Laalo 
ದೇಶ

50 ಲಕ್ಷ ರೂ. ಬಜೆಟ್​​​ನಲ್ಲಿ ನಿರ್ಮಾಣವಾದ ಸಿನಿಮಾ 120 ಕೋಟಿ ಲೂಟಿ ಮಾಡಿದ್ದೇಗೆ? ಬಾಕ್ಸ್ ಆಫೀಸ್‌ನಲ್ಲಿ ಚರಿತ್ರೆ ಸೃಷ್ಟಿಸಿದ 'ಲಾಲೋ'..Laalo

ಗುಜರಾತ್​​: ಗುಜರಾತಿ ಚಿತ್ರರಂಗದ ಇತಿಹಾಸದಲ್ಲಿ ಮಾತ್ರವಲ್ಲದೆ, ಇಡೀ ಭಾರತೀಯ ಚಿತ್ರರಂಗವೇ ಬೆರಗಾಗುವಂತಹ ದಾಖಲೆಯನ್ನು ಲಾಲೋ - ಕೃಷ್ಣ ಸದಾ ಸಹಾಯತೇ (Laalo - Krishna Sada Sahaayate) ಚಿತ್ರ ಬರೆದಿದೆ. 2025ರ ಅತ್ಯಂತ ದೊಡ್ಡ ಹಿಟ್ ಚಿತ್ರವಾಗಿ ಹೊರಹೊಮ್ಮಿರುವ ಈ ಸಿನಿಮಾ, ಬರೋಬ್ಬರಿ 120 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕವಾಗಿ ಹೊಸ ಇತಿಹಾಸ ಸೃಷ್ಟಿಸಿದೆ.
'ಲಾಲೋ...' ಚಿತ್ರವು ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರ. ಆದರೆ, ಬಾಕ್ಸ್ ಆಫೀಸ್‌ನಲ್ಲಿ ಇದು ಗಳಿಸಿದ ಮೊತ್ತ ಭಾರತದ ಬಹುಕೋಟಿ ಬಜೆಟ್‌ನ ಸಿನಿಮಾಗಳನ್ನೂ ಮೀರಿಸಿದೆ.
50 ಲಕ್ಷ ರೂ. ಬಜೆಟ್​​​ನಲ್ಲಿ ನಿರ್ಮಾಣವಾದ ಸಿನಿಮಾ 120 ಕೋಟಿ ಗಳಿಕೆ!
50 ಲಕ್ಷ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಒಂದು ಸಣ್ಣ ಗುಜರಾತಿ ಚಿತ್ರದಲ್ಲಿ ಯಾವುದೇ ಸ್ಟಾರ್​​ ನಟ ಹಾಗೂ ನಟಿಯರಿಲ್ಲ, ಹಾಡು ಮತ್ತು ನೃತ್ಯವಿಲ್ಲ, ಮತ್ತು ಯಾವುದೇ ಆಕ್ಷನ್ ಇರಲಿಲ್ಲ. ಭಕ್ತಿ, ಭಾವನೆ ಮತ್ತು ಹಾಸ್ಯದ ಹದವಾದ ಮಿಶ್ರಣವಿರುವ ಕಥೆ. ಕೃಷ್ಣನ ಮೇಲಿರುವ ಅಚಲವಾದ ನಂಬಿಕೆ ಮತ್ತು ಜನಸಾಮಾನ್ಯರ ಜೀವನದ ಸವಾಲುಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.
ಹಲವಾರು ಬ್ಲಾಕ್‌ಬಸ್ಟರ್ ಚಿತ್ರಗಳಿಗಿಂತ ದೊಡ್ಡ ಹಿಟ್ ಆಗಿ ಹೊರಹೊಮ್ಮಿತು. ಇದುವರೆಗೆ ಬಿಡುಗೊಡೆಗೊಂಡ ಚಿತ್ರಗಳ ಪೈಲಿ ಈ ಸಿನಿಮಾ ಅತಿ ಹೆಚ್ಚುಗಳಿಕೆ ಮಾಡಿರುವ ಸಿನಿಮಾವಾಗಿದೆ.'ಲಾಲೋ...' ಚಿತ್ರವು ಸಬ್‌ಟೈಟಲ್ಸ್ ಮತ್ತು ಡಬ್ಬಿಂಗ್ ಮೂಲಕ ದಕ್ಷಿಣ ಭಾರತ ಸೇರಿದಂತೆ ದೇಶದಾದ್ಯಂತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಈ ಚಿತ್ರದ ಯಶಸ್ಸಿನ ಹಾದಿ ಸುಲಭವಾಗಿರಲಿಲ್ಲ. ಬಿಡುಗಡೆಯಾದ ಮೊದಲ ವಾರ ಈ ಸಿನಿಮಾ ಗಳಿಸಿದ್ದು ಕೇವಲ 33 ಲಕ್ಷ ರೂಪಾಯಿ ಮಾತ್ರ. ಬಹುತೇಕರು ಸಿನಿಮಾ ಫ್ಲಾಪ್ ಎಂದೇ ಭಾವಿಸಿದ್ದರು. ಆದರೆ, ಎರಡನೇ ವಾರದಿಂದ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳು (Word of mouth) ಹೆಚ್ಚಾದಂತೆ ಚಿತ್ರಮಂದಿರಗಳ ಸಂಖ್ಯೆ ಮತ್ತು ಕಲೆಕ್ಷನ್ ಹಠಾತ್ ಏರಿಕೆ ಕಂಡಿತು.
ನಾಲ್ಕನೇ ವಾರ ಮುಗಿಯುವಷ್ಟರಲ್ಲಿ ಈ ಸಿನಿಮಾ ಶತಕೋಟಿ ಕ್ಲಬ್ ಸೇರಿ ಇತಿಹಾಸ ಸೃಷ್ಟಿಸಿತು.
ಚಿತ್ರದ ಸ್ಕ್ರಿಪ್ಟ್ ಮತ್ತು ನಟನೆಗೆ ವಿಮರ್ಶಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೊಡ್ಡ ಸ್ಟಾರ್‌ಗಳಿಲ್ಲದಿದ್ದರೂ, ಕಥೆ ಇದ್ದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದನ್ನು ಈ ಸಿನಿಮಾ ಸಾಬೀತುಪಡಿಸಿದೆ.