ಮೇಲ್ನೋಟಕ್ಕೆ ಮಕ್ಕಳಿಗೆ ನೀತಿ ಪಾಠ ಮಾಡುವ ಶಿಕ್ಷಕಿಯರು; ಒಳಗಡೆ ಮಾತ್ರ ಕರಾಳ ದಂಧೆಯ ಲೇಡಿ ಡಾನ್​ಗಳು! Lady Don  
ದೇಶ

ಮೇಲ್ನೋಟಕ್ಕೆ ಮಕ್ಕಳಿಗೆ ನೀತಿ ಪಾಠ ಮಾಡುವ ಶಿಕ್ಷಕಿಯರು; ಒಳಗಡೆ ಮಾತ್ರ ಕರಾಳ ದಂಧೆಯ ಲೇಡಿ ಡಾನ್​ಗಳು! Lady Don

ಪ್ರಮುಖ ಮುಖ್ಯಾಂಶಗಳು

  • ಸಮಾಜಕ್ಕೆ ನೈತಿಕತೆ ಹೇಳಿಕೊಡಬೇಕಾದ ಶಿಕ್ಷಕಿಯರೇ ಕರಾಳ ಎಂಡಿಎಂಎ ದಂಧೆಯ ಲೇಡಿ ಡಾನ್‌ಗಳು
  • ಶಾಲೆಯಲ್ಲಿ ನೀತಿ ಪಾಠ ರಹಸ್ಯವಾಗಿ ಡ್ರಗ್ಸ್ ಆಟ ನಡೆಸ್ತಿದ್ದ ಶಿಕ್ಷಕಿಯರು ಪೊಲೀಸರ ವಶಕ್ಕೆ
  • ಕ್ಯೂಆರ್ ಕೋಡ್ ಮೂಲಕ ಹಣ ಪಡೆದು ಲೊಕೇಶನ್ ಕಳುಹಿಸಿ ಡ್ರಗ್ಸ್ ಪೂರೈಸುತ್ತಿದ್ದ ಖತರ್ನಾಕ್ ಶಿಕ್ಷಕಿಯರು
  • ಖಾತೆಗೆ ಕೋಟಿ ಕೋಟಿ ಹಣ ವರ್ಗಾವಣೆ ಕೇರಳದಲ್ಲಿ ಬಯಲಾಯ್ತು ಶಿಕ್ಷಕಿಯರ ಹೈಟೆಕ್ ಡ್ರಗ್ಸ್ ಜಾಲ
ತಿರುವನಂತಪುರಂ: ಸಮಾಜಕ್ಕೆ ನೈತಿಕತೆ ಮತ್ತು ಉತ್ತಮ ಮೌಲ್ಯಗಳನ್ನು ಬೋಧಿಸಬೇಕಾದ ಶಿಕ್ಷಕಿಯರೇ ಇದೀಗ ಡ್ರಗ್ಸ್ ದಂಧೆಯ ಅಡ್ಡಾದಲ್ಲಿ 'ಲೇಡಿ ಡಾನ್‌'ಗಳಾಗಿ ( Lady Don ) ಕರಾಳ ಕೃತ್ಯವೆಸಗಿರುವ ಘಟನೆ ಕೇರಳದ ವಡಕರದಲ್ಲಿ ಬೆಳಕಿಗೆ ಬಂದಿದೆ.
ಪೆರಂಬ್ರ ಬಿಆರ್‌ಸಿಯಲ್ಲಿ ಶಿಕ್ಷಕಿಯರಾಗಿದ್ದ ಕೂರಾಚುಂಡು ಮೂಲದ ಕಾವ್ಯಾ ಮತ್ತು ಮರುತೋಂಕರಾ ಮೂಲದ ಕೀರ್ತನಾ ಎಂಬ ಇಬ್ಬರು ಖತರ್ನಾಕ್ ಮಹಿಳೆಯರು ಕೋಟಿ ಕೋಟಿ ಮೌಲ್ಯದ ಎಂಡಿಎಂಎ (MDMA) ದಂಧೆ ನಡೆಸುತ್ತಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಶಿಕ್ಷಕಿಯರ ವೇಷದಲ್ಲಿದ್ದ ಈ ಲೇಡಿ ಡಾನ್‌ಗಳ ಜಾಲವನ್ನು ಬಯಲಿಗೆಳೆಯಲು ವಡಕರ ಪೊಲೀಸರು ತೀವ್ರ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕೀರ್ತನಾ ಎಂಬಾಕೆಯನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈಕೆಯ ಬಂಧನದ ಬೆನ್ನಲ್ಲೇ ಶಿಕ್ಷಣ ಇಲಾಖೆ ಆಕೆಯನ್ನು ಸೇವೆಯಿಂದ ವಜಾಗೊಳಿಸಿತ್ತು. ಆಕೆಯ ಬಂಧನದ ನಂತರ ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತೊಬ್ಬ ಶಿಕ್ಷಕಿ ಕಾವ್ಯಾಳ ಕುರಿತು ಮಹತ್ವದ ಸುಳಿವು ದೊರೆತಿತ್ತು. ಈ ಸುಳಿವು ಆಧರಿಸಿ 'ಕಾಪುಮುಕ್ಕು ಹೌಸ್' ನಿವಾಸಿ ಕಾವ್ಯಾಳನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಕೇವಲ ಎರಡು ವಾರಗಳ ಅಂತರದಲ್ಲಿ ಇಬ್ಬರು ಶಿಕ್ಷಕಿಯರು ಸರಣಿಯಾಗಿ ಬಂಧನಕ್ಕೊಳಗಾಗಿದ್ದು, ಪೊಲೀಸರ ವರದಿಯ ಆಧಾರದ ಮೇಲೆ ಕಾವ್ಯಾಳನ್ನೂ ಸಹ ಸೇವೆಯಿಂದ ವಜಾಗೊಳಿಸಲು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಈ ಖತರ್ನಾಕ್ ಲೇಡಿ ಡಾನ್‌ಗಳು ಡ್ರಗ್ಸ್ ದಂಧೆಯನ್ನು ಅತ್ಯಂತ ಚಾಣಾಕ್ಷತನದಿಂದ ಮತ್ತು ಹೈಟೆಕ್ ಮಾದರಿಯಲ್ಲಿ ನಡೆಸುತ್ತಿದ್ದರು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಗ್ರಾಹಕರಿಗೆ ಡ್ರಗ್ಸ್ ಪೂರೈಸಲು ಇವರು ಕ್ಯೂಆರ್ ಕೋಡ್ (QR Code) ಮೂಲಕ ಹಣ ಪಡೆಯುತ್ತಿದ್ದರು. ಬ್ಯಾಂಕ್ ಖಾತೆಗಳಿಗೆ ಕಂತುಗಳ ರೂಪದಲ್ಲಿ ದೊಡ್ಡ ಮೊತ್ತದ ಹಣ ಜಮೆಯಾಗುತ್ತಿತ್ತು. ಹಣ ತಲುಪಿದ ತಕ್ಷಣ, ಡ್ರಗ್ಸ್ ತಲುಪಿಸಬೇಕಾದ ರಹಸ್ಯ ಜಾಗದ 'ಲೊಕೇಷನ್' ಅನ್ನು ಗ್ರಾಹಕರಿಗೆ ಕಳುಹಿಸಿಕೊಡುತ್ತಿದ್ದರು. ಅತ್ಯಂತ ರಹಸ್ಯವಾಗಿ ಮತ್ತು ಮುನ್ನೆಚ್ಚರಿಕೆಯಿಂದ ಈ ದಂಧೆ ಜರುಗುತ್ತಿತ್ತು.
ವಡಕರ, ಕುಟ್ಟ್ಯಾಡಿ ಮತ್ತು ನಡಾಪುರಂ ಭಾಗದ ನೂರಾರು ಯುವಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಈ ಶಿಕ್ಷಕಿಯರ ಪ್ರಮುಖ ಗ್ರಾಹಕರಾಗಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಯುವ ಸಮುದಾಯವನ್ನೇ ಗುರಿಯಾಗಿಸಿಕೊಂಡು ಇವರು ಮಾದಕ ದ್ರವ್ಯ ಜಾಲವನ್ನು ವಿಸ್ತರಿಸಿದ್ದರು. ಅಪರಾಧ ಲೋಕದಲ್ಲಿ ಕೀರ್ತನಾ 'ಲೇಡಿ ಡಾನ್' ಎಂದೇ ಪ್ರಸಿದ್ಧಿಯಾಗಿದ್ದು, ಈಕೆಯ ಜಾಲವು ಶಾಲಾ ಅಂಗಳದಿಂದ ಹಿಡಿದು ಮಾದಕ ದ್ರವ್ಯಗಳ ಅಂಧಕಾರದವರೆಗೆ ಚಾಚಿಕೊಂಡಿತ್ತು ಎಂಬುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಖಾತೆಗೆ ಹಣ ವರ್ಗಾಯಿಸಿದ ರಹಸ್ಯ ವ್ಯಕ್ತಿಗಳು ಯಾರು ಮತ್ತು ಬೃಹತ್ ಮಾದಕ ದ್ರವ್ಯ ಜಾಲದ ಪ್ರಭಾವಿ ವ್ಯಕ್ತಿಗಳೊಂದಿಗೆ ಇವರಿಗಿರುವ ನಂಟು ಏನು ಎಂಬುದರ ಕುರಿತು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕೇವಲ ಚಿಲ್ಲರೆ ಮಾರಾಟಗಾರರಷ್ಟೇ ಅಲ್ಲದೆ, ಈ ಜಾಲದ ಹಿಂದಿರುವ ಪ್ರಮುಖ ಡ್ರಗ್ ಸಪ್ಲೈಯರ್ ಯಾರು ಎಂಬುದು ಇನ್ನು ಪತ್ತೆಯಾಗಿಲ್ಲ. ಇಬ್ಬರೂ ಶಿಕ್ಷಕಿಯರನ್ನು ಮುಖಾಮುಖಿ ಕುಳ್ಳಿರಿಸಿ ಹೆಚ್ಚಿನ ವಿಚಾರಣೆ ನಡೆಸಿದರೆ ಈ ದೊಡ್ಡ ಸಾಮ್ರಾಜ್ಯದ ಮಾಸ್ಟರ್ ಮೈಂಡ್ ಹೊರಬೀಳಲಿದೆ ಎಂದು ತನಿಖಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಕ್ಷೇತ್ರದ ಪವಿತ್ರತೆಗೆ ಕಪ್ಪುಚುಕ್ಕೆ ತಂದಿರುವ ಈ ಘಟನೆಯು ಕೇರಳದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕಾದ ಶಿಕ್ಷಕಿಯರೇ ಯುವಕರನ್ನು ಮಾದಕ ದ್ರವ್ಯದ ವ್ಯಸನಕ್ಕೆ ತಳ್ಳುತ್ತಿರುವುದು ಹೆತ್ತವರಲ್ಲಿ ಆತಂಕ ಮೂಡಿಸಿದೆ. ಪ್ರಸ್ತುತ ವಡಕರ ಪೊಲೀಸರು ಇಬ್ಬರೂ ಆರೋಪಿಗಳನ್ನು ಕಸ್ಟಡಿಗೆ ಪಡೆದು ಕಠಿಣ ತನಿಖೆಗೆ ಒಳಪಡಿಸಿದ್ದು, ಈ ಮಾದಕ ಜಾಲದ ಮೂಲ ಬೇರನ್ನು ಕತ್ತರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ, (ಏಜೆನ್ಸೀಸ್​).