ಚಿಕಾಗೋದಲ್ಲಿ ಸ್ಯಾಮ್ ಪಿತ್ರೋಡಾ ಭೇಟಿಯಾದ ಕೆಎಸ್‌ಬಿಡಿಬಿ ಅಧ್ಯಕ್ಷ ಎಸ್.ಈ.ಸುಧೀಂದ್ರ  
ದೇಶ

ಚಿಕಾಗೋದಲ್ಲಿ ಸ್ಯಾಮ್ ಪಿತ್ರೋಡಾ ಭೇಟಿಯಾದ ಕೆಎಸ್‌ಬಿಡಿಬಿ ಅಧ್ಯಕ್ಷ ಎಸ್.ಈ.ಸುಧೀಂದ್ರ

ಚಿಕಾಗೋ:

ಭಾರತದ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಹೆಸರಾಂತ ತಂತ್ರಜ್ಞ ಸ್ಯಾಮ್ ಪಿತ್ರೋಡಾ ಅವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (ಕೆಎಸ್‌ಬಿಡಿಬಿ) ಅಧ್ಯಕ್ಷ ಎಸ್.ಈ.ಸುಧೀಂದ್ರ ಭೇಟಿಯಾಗಿ ಸುಸ್ಥಿರ ಅಭಿವೃದ್ಧಿ, ಶುದ್ಧ ಇಂಧನ ಮತ್ತು ಜೈವಿಕ ಇಂಧನದ ಭವಿಷ್ಯದ ಬಗ್ಗೆ ವ್ಯಾಪಕವಾಗಿ ಚರ್ಚಿಸಿದರು. 

