Kunal Ghosh > .ಒಂದೇ ದಿನ ಎರಡೂ ಬಣಗಳಲ್ಲಿ ಪ್ರತ್ಯಕ್ಷರಾದ ಟಿಎಂಸಿ ಶಾಸಕ!  
ದೇಶ

ಎಲ್ಲೆಲ್ಲೂ ನಾನೇ, ಎಲ್ಲೆಲ್ಲೂ ನಾನೇ...ಒಂದೇ ದಿನ ಎರಡೂ ಬಣಗಳಲ್ಲಿ ಪ್ರತ್ಯಕ್ಷರಾದ ಟಿಎಂಸಿ ಶಾಸಕ! | Kunal Ghosh

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಶಾಸಕ ಕುನಾಲ್ ಘೋಷ್ (Kunal Ghosh) ಶನಿವಾರ ಪಕ್ಷದ ಎರಡೂ ಬಣಗಳು ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ರಾಜಕೀಯ ಭವಿಷ್ಯದ ಕುರಿತಾಗಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಟ್ಟಾ ಬೆಂಬಲಿಗರಾಗಿರುವ ಘೋಷ್, ತಾವೇನೂ ಎದುರಾಳಿ ರಿತಬ್ರತ ಬ್ಯಾನರ್ಜಿ ಬಣಕ್ಕೆ ಸೇರ್ಪಡೆಯಾಗುತ್ತಿಲ್ಲ ಎಂದು ನಂತರ ಸ್ಪಷ್ಟಪಡಿಸಿದ್ದಾರೆ.

ಕುನಾಲ್ ಘೋಷ್ ಮೊದಲು ಕಾಳೀಘಾಟ್‌ನಲ್ಲಿರುವ ಹಳೆಯ ಟಿಎಂಸಿ ಕಚೇರಿಯಲ್ಲಿ ನಡೆದ ಮಮತಾ ಬ್ಯಾನರ್ಜಿ ಬಣದ ಕಾರ್ಯಕ್ರಮಕ್ಕೆ ತೆರಳಿ, ಪಕ್ಷದ ಅಧ್ಯಕ್ಷರ ಸೂಚನೆಯಂತೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ತದನಂತರ, ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಲೆಘಾಟಾದ ಮೆಟ್ರೋಪಾಲಿಟನ್ ಪ್ರದೇಶದಲ್ಲಿರುವ ಬಾಡಿಗೆ ಕಚೇರಿಯಲ್ಲಿ ಎದುರಾಳಿ ಬಣ ಆಯೋಜಿಸಿದ್ದ ಕಾರ್ಯಕ್ರಮಕ್ಕೂ ತೆರಳಿ, ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು.

ರಿತಬ್ರತ ಬಣದ ವಕ್ತಾರ ಕೊಹಿನೂರ್ ಮಜುಂದಾರ್ ಮಾತನಾಡಿ, ಘೋಷ್ ಅವರ ಈ ಭೇಟಿಯು ಮುಂಬರುವ ದಿನಗಳಲ್ಲಿ ಅವರ ಮುಂದಿನ ರಾಜಕೀಯ ನಡೆಗೆ ಸೂಚನೆಯಾಗಿರಬಹುದು ಎಂದಿದ್ದಾರೆ. ಕುನಾಲ್ ಘೋಷ್ ಇಲ್ಲಿಗೆ ಬಂದಿದ್ದರು. ಅವರು ಕರೆ ಗಂಟೆಯನ್ನು ಬಾರಿಸಿದ್ದಾರೆ, ಇನ್ನು ಕೆಲವೇ ದಿನಗಳಲ್ಲಿ ತಮ್ಮ ಲಗೇಜ್ ಸಮೇತ ಇಲ್ಲಿಗೆ ಬರಲಿದ್ದಾರೆ ಎಂದು ಮಜುಂದಾರ್ ವ್ಯಂಗ್ಯವಾಡಿದ್ದಾರೆ.

ಘೋಷ್​ ನೀಡಿದ ಸ್ಪಷ್ಟನೆ ಇಲ್ಲಿದೆ!

ಮಮತಾ ಬ್ಯಾನರ್ಜಿ ಅವರಿಂದ ದೂರವಾಗಿ ಬಿಜೆಪಿಗೆ ಹತ್ತಿರವಾಗುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ ಘೋಷ್, ತಮ್ಮ ನಿಲುವನ್ನು ಸ್ಪಷ್ಟಪಡಿಸಲೆಂದೇ ಅಲ್ಲಿಗೆ ಹೋಗಿದ್ದಾಗಿ ತಿಳಿಸಿದ್ದಾರೆ. ಕಾಳೀಘಾಟ್‌ನಿಂದ ಅಂತರ ಕಾಯ್ದುಕೊಂಡು ಬಿಜೆಪಿಗೆ ಹತ್ತಿರವಾದವರು ತಿಳಿದುಕೊಳ್ಳಬೇಕು, ನಾನು ಅವರ ಎದುರಲ್ಲೇ ನಿಂತು ಬಿಜೆಪಿಯನ್ನು ಖಂಡಿಸಿದ್ದೇನೆ ಎಂದು ಅವರು ಸವಾಲು ಹಾಕಿದ್ದಾರೆ.

ಪಕ್ಷದ ಅಧ್ಯಕ್ಷರ ಮೇಲಿನ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದ ಘೋಷ್, ತೃಣಮೂಲ ಕಾಂಗ್ರೆಸ್ ನಿರ್ಮಾಣವಾಗಿದ್ದು ಮಮತಾ ದೀದಿ ಅವರ ನೇತೃತ್ವದಲ್ಲಿ. ಬಂಡಾಯಗಾರರು ದೀದಿ ಹೆಸರನ್ನೇ ಅಳಿಸಿಹಾಕಲು ಬಯಸಿದ್ದಾರೆ. ಆದರೆ ನಾನು ಅವರ ಬಣದಲ್ಲೇ ನಿಂತು ಹುಲಿಯಂತೆ ಅವರ ಹೆಸರನ್ನು ಉಚ್ಛರಿಸಿದ್ದೇನೆ. ಕುನಾಲ್ ಘೋಷ್ ಎರಡು ದೋಣಿಯಲ್ಲಿ ಕಾಲಿಡುವ ಪ್ರಶ್ನೆಯೇ ಇಲ್ಲ. ಒಂದು ಕಾಲನ್ನು ನಿಂತುಕೊಳ್ಳಲು ಮತ್ತು ಇನ್ನೊಂದು ಕಾಲನ್ನು ಒದೆಯಲು ಬಳಸಲಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಅನಂತ ಮಹಾರಾಜ್​ರನ್ನು ಬಂಧಿಸಿ!...

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧವೂ ಕಿಡಿಕಾರಿದ ಅವರು, ಸರ್ಕಾರದ ನೀತಿಗಳು ಸಾಮಾನ್ಯ ಜನರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀವ್ರ ಹಾನಿ ಮಾಡಿವೆ ಎಂದು ಆರೋಪಿಸಿದರು. ನಾವು ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಬಿಜೆಪಿಯ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು