26 ಕೋಟಿ ರೂ. ಲಾಭಕ್ಕೆ ಒಂದು ನಯಾ ಪೈಸೆ ಟ್ಯಾಕ್ಸ್ ಇಲ್ಲ: ಕೋಲ್ಕತ ಮಹಿಳೆಯ ಚಾಣಾಕ್ಷ ನಡೆಗೆ ಐಟಿ ಇಲಾಖೆಯೇ ಶಾಕ್! Kolkata woman 
ದೇಶ

26 ಕೋಟಿ ರೂ. ಲಾಭಕ್ಕೆ ಒಂದು ನಯಾ ಪೈಸೆ ಟ್ಯಾಕ್ಸ್ ಇಲ್ಲ: ಕೋಲ್ಕತ ಮಹಿಳೆಯ ಚಾಣಾಕ್ಷ ನಡೆಗೆ ಐಟಿ ಇಲಾಖೆಯೇ ಶಾಕ್! Kolkata woman

ಪ್ರಮುಖ ಮುಖ್ಯಾಂಶಗಳು

  • 26 ಕೋಟಿ ರೂ. ಇನ್‌ಕಮ್ ಟ್ಯಾಕ್ಸ್ ಉಳಿಸಿದ ಮಹಿಳಾ ಉದ್ಯಮಿ
  • ಐಟಿ ಇಲಾಖೆ ವಿರುದ್ಧ ಗೆದ್ದ ಬೀಗಿದೆ ಕೋಲ್ಕತ ಮೂಲದ ಮಹಿಳೆ!
  • ಇಮಾಮಿ ಗ್ರೂಪ್ ಕುಟುಂಬದ ಸರೋಜ್ ಗೋಯೆಂಕಾಗೆ ಜಯ
  • ಸರೋಜ್ ಗೋಯೆಂಕಾ ಪರ ತೀರ್ಪು ನೀಡಿದ ಆದಾಯ ತೆರಿಗೆ ಟ್ರಿಬ್ಯೂನಲ್
ಕೋಲ್ಕತ: ಕೋಲ್ಕತದ ಆದಾಯ ತೆರಿಗೆ ಅಪ್ಪೆಲೇಟ್ ಟ್ರಿಬ್ಯೂನಲ್ (ITAT) ನೀಡಿರುವ ತೀರ್ಪೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ. ಮಹಿಳೆಯೊಬ್ಬರು ( Kolkata woman ) ತಮ್ಮ ಹೂಡಿಕೆ ಮೇಲೆ ಗಳಿಸಿದ್ದ ಬರೋಬ್ಬರಿ 26 ಕೋಟಿ ರೂಪಾಯಿ ಲಾಭಕ್ಕೆ ಒಂದೇ ಒಂದು ನಯಾ ಪೈಸೆ ತೆರಿಗೆ ಕಟ್ಟದೇ ಐಟಿ ಇಲಾಖೆ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಿ ಗೆಲುವು ಸಾಧಿಸಿದ, ಮಹಿಳೆಯ ಚಾಣಾಕ್ಷ ನಡೆ ಇದೀಗ ಎಲ್ಲರ ಗಮನ ಸೆಳೆದಿದೆ.
ಖ್ಯಾತ ಎಫ್‌ಎಮ್‌ಸಿಜಿ (FMCG) ದೈತ್ಯ ಸಂಸ್ಥೆ 'ಇಮಾಮಿ' ಗ್ರೂಪ್‌ನ ಉದ್ಯಮಿ ಕುಟುಂಬಕ್ಕೆ ಸೇರಿದ ಕೋಲ್ಕತ ಮೂಲದ ಸರೋಜ್ ಗೋಯೆಂಕಾ ಎಂಬುವವರು, 2020ರಲ್ಲಿ ತಮ್ಮ ಬಳಿಯಿದ್ದ 36 ಲಕ್ಷ ಷೇರುಗಳನ್ನು ಸುಮಾರು 33.77 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಈ ವ್ಯವಹಾರದಲ್ಲಿ ಅವರಿಗೆ ಅಂದಾಜು 26.77 ಕೋಟಿ ರೂಪಾಯಿಯಷ್ಟು ದೀರ್ಘಕಾಲೀನ ಬಂಡವಾಳ ಗಳಿಕೆ (LTCG) ಲಭಿಸಿತ್ತು. ಸಾಮಾನ್ಯ ಸಂದರ್ಭಗಳಲ್ಲಾಗಿದ್ದರೆ ಈ ಬೃಹತ್ ಮೊತ್ತಕ್ಕೆ ಕೋಟಿಗಟ್ಟಲೆ ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತಿತ್ತು, ಆದರೆ ಅವರು ಸೂಕ್ತ ತೆರಿಗೆ ಯೋಜನೆಯ ಮೂಲಕ ಇಷ್ಟೊಂದು ಹಣವನ್ನು ಯಶಸ್ವಿಯಾಗಿ ಉಳಿಸಿದ್ದಾರೆ.
ಷೇರುಗಳ ಮಾರಾಟದಿಂದ ಲಾಭ ಗಳಿಸಿದ ತಕ್ಷಣವೇ, ಸರೋಜ್ ಗೋಯೆಂಕಾ ಅವರು ಆ ಹಣವನ್ನು ಕೋಲ್ಕತದ ಕ್ವೀನ್ಸ್ ಪಾರ್ಕ್‌ನಲ್ಲಿ ವಸತಿ ಬಂಗಲೆಯೊಂದನ್ನು ನಿರ್ಮಿಸಲು ಹೂಡಿಕೆ ಮಾಡಿದರು. ಷೇರು ಮಾರಾಟ ಮಾಡಿದ ದಿನಾಂಕದಿಂದ ಮೂರು ವರ್ಷಗಳ ಒಳಗಾಗಿ ಬಂಗಲೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರಿಂದ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54F ಅಡಿಯಲ್ಲಿ ಬಂಡವಾಳ ಗಳಿಕೆಯ ಮೇಲಿನ ಶೇ. 100 ರಷ್ಟು ತೆರಿಗೆ ವಿನಾಯಿತಿಯನ್ನು ಅವರು ಕ್ಲೈಮ್ ಮಾಡಿದ್ದರು.
ಆದರೆ, ಮೌಲ್ಯಮಾಪನ ಅಧಿಕಾರಿ (AO) ಮಾತ್ರ ಅದಕ್ಕೆ ಒಪ್ಪಲಿಲ್ಲ. ಗೋಯೆಂಕಾ ಅವರ ಈ ಚಾಣಾಕ್ಷ ಹಣಕಾಸು ಯೋಜನೆಯನ್ನು ಒಪ್ಪದ ಅಧಿಕಾರಿ, ತೆರಿಗೆ ವಿನಾಯಿತಿಯನ್ನು ನಿರಾಕರಿಸಿದರು. ಗೋಯೆಂಕಾ ಅವರು ಈಗಾಗಲೇ ಎರಡು ವಸತಿ ಆಸ್ತಿಗಳನ್ನು ಹೊಂದಿದ್ದು, ಇದು ಸೆಕ್ಷನ್ 54F ಅಡಿಯಲ್ಲಿ ವಿಧಿಸಲಾದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಧಿಕಾರಿ ವಾದಿಸಿದರು. ಇದರೊಂದಿಗೆ, ಬಂಗಲೆಯ ನಿರ್ಮಾಣ ಕಾರ್ಯವು ಷೇರುಗಳ ಮಾರಾಟಕ್ಕೂ ವರ್ಷಗಳ ಮೊದಲೇ ಆರಂಭವಾಗಿತ್ತು ಮತ್ತು ಮಾರಾಟದಿಂದ ಬಂದ ಹಣವನ್ನು ನೇರವಾಗಿ ನಿರ್ಮಾಣಕ್ಕೆ ಬಳಸಲಾಗಿಲ್ಲ ಎಂಬ ಕಾರಣಗಳನ್ನು ನೀಡಿ, ಆದಾಯ ತೆರಿಗೆ ಇಲಾಖೆಯು ಗೋಯೆಂಕಾ ಅವರಿಗೆ 3 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿತು.
ಬಳಿಕ ಈ ಪ್ರಕರಣವು ಐಟಿಎಟಿ (ITAT) ಮೆಟ್ಟಿಲೇರಿತು. ಸುದೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯದಲ್ಲಿ ಸರೋಜ್ ಗೋಯೆಂಕಾ ಅವರ ಪರವಾಗಿ ತೀರ್ಪು ಹೊರಬಿದ್ದಿದೆ. ಐಟಿಎಟಿ ಕೋಲ್ಕತದ 'ಡಿ' ಪೀಠವು ಈ ಬಗ್ಗೆ ಸ್ಪಷ್ಟನೆ ನೀಡಿ, ಗೋಯೆಂಕಾ ಅವರು ಹೊಂದಿರುವ ಇತರ ಆಸ್ತಿಗಳು ಜಂಟಿ ಮಾಲೀಕತ್ವದಲ್ಲವೆ ಅಥವಾ ಅವುಗಳನ್ನು ವಸತಿ ಆಸ್ತಿ ಎಂದು ವರ್ಗೀಕರಿಸಲಾಗಿಲ್ಲ ಎಂದು ಹೈಲೈಟ್ ಮಾಡಿತು. ಜೊತೆಗೆ, ಕಾನೂನಿನಲ್ಲಿ ಹೊಸ ಆಸ್ತಿಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲಾಗಿದೆಯೇ ಹೊರತು, ನಿರ್ಮಾಣ ಕಾರ್ಯವನ್ನು ಯಾವಾಗ ಆರಂಭಿಸಬೇಕು ಎಂಬುದರ ಬಗ್ಗೆ ಯಾವುದೇ ನಿಯಮವಿಲ್ಲ ಎಂದು ಪೀಠವು ಸೇರಿಸಿತು.
ಇದೇ ವೇಳೆ, ಷೇರು ಮಾರಾಟದಿಂದ ಬಂದ ಅದೇ ಹಣವನ್ನೇ ನೇರವಾಗಿ ಕಟ್ಟಡ ನಿರ್ಮಾಣಕ್ಕೆ ಬಳಸಬೇಕು ಎಂಬ ಯಾವುದೇ ಕಡ್ಡಾಯ ನಿಯಮವಿಲ್ಲ ಎಂಬುದನ್ನು ಗೋಯೆಂಕಾ ಅವರ ಪರ ವಕೀಲರು ಯಶಸ್ವಿಯಾಗಿ ಸಾಬೀತುಪಡಿಸಿದರು. ಉದ್ಯಮಿಯ ಪರಿಸ್ಥಿತಿ ಮತ್ತು ವಾಸ್ತವ ಸಂಗತಿಗಳನ್ನು ಪರಿಗಣಿಸಿದ ಐಟಿಎಟಿ, ತೆರಿಗೆದಾರರು ಹೊಸ ಆಸ್ತಿಯ ನಿರ್ಮಾಣದಲ್ಲಿ ಮರುಹೂಡಿಕೆ ಮಾಡಿದ ಬಂಡವಾಳ ಗಳಿಕೆಗೆ ತೆರಿಗೆ ವಿನಾಯಿತಿ ಪಡೆಯಲು ಸಂಪೂರ್ಣ ಅರ್ಹರಾಗಿದ್ದಾರೆ. ಆದ್ದರಿಂದ ನಾವು ಸಿಐಟಿ(ಎ) ಆದೇಶವನ್ನು ರದ್ದುಗೊಳಿಸುತ್ತಿದ್ದೇವೆ ಮತ್ತು ಸೆಕ್ಷನ್ 54F ಅಡಿಯಲ್ಲಿ ವಿನಾಯಿತಿ ನೀಡಿ 3 ಕೋಟಿ ರೂ. ತೆರಿಗೆಯನ್ನು ಕೈಬಿಡುವಂತೆ ಮೌಲ್ಯಮಾಪನ ಅಧಿಕಾರಿಗೆ (AO) ನಿರ್ದೇಶನ ನೀಡುತ್ತಿದ್ದೇವೆ" ಎಂದು ಪ್ರಕಟಿಸಿತು.

ಏನಿದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54F?

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54F ಅಡಿಯಲ್ಲಿ, ಒಬ್ಬ ವ್ಯಕ್ತಿಯು ವಸತಿ ಮನೆಯನ್ನು ಹೊರತುಪಡಿಸಿ ಉಳಿದ ಆಸ್ತಿಗಳಾದ ಮ್ಯೂಚುವಲ್ ಫಂಡ್‌ಗಳು, ಷೇರುