತಮ್ಮ ಹಿರಿಯ ಪುತ್ರ, ಜನಶಕ್ತಿ ಜನತಾ ದಳ (ಜೆಜೆಡಿ) ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್​ರ ಪಾಟ್ನಾ ನಿವಾಸದಲ್ಲಿ ಮಕರ ಸಂಕ್ರಾಂತಿಯ ಹಿನ್ನಲೆಯಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ದಹಿ-ಚುರಾ ಔತಣಕೂಟದಲ್ಲಿ ಭಾಗವಹಿಸುವ ಮೂಲಕ ಕುಟುಂಬ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದೆ.
ಈ ಕಾರ್ಯಕ್ರಮದ ಫೋಟೋಗಳು ವೈರಲ್​ ಆಗಿದ್ದು, ತೇಜ್ ಪ್ರತಾಪ್ ತಮ್ಮ ತಂದೆ ಲಾಲು ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ, ಇದು ರಾಜಕೀಯ ವಲಯದಲ್ಲಿ ಸದ್ದು ಮಾಡಿದೆ.
ತೇಜ್​ ನಿವಾಸದಲ್ಲಿ ನಡೆದ ದಹಿ-ಚುರಾ ಆಚರಣೆಯಲ್ಲಿ ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ತೇಜ್ ಪ್ರತಾಪ್ ಯಾದವ್ ಮಾವ ಸಾಧು ಯಾದವ್ ಮತ್ತು ಪ್ರಭುನಾಥ್ ಯಾದವ್ ಕೂಡ ಭಾಗವಹಿಸಿದ್ದರು.

ಯಾದವಿ ಕಲಹ ಅಂತ್ಯವಾಯ್ತಾ..?

ಈ ಔತಣಕೂಟ ಲಾಲು ಯಾದವ್ ಕುಟುಂಬದಲ್ಲಿನ ಪುನರ್ಮಿಲನಕ್ಕೆ ಸಾಕ್ಷಿ ಎಂದು ಅನೇಕರು ವಿಶ್ಲೇಷಿಸಿದ್ದು, ಎಲ್ಲರೂ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸಂದೇಶವನ್ನು ದೇಶಕ್ಕೆ ಸಾರಿದೆ.

ತೇಜ್​ ಪ್ರತಾಪ್​ ಉಚ್ಛಾಟನೆಯಾಗಿದ್ದೇಕೆ..?

ತೇಜ್ ಪ್ರತಾಪ್ ಒಬ್ಬ ಮಹಿಳೆಯೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡ ಬಳಿಕ ಈ ವಿವಾದ ಹುಟ್ಟುಕೊಂಡಿದ್ದು, ಇದೇ ಕಾರಣದಿಂದ ತೇಜ್​ರನ್ನು ಮನೆಯಿಂದ ಆಚೆ ಹಾಕಿದರು.
ತೇಜ್​ ಪ್ರತಾಪ್​ರ ವರ್ತನೆಯಿಂದ ಅವಮಾನಕ್ಕೀಡಾದ ಕುಟುಂಬ ಇದು ಚುನಾವಣೆಯಲ್ಲಿ ಹಿನ್ನಡೆಯಾಗಬಹುದೆಂದು ಬೇಜವಾಬ್ದಾರಿಯುತ ವರ್ತನೆ ಎಂಬ ಕಾರಣ ನೀಡಿ ಲಾಲೂ ತಮ್ಮ ಹಿರಿಯ ಮಗನನ್ನು ಆರು ವರ್ಷಗಳ ಕಾಲ ಆರ್‌ಜೆಡಿಯಿಂದ ಹೊರಹಾಕಿದರು ಮತ್ತು ಸಾರ್ವಜನಿಕವಾಗಿ ಅವರೊಂದಿಗಿನ ಸಂಬಂಧವನ್ನು ಕಡಿದುಕೊಂಡರು.
ಈ ಎಲ್ಲಾ ಬೆಳವಣಿಗೆಯ ಬಳಿಕ ತೇಜ್ ಪ್ರತಾಪ್ ತಮ್ಮದೇ ಆದ ಹೊಸ ಪಕ್ಷವನ್ನು ಸ್ಥಾಪಿಸಿ, 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು, ಆದರೆ ಇದರಿಂದ ಯಾವುದೇ ರೀತಿಯ ಲಾಭವಾಗಲಿಲ್ಲ.

ಜನವರಿ 13 ರಂದು ಆಹ್ವಾನ ನೀಡಿದ್ದ ತೇಜ್ ಪ್ರತಾಪ್

ತೇಜ್ ಪ್ರತಾಪ್ ನಿನ್ನೆ ( ಜ 13) ಮಕರ ಸಂಕ್ರಾಂತಿ ಹಬ್ಬಕ್ಕೆ ಆಹ್ವಾನ ನೀಡಿದ್ದರು. ಈ ವಿಷಯವಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅವರು, 10 ಸರ್ಕ್ಯುಲರ್ ರಸ್ತೆಯಲ್ಲಿರುವ ನನ್ನ ಹೆತ್ತವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದೆ ಮತ್ತು ಜನವರಿ 14 ರಂದು ನಿಗದಿಯಾಗಿರುವ ಐತಿಹಾಸಿಕ ದಹಿ-ಚುರಾ ಭೋಜ್ ಗೆ ವೈಯಕ್ತಿಕವಾಗಿ ಆಹ್ವಾನಿಸಿದ್ದೆ ಎಂದು ಬರೆದುಕೊಂಡಿದ್ದಾರೆ.
ತಮ್ಮ ಸಹೋದರ, ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿ, ತಮ್ಮ ಸೊಸೆ ಕಾತ್ಯಾಯನಿಯೊಂದಿಗೆ ಸಮಯ ಕಳೆದಿದ್ದನ್ನು ಸಹ ಉಲ್ಲೇಖಿಸಿದ್ದಾರೆ. ಲಾಲು ಪ್ರಸಾದ್ ಯಾದವ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ, ತಂದೆ ಮತ್ತು ಮಗನ ನಡುವಿನ ಸಂಬಂಧಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿವೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ(ಏಜೆನ್ಸೀಸ್​).