ಚಿಕಾಗೋದಲ್ಲಿ ನೆಲೆಸಿರುವ ಸ್ಯಾಮ್ ಪಿತ್ರೋಡಾ ಅವರ ನಿವಾಸದಲ್ಲಿ ನಡೆದ ಸಂವಾದದ ಸಮಯದಲ್ಲಿ   1980 ರ ದಶಕದ ಆರಂಭದಲ್ಲಿ ಭಾರತಕ್ಕೆ ಮರಳಿದ್ದನ್ನು ನೆನಪಿಸಿಕೊಂಡ ಸ್ಯಾಮ್ ಪಿತ್ರೋಡಾ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1984 ರಲ್ಲಿ ಹೊಸದಾಗಿ ಸ್ಥಾಪಿಸಲಾದ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) ಅನ್ನು ಮುನ್ನಡೆಸಲು ಅವರನ್ನು ಆಹ್ವಾನಿಸಿದ್ದರ ಕುರಿತು ನೆನಪು ಮಾಡಿಕೊಂಡರು. 
ಸ್ಯಾಮ್ ಪಿತ್ರೋಡಾ ದೇಶೀಯ ದೂರಸಂಪರ್ಕ ತಂತ್ರಜ್ಞಾನವನ್ನು ಲಕ್ಷಾಂತರ ಭಾರತೀಯರಿಗೆ ಲಭ್ಯವಾಗುವಂತೆ ಮಾಡಿದ ಪ್ರಯತ್ನಗಳ ಕುರಿತು ಸಹ ಅವರು ಮಾತನಾಡಿದರು. ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರ ನೇತೃತ್ವದಲ್ಲಿ ದೂರಸಂಪರ್ಕ, ಕುಡಿಯುವ ನೀರು, ಸಾಕ್ಷರತೆ, ರೋಗನಿರೋಧಕತೆ, ಹೈನುಗಾರಿಕೆ ಅಭಿವೃದ್ಧಿ ಮತ್ತು ಎಣ್ಣೆಕಾಳುಗಳ ಅಭಿವೃದ್ಧಿಗೆ ಸ್ಥಾಪಿಸಿದ ರಾಷ್ಟ್ರೀಯ ತಂತ್ರಜ್ಞಾನ ಮಿಷನ್‌ನ ತಮ್ಮ ನಾಯಕತ್ವವನ್ನು ಅವರು ಸ್ಮರಿಸಿ ಈ ಪ್ರಕ್ರಿಯೆಯು ಇಂದಿನ ಭಾರತದ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾಗಿರುವುದರ ಕುರಿತು ಮೆಲಕು ಹಾಕಿದರು. 
 ಸ್ಯಾಮ್ ಪಿತ್ರೋಡಾ ಅವರು 1990 ರ ದಶಕದ ಹಳೆಯ ಛಾಯಾಚಿತ್ರವನ್ನು ತೋರಿಸಿ ಅದರಲ್ಲಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ಅವರು ಬಾಲಕನಾಗಿದ್ದಾಗ ಅವರ ತಾಯಿ ವಿಶಾಲ್ ಈಶ್ವರ್ ಅವರೊಂದಿಗೆ ಇದ್ದುದನ್ನು ಅಧ್ಯಕ್ಷರು ಕಂಡು ಭಾವುಕರಾಗಿದ್ದು ಹೃದಯ ಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಚರ್ಚೆಯ ಸಮಯದಲ್ಲಿ, ಸ್ಯಾಮ್ ಪಿತ್ರೋಡಾ ಅವರು ಭಾರತದ ಅಪಾರ ಸಸ್ಯ ಸಂಪತ್ತು ಮತ್ತು ಸ್ಥಳೀಯ ಸಮುದಾಯಗಳಿಂದ ಸಂರಕ್ಷಿಸಲ್ಪಟ್ಟ ಸಾಂಪ್ರದಾಯಿಕ ಜ್ಞಾನವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು, ಮೌಲ್ಯೀಕರಿಸಬೇಕು, ದಾಖಲಿಸಬೇಕು ಮತ್ತು ತಲೆಮಾರುಗಳೊಂದಿಗೆ ಕಳೆದುಹೋಗುವ ಬದಲು ಜಾಗತಿಕವಾಗಿ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು. 
ಸುಸ್ಥಿರ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಕೊಡುಗೆ ನೀಡುವಲ್ಲಿ ಭಾರತದ ಜೀವವೈವಿಧ್ಯತೆಯ ಅಪಾರ ಸಾಮರ್ಥ್ಯವನ್ನು ಪ್ರತಿಪಾದಿಸಿ ಕೇರಳ ರಾಜ್ಯವನ್ನು ಉಲ್ಲೇಖಿಸಿದ ಸ್ಯಾಮ್ ಪಿತ್ರೋಡಾ,  ಕೇರಳ ಮೂಲದ ಅಧ್ಯಕ್ಷರ ಸಲಹೆಗಾರ ಡಾ. ಶಿಜು ಸೆಬಾಸ್ಟಿಯನ್ ಅವರೊಂದಿಗೆ ಕೃಷಿ ಅರಣ್ಯ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡು, ಪರಿಸರ ಸಂರಕ್ಷಣೆಯೊಂದಿಗೆ ಸುಸ್ಥಿರ ಕೃಷಿ ಪದ್ಧತಿಗಳನ್ನು ಸಂಯೋಜಿಸುವ ಅವಕಾಶಗಳ ಬಗ್ಗೆ ಚರ್ಚಿಸಿದರು.
 ಪುರಸಭೆಗಳ ಘನತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆ, ಸುಸ್ಥಿರ ಕೃಷಿ ಮತ್ತು ದೇಶದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿರುವ ಪರಿಸರ ಸವಾಲುಗಳನ್ನು ಎದುರಿಸುವ ಅಗತ್ಯದ ಬಗ್ಗೆ ಸುಧೀರ್ಘವಾಗಿ ಮಾತುಕತೆ ನಡೆಸಿದರು. ವೈಜ್ಞಾನಿಕ ಯೋಜನೆಗಳು ಮತ್ತು ತಾಂತ್ರಿಕ ಆವಿಷ್ಕಾರವು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿದಾಗ ಜೀವನೋಪಾಯವು ಗಮನಾರ್ಹವಾಗಿ ಸುಧಾರಿಸಲಿದೆ ಎಂದು ಸ್ಯಾಮ್ ಪಿತ್ರೋಡಾ ಅಭಿಪ್ರಾಯ ವ್ಯಕ್ತಪಡಿಸಿದರು.
 ನವೀಕರಿಸಬಹುದಾದ ಇಂಧನದ ಅಗತ್ಯತೆ ಹೆಚ್ಚುತ್ತಿರುವ ಮಹತ್ವವನ್ನು ಒತ್ತಿ ಹೇಳಿದ ಸ್ಯಾಮ್ ಪಿತ್ರೋಡಾ, ಶುದ್ಧ ಇಂಧನ ಇಂದಿನ ಅಭಿವೃದ್ದಿಗೆ ಬುನಾದಿಯಾಗಿದೆ. ಜೈವಿಕ ಇಂಧನ ಕ್ಷೇತ್ರವನ್ನು ವಿಸ್ತರಿಸುವುದರಿಂದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದಲ್ಲದೆ, ಇಡೀ ಜೈವಿಕ ಇಂಧನ ಮೌಲ್ಯ ಸರಪಳಿಯನ್ನು ಬಲಪಡಿಸುತ್ತದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಯಿಂದ  ಸುಸ್ಥಿರ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುತ್ತದೆ ಮತ್ತು ಕರ್ನಾಟಕದ ದೀರ್ಘಕಾಲೀನ ಪರಿಸರ ಮತ್ತು ಅಭಿವೃದ್ಧಿ ಗುರಿಗಳಿಗೆ ಕೊಡುಗೆ ನೀಡುತ್ತದೆ ಎಂದು ವಿಶ್ಲೇಷಿಸಿದ್ದಾರೆ ಎನ್ನಲಾಗಿದೆ. 
 ಭವಿಷ್ಯದ ಪೀಳಿಗೆಯ ಅನುಕೂಲಕ್ಕಾಗಿ ನಾವೀನ್ಯತೆ, ಸುಸ್ಥಿರತೆ ಮತ್ತು ತಂತ್ರಜ್ಞಾನ-ಚಾಲಿತ ಅಭಿವೃದ್ಧಿಯನ್ನು ಉತ್ತೇಜಿಸುವ ಬದ್ಧತೆಯೊಂದಿಗೆ ಹಸಿರು ಮತ್ತು ಹೆಚ್ಚು ಸಮೃದ್ಧ ಭಾರತವನ್ನು ನಿರ್ಮಿಸುವಲ್ಲಿ ವೈಜ್ಞಾನಿಕ ನಾಯಕತ್ವ ಮತ್ತು ಸಾರ್ವಜನಿಕ ನೀತಿಯ ನಡುವಿನ ಸಹಯೋಗದ ಮಹತ್ವವು ಮುಂದಿನ ದಿನಗಳಲ್ಲಿ ಆಧುನಿಕ ಭಾರತದ ನಿರ್ಮಾಣಕ್ಕೆ ನಾಂದಿಯಾಗಲಿದೆ ಎಂದು ಉಭಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