ನವದೆಹಲಿ: ಆರ್ಜೆಡಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರಿಗೆ ಕಾನೂನು ಹೋರಾಟದಲ್ಲಿ ಮತ್ತೊಂದು ಹಿನ್ನಡೆಯಾಗಿದ್ದು, ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸಲು ಸೋಮವಾರ(ಏ. 13) ಸುಪ್ರೀಂಕೋರ್ಟ್ ನಿರಾಕರಿಸಿದೆ.
ಆದಾಗ್ಯೂ, ನ್ಯಾ. ಎಂ.ಎಂ. ಸುಂದ್ರೇಶ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ದ್ವಿಸದಸ್ಯ ಪೀಠವು, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17Aಯ ಅನ್ವಯಿಕತೆಯ ವಿಷಯವನ್ನು ಸೂಕ್ತ ಹಂತದಲ್ಲಿ ಎತ್ತಲು ಅವಕಾಶ ಮತ್ತು ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾತಿಯಿಂದ ಲಾಲು ಪ್ರಸಾದ್ ಯಾದವ್ ಅವರಿಗೆ ವಿನಾಯ್ತಿ ನೀಡಿದೆ.
2004ರಿಂದ 2009ರ ನಡುವೆ ಲಾಲು ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ಭಾರತೀಯ ರೈಲ್ವೆಯ ಪಶ್ಚಿಮ ಕೇಂದ್ರ ವಲಯದಲ್ಲಿ ಗ್ರೂಪ್ ಡಿ ನೇಮಕಾತಿಗಳಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಈ ಹಿಂದೆ ಸಿಬಿಐ ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಲಾಲು ಅವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಉದ್ಯೋಗಕ್ಕಾಗಿ ಭೂಮಿ ಆರೋಪ ಪ್ರಕರಣದಲ್ಲಿ, ಲಾಲು ಅವರ ಕುಟುಂಬ ಸದಸ್ಯರು ಅಥವಾ ಸಹಚರರ ಹೆಸರಿಗೆ ರೈಲ್ವೆ ಇಲಾಖೆಯಲ್ಲಿ ನೇಮಕಾತಿಗೊಂಡವರು ಉಡುಗೊರೆಯಾಗಿ ಭೂಮಿ ನೀಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ (ಏಜೆನ್ಸೀಸ್).