ಐಪಿಎಲ್ ಟಿಕೆಟ್ ಮಾರಾಟಕ್ಕೂ ನಮಗೂ ಸಂಬಂಧವಿಲ್ಲ ಎಂದು KSCA ಸ್ಪಷ್ಟನೆ 
ದೇಶ

ಐಪಿಎಲ್ ಟಿಕೆಟ್ ಮಾರಾಟಕ್ಕೂ ನಮಗೂ ಸಂಬಂಧವಿಲ್ಲ ಎಂದು KSCA ಸ್ಪಷ್ಟನೆ

ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಗಳ ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೆಲವು ಕಾರ್ಪೊರೇಟ್ ಸಂಸ್ಥೆಗಳು ಮತ್ತು ವ್ಯಕ್ತಿಗಳ ಬಂಧನವಾಗಿರುವ ಬೆನ್ನಲ್ಲೇ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಾಧ್ಯಮಗಳಲ್ಲಿ ಈ ಬಂಧಿತ ವ್ಯಕ್ತಿಗಳು ಅಥವಾ ಸಂಸ್ಥೆಗಳು ಕೆಎಸ್‌ಸಿಎ ಜೊತೆಗೆ ನಂಟು ಹೊಂದಿರಬಹುದು ಎಂಬ ಅನುಮಾನದ ವರದಿಗಳು ಪ್ರಸಾರವಾದ ಹಿನ್ನೆಲೆಯಲ್ಲಿ, ಸಂಸ್ಥೆಯ ವಕ್ತಾರರಾದ ವಿನಯ್ ಮೃತ್ಯುಂಜಯ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ.

ಕೆಎಸ್‌ಸಿಎ ಸ್ಪಷ್ಟಪಡಿಸಿರುವ ಪ್ರಮುಖ ಅಂಶಗಳು

ಆರ್‌ಸಿಬಿ ಟಿಕೆಟ್ ಮಾರಾಟದಲ್ಲಿ ಹಸ್ತಕ್ಷೇಪವಿಲ್ಲ: ಕೆಎಸ್‌ಸಿಎ ಸಂಸ್ಥೆಯು 'ರಾಯಲ್ ಚಾಲೆಂಜರ್ಸ್ ಬೆಂಗಳೂರು' (RCB) ಫ್ರಾಂಚೈಸಿಯ ಟಿಕೆಟ್ ಏಜೆನ್ಸಿಯಲ್ಲ. ಸಾರ್ವಜನಿಕರಿಗೆ ಟಿಕೆಟ್ ಮಾರಾಟ ಮಾಡುವ ಯಾವುದೇ ಅಧಿಕಾರ ಕೆಎಸ್‌ಸಿಎಗೆ ಇಲ್ಲ. ಟಿಕೆಟ್ ಮಾರಾಟ ಪ್ರಕ್ರಿಯೆಯು ಸಂಪೂರ್ಣವಾಗಿ ಫ್ರಾಂಚೈಸಿಯ ಅಧಿಕೃತ ಚಾನೆಲ್‌ಗಳ ಮೂಲಕವೇ ನಡೆಯುತ್ತದೆ ಎಂದು KSCA ತನ್ನ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದೆ
ಸೀಮಿತ ವಿತರಣೆ: ಕೆಎಸ್‌ಸಿಎಗೆ ಸಿಗುವ ಅತ್ಯಲ್ಪ ಪ್ರಮಾಣದ ಟಿಕೆಟ್‌ಗಳನ್ನು ಕಟ್ಟುನಿಟ್ಟಾಗಿ ಸಂಸ್ಥೆಯ ಕ್ರಿಕೆಟ್ ಕ್ಲಬ್‌ಗಳಿಗೆ, ಖಾಯಂ ಸದಸ್ಯರಿಗೆ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ನೀಡಲಾಗುತ್ತದೆ. ಸಂಸ್ಥೆಯು ಎಂದಿಗೂ ನೇರವಾಗಿ ಸಾರ್ವಜನಿಕರಿಗೆ ಟಿಕೆಟ್ ಮಾರಾಟ ಮಾಡುವುದಿಲ್ಲ ಎಂದು ತಿಳಿಸಿದೆ.
ಆರೋಪಿಗಳೊಂದಿಗೆ ನಂಟಿಲ್ಲ: ಪ್ರಸ್ತುತ ತನಿಖೆಗೆ ಒಳಪಟ್ಟಿರುವ ಯಾವುದೇ ಸಂಸ್ಥೆಗಳಿಗಾಗಲಿ ಅಥವಾ ಬಂಧಿತ ವ್ಯಕ್ತಿಗಳಿಗಾಗಲಿ ಕೆಎಸ್‌ಸಿಎ ಜೊತೆ ಪ್ರತ್ಯಕ್ಷ ಅಥವಾ ಪರೋಕ್ಷ ಸಂಬಂಧವಿಲ್ಲ. ಬಂಧಿತರು ಕೆಎಸ್‌ಸಿಎ ಸದಸ್ಯರಲ್ಲ ಎಂದು ಸಂಸ್ಥೆ ಖಚಿತಪಡಿಸಿದೆ.

ಕಠಿಣ ಕ್ರಮಕ್ಕೆ ಆಗ್ರಹ

ಕ್ರಿಕೆಟ್ ಹೆಸರಿನಲ್ಲಿ ನಡೆಯುವ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಕೆಎಸ್‌ಸಿಎ ತೀವ್ರವಾಗಿ ಖಂಡಿಸಿದೆ. ತನಿಖಾ ಸಂಸ್ಥೆಗಳಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಈ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಸಮಗ್ರ ತನಿಖೆ ನಡೆಸಿ, ಕಾನೂನು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೆಎಸ್‌ಸಿಎ ಒತ್ತಾಯಿಸಿದೆ.
ಮಾಜಿ ಕ್ರಿಕೆಟಿಗ ಬಿ.ಕೆ. ವೆಂಕಟೇಶ್ ಪ್ರಸಾದ್ ಅವರ ನಾಯಕತ್ವದಲ್ಲಿ ಕೆಎಸ್‌ಸಿಎ ಪಾರದರ್ಶಕತೆಗೆ ಆದ್ಯತೆ ನೀಡಿದ್ದು, ಕರ್ನಾಟಕದಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.