ನಿನ್ನಿಂದ ಇದನ್ನು ನಿರೀಕ್ಷಿಸಿರಲಿಲ್ಲ... ಲವ್ ಜಿಹಾದ್ ಆರೋಪಕ್ಕೆ ಉತ್ತರ ನೀಡುವಾಗ ಮೊನಾಲಿಸಾ ಎಡವಟ್ಟು! Monalisa
- ರಾತ್ರೋರಾತ್ರಿ ಫೇಮಸ್ ಆದವರಲ್ಲಿ ಮೊನಾಲಿಸಾ ಭೋಸ್ಲೆ ಕೂಡ ಒಬ್ಬರು
- ಕಳೆದ ವರ್ಷ ನಡೆದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷ ಮಾಲೆಗಳನ್ನು ಮಾರುತ್ತಿದ್ದ ಮೊನಾಲಿಸಾ
- ಕ್ಯಾಮೆರಾ ಕಣ್ಣಿಗೆ ಬಿದ್ದು ತನ್ನ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆದು, ರಾತ್ರೋರಾತ್ರಿ ಫೇಮಸ್
- ಇದೇ ಮೊನಾಲಿಸಾ ಇದೀಗ ತನ್ನ ವೈಯಕ್ತಿಕ ಜೀವನ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದಾಳೆ
ತಿರುವನಂತಪುರ : ಈ ಸೋಶಿಯಲ್ ಮೀಡಿಯಾ ಜಮಾನದಲ್ಲಿ ರಾತ್ರೋರಾತ್ರಿ ಫೇಮಸ್ ಆದವರಲ್ಲಿ ಮೊನಾಲಿಸಾ ಭೋಸ್ಲೆ ( Monalisa ) ಕೂಡ ಒಬ್ಬರು. ಕಳೆದ ವರ್ಷ ನಡೆದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷ ಮತ್ತು ಮುತ್ತಿನ ಮಾಲೆಗಳನ್ನು ಮಾರುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದು ತನ್ನ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆದು, ರಾತ್ರೋರಾತ್ರಿ ಫೇಮಸ್ ಆದಳು. ಎಷ್ಟರಮಟ್ಟಿಗೆ ಅಂದರೆ, ಬಾಲಿವುಡ್ನಿಂದ ಸಿನಿಮಾ ಅವಕಾಶ ಪಡೆಯುವಷ್ಟು. ಇದೇ ಮೊನಾಲಿಸಾ ಇದೀಗ ತನ್ನ ವೈಯಕ್ತಿಕ ಜೀವನದ ಕಾರಣಕ್ಕೆ ಕೆಲವು ದಿನಗಳಿಂದ ಪ್ರತಿದಿನ ಸುದ್ದಿಯಲ್ಲಿದ್ದಾಳೆ.
ಮೊನಾಲಿಸಾ, ಇತ್ತೀಚೆಗೆ ಉತ್ತರ ಪ್ರದೇಶ ಮೂಲದ ಫರ್ಮಾನ್ ಖಾನ್ ಎಂಬ ಯುವಕನನ್ನು ಮದುವೆಯಾಗಿದ್ದಾಳೆ. ಇಬ್ಬರದು ಪ್ರೇಮ ವಿವಾಹ. ಕೇರಳದಲ್ಲಿ ಮದುವೆಯಾದರು. ಇದೊಂದು ಅಂತರ್ಧಮೀಯ ಮದುವೆಯಾಗಿದ್ದು, ಲವ್ ಜಿಹಾದ್ ಎಂಬ ಆರೋಪ ಕೇಳಿಬಂದಿದೆ. ಈ ವಿವಾಹ ತೀವ್ರ ವಿವಾದಕ್ಕೆ ಗುರಿಯಾಗಿದೆ. ಆದರೆ, ತಾನು ಇಷ್ಟಪಟ್ಟು ಮದುವೆಯಾಗಿದ್ದೇನೆ ಎಂದು ಮೊನಾಲಿಸಾ ಹೇಳಿಕೆ ನೀಡಿದ್ದಾಳೆ. ಆದರೂ, ಲವ್ ಜಿಹಾದ್ ಚರ್ಚೆ ಮಾತ್ರ ನಿಂತಿಲ್ಲ.
ಮೊನಾಲಿಸಾ ಅವರ ತಂದೆ ಜೈ ಸಿಂಗ್ ಭೋಸ್ಲೆ ಕೂಡ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ಇದೊಂದು 'ಲವ್ ಜಿಹಾದ್' ಎಂದು ಆರೋಪಿಸಿದ್ದಾರೆ. ಆದರೆ, ಈ ಎಲ್ಲ ಆರೋಪಗಳಿಗೆ ಪ್ರತಿಕ್ರಿಯಿಸಿರುವ ವೈರಲ್ ಬ್ಯೂಟಿ, ಮುಸ್ಲಿಂ ಯುವಕನೊಂದಿಗಿನ ತನ್ನ ಪ್ರೇಮ ವಿವಾಹವನ್ನು ರಾಧಾ-ಕೃಷ್ಣ ಪ್ರೇಮಕಥೆಗೆ ಹೋಲಿಸಿದ್ದಾಳೆ. ಆದರೆ, ರಾಧಾ ಕೃಷ್ಣ ಯುಗ ಮತ್ತು ಮುಸ್ಲಿಂ ಧರ್ಮದ ಆರಂಭದ ಕಾಲಮಾನ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಕ್ಕಾಗಿ ಮೊನಾಲಿಸಾರನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.
ಅಷ್ಟಕ್ಕೂ ಮೊನಾಲಿಸಾ ಹೇಳಿದ್ದೇನು?
ಸದ್ಯ ಹರಿದಾಡುತ್ತಿರುವ ವಿಡಿಯೋ ತುಣುಕಲ್ಲಿ ಮಾತನಾಡಿರುವ ಮೊನಾಲಿಸಾ, ಕೃಷ್ಣನ ಪ್ರೀತಿಯಲ್ಲಿ ಬೀಳುವ ಮುಂಚೆ ಆತ ಹಿಂದೂನಾ? ಅಥವಾ ಮುಸ್ಲಿಮಾ? ಎಂದು ರಾಧಾ ಎಂದಿಗೂ ಕೇಳಿರಲಿಲ್ಲ ಎಂದಿದ್ದಾರೆ. ಈ ಮೂಲಕ ತಮ್ಮ ಅಂತರ್ಧರ್ಮೀಯ ಪ್ರೇಮ ವಿವಾಹವನ್ನು ಮೊನಾಲಿಸಾ ಸಮರ್ಥಿಸಿಕೊಂಡಿದ್ದಾರೆ. ಯಾವಾಗ ಈ ವಿಡಿಯೋ ವೈರಲ್ ಆಯಿತೋ ಬಹುತೇಕ ನೆಟ್ಟಿಗರು ಮೊನಾಲಿಸಾಳನ್ನು ಟ್ರೋಲ್ ಮಾಡುತ್ತಿದ್ದಾರೆ.
ಓರ್ವ ನೆಟ್ಟಿಗ ಕಾಮೆಂಟ್ ಮಾಡಿ, ನಾವಿದನ್ನೂ ನಿರೀಕ್ಷೆ ಮಾಡಿರಲಿಲ್ಲ, ಈಕೆ ಕುಂಭಮೇಳದಲ್ಲಿ ಮಾತ್ರ ಚೆನ್ನಾಗಿದ್ದಳು ಎಂದಿದ್ದಾನೆ. ಇನ್ನೊಬ್ಬ ಆಕೆಯನ್ನು ಅನಕ್ಷರಸ್ಥೆ ಎಂದು ಜರಿದಿದ್ದಾನೆ. ಮತ್ತೊಬ್ಬ ಆಕೆಯನ್ನು ಅಪಹಾಸ್ಯ ಮಾಡಿದ್ದು, ರಾಧಾ ಕೃಷ್ಣನ ಕಾಲದಲ್ಲಿ ನೀವು ಇದ್ದಿದ್ರಾ ಹಾಗಾದರೆ, ಆ ಯುಗದಲ್ಲಿ ಮುಸ್ಲಿಮರು ಇರಲಿಲ್ಲ ಎಂದಿದ್ದಾರೆ. ಮೊನಾಲಿಸಾ ತನ್ನ ಮನಸ್ಸನ್ನು ಕಳೆದುಕೊಂಡಿದ್ದಾಳೆ ಅಥವಾ ಆಕೆಯನ್ನು ಯಾರೋ ಚೆನ್ನಾಗಿ ಬ್ರೈನ್‌ವಾಶ್ ಮಾಡಿದ್ದಾರೆ ಎಂದೆಲ್ಲ ಕಾಮೆಂಟ್ ಮಾಡಿ ಮೊನಾಲಿಸಾ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಸದ್ಯ ಮೊನಾಲಿಸಾರ ಮದುವೆ ವಿಚಾರ ಆಗಾಗ ಚರ್ಚೆಯಾಗುತ್ತಿದ್ದು, ಇನ್ನೂ ಏನೆಲ್ಲ ಬೆಳವಣಿಗೆಗಳು ನಡೆಯುತ್ತವೆ ಅನ್ನೋದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).