4 ಲಿಫ್ಟ್‌ಗಳಿದ್ರೂ ಕಾರ್ಮಿಕನಿಗೆ ನೋ ಎಂಟ್ರಿ: ಹೆಗಲ ಮೇಲೆ ಕಾಂಕ್ರೀಟ್ ಹೊತ್ತು 21ನೇ ಮಹಡಿಗೆ ಮೆಟ್ಟಿಲು ಹತ್ತಿದ ಶ್ರಮಿಕ!  
ದೇಶ

4 ಲಿಫ್ಟ್‌ಗಳಿದ್ರೂ ಕಾರ್ಮಿಕನಿಗೆ ನೋ ಎಂಟ್ರಿ: ಹೆಗಲ ಮೇಲೆ ಕಾಂಕ್ರೀಟ್ ಹೊತ್ತು 21ನೇ ಮಹಡಿಗೆ ಮೆಟ್ಟಿಲು ಹತ್ತಿದ ಶ್ರಮಿಕ! Labourer

ನವದೆಹಲಿ: ಈ ಆಧುನಿಕ ಜಗತ್ತಿನಲ್ಲಿ ಗಗನಚುಂಬಿ ಕಟ್ಟಡಗಳು ಮತ್ತು ಐಷಾರಾಮಿ ಸೌಲಭ್ಯಗಳು ಹೆಚ್ಚುತ್ತಿದ್ದರೂ ಮಾನವೀಯತೆ ಹಾಗೂ ಸಮಾನತೆಯ ಮೌಲ್ಯಗಳು ಕಾಲ ಕಸವಾಗುತ್ತಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಈ ಒಂದು ತಾಜಾ ಘಟನೆಯಿಂದ ಮೂಡುವುದು ಸಹಜ. ಅಪಾರ್ಟ್‌ಮೆಂಟ್‌ ಒಂದರಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬರೋಬ್ಬರಿ ನಾಲ್ಕು ಲಿಫ್ಟ್‌ಗಳಿದ್ದರೂ, ಕಟ್ಟಡ ನಿರ್ಮಾಣಕ್ಕೆ ರಕ್ತ ಹಾಗೂ ಬೇವರು ಹರಿಸುತ್ತಿರುವ ಬಡ ಕಾರ್ಮಿಕನೊಬ್ಬನಿಗೆ ( Labourer ) ಲಿಫ್ಟ್ ಬಳಸಲು ಅವಕಾಶ ನೀಡದೆ, 21ನೇ ಮಹಡಿಯವರೆಗೆ ಭಾರವಾದ ಕಾಂಕ್ರೀಟ್ ಇಟ್ಟಿಗೆಗಳನ್ನು ತಲೆಯ ಮೇಲೆ ಹೊತ್ತು ಮೆಟ್ಟಿಲು ಹತ್ತಿಸಿದ ಅಮಾನವೀಯ ವಿಡಿಯೋ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್ ಬಳಕೆದಾರ ಡಿಂಪ್ಸ್ (Dimps) ಎಂಬುವವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಕಾಂಕ್ರೀಟ್ ಬ್ಲಾಕ್‌ಗಳನ್ನು ತಲೆಯ ಮೇಲೆ ಹೊತ್ತ ಕಟ್ಟಡ ನಿರ್ಮಾಣ ಕಾರ್ಮಿಕನೊಬ್ಬ ಅತ್ಯಂತ ಆಯಾಸದಿಂದ, ನಿಧಾನವಾಗಿ ಮೆಟ್ಟಿಲುಗಳನ್ನು ಹತ್ತುತ್ತಾ 21ನೇ ಮಹಡಿಯತ್ತ ಸಾಗುವ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಪ್ರತಿಯೊಂದು ಮಹಡಿಯನ್ನು ಆತ ಕಾಲುಗಳಿಂದಲೇ ಹತ್ತಬೇಕಾದ ಅನಿವಾರ್ಯತೆ ಇತ್ತು. ಆ ಕಟ್ಟಡದಲ್ಲಿ ಸುಸಜ್ಜಿತವಾಗಿ ಕಾರ್ಯನಿರ್ವಹಿಸುತ್ತಿದ್ದ 4 ಎಲಿವೇಟರ್‌ಗಳಿದ್ದರೂ (Lifts), ಸಾಮಗ್ರಿಗಳನ್ನು ಸಾಗಿಸಲು ಅಥವಾ ಬಡ ಕಾರ್ಮಿಕರು ಅವುಗಳನ್ನು ಬಳಸಲು ಕಟ್ಟಡದ ನಿರ್ವಹಣಾ ಮಂಡಳಿ ಕಟ್ಟುನಿಟ್ಟಿನ ನಿಷೇಧ ಹೇರಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ಶೋಚನೀಯ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡುತ್ತಾ ಆತಂಕ ವ್ಯಕ್ತಪಡಿಸಿದ ಡಿಂಪ್ಸ್, "ನೋಡಿ, ಈ ಬೃಹತ್ ಕಟ್ಟಡದಲ್ಲಿ ನಾಲ್ಕು ಲಿಫ್ಟ್‌ಗಳಿವೆ. ಆದರೆ, ಈ ಬಡ ಕಾರ್ಮಿಕರಿಗೆ ಸಾಮಗ್ರಿಗಳನ್ನು ಮೇಲಕ್ಕೆ ಒಯ್ಯಲು ಲಿಫ್ಟ್ ಬಳಸಲು ಅನುಮತಿಯೇ ಇಲ್ಲ. ಈ ಬಡ ಕೆಲಸಗಾರ 21ನೇ ಮಹಡಿಯವರೆಗೆ ಮೆಟ್ಟಿಲುಗಳನ್ನೇ ಹತ್ತಿ ಹೋಗುತ್ತಿದ್ದಾನೆ. ನಮ್ಮ ದೇಶ ಪ್ರಗತಿ ಸಾಧಿಸುತ್ತಿರುವುದು ಹೀಗೆಯೇ? ಲಿಫ್ಟ್‌ಗಳಿದ್ದರೂ ಬಡವರಿಗೆ ಅವುಗಳನ್ನು ಬಳಸುವ ಹಕ್ಕಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬಳಿಕ ಈ ವಿಡಿಯೋವನ್ನು ಅಮಿತ್ ಸಿಂಗ್ ಎಂಬ ಬಳಕೆದಾರರು ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಮರುಹಂಚಿಕೊಂಡಿದ್ದು, ಕಟ್ಟಡದ ಮಾಲೀಕರು ಅಥವಾ ಆಡಳಿತ ಮಂಡಳಿಯ ಈ ನಿಷೇಧವನ್ನು ತೀವ್ರವಾಗಿ ಖಂಡಿಸಿದ್ದಾರೆ. ನಾಲ್ಕು ಸುಸಜ್ಜಿತ ಲಿಫ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದರೂ ಅವುಗಳನ್ನು ಕೇವಲ "ನಿವಾಸಿಗಳಿಗೆ ಮಾತ್ರ" ಎಂದು ಕಾಯ್ದಿರಿಸಿ, ಬಡ ಶ್ರಮಿಕನನ್ನು 21ನೇ ಮಹಡಿಯವರೆಗೆ ಭಾರ ಹೊರುವಂತೆ ಮಾಡಿರುವುದು ಮಾನವೀಯತೆಯ ಸಂಪೂರ್ಣ ಕೊರತೆಯನ್ನು ತೋರಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಐಷಾರಾಮಿ ಕಟ್ಟಡದ ಸೌಲಭ್ಯಗಳು ಮತ್ತು ಆ ಕಟ್ಟಡವನ್ನು ತಮ್ಮ ಬೆವರಿನಿಂದ ಕಟ್ಟಿಕೊಡುವ ಶ್ರಮಿಕರ ನಡುವಿನ ಈ ಅಂತರವನ್ನು ಕಂಡು ಜನರು ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರುತ್ತಿದ್ದಾರೆ. 21ನೇ ಮಹಡಿಗೆ ಭಾರ ಹೊತ್ತೊಯ್ಯುವಂತೆ ಮಾಡುವುದು ಶ್ರಮಿಕರ ಘನತೆ ಮತ್ತು ಒಳಿತನ್ನು ಗಾಳಿಗೆ ತೂರಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಕೆಲ ಬಳಕೆದಾರರಂತೂ ಈ ಸ್ಥಿತಿಯನ್ನು ಆಧುನಿಕ ಕಾಲದ "ಗುಲಾಮಗಿರಿ" ಎಂದು ಬಣ್ಣಿಸಿದ್ದು, ಶತಮಾನಗಳ ಸಾಗಣೆ ಮತ್ತು ನಾಗರಿಕತೆ ಬೆಳೆದಿದ್ದರೂ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಶೋಷಣೆ ಮಾಡುವುದನ್ನು ನಿಲ್ಲಿಸಿಲ್ಲವೇ ಎಂದು ಕಿಡಿಕಾರಿದ್ದಾರೆ. ಇನ್ನೊಂದೆಡೆ, ಬೃಹತ್ ಕಟ್ಟಡಗಳನ್ನು ನಿರ್ಮಿಸುವ ಶ್ರಮಿಕರಿಗೆ ಕನಿಷ್ಠ ಮಾನವೀಯ ಗೌರವ ಮತ್ತು ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸದಿರುವುದು ನಿಜಕ್ಕೂ ವಿಪರ್ಯಾಸ ಎಂದು ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).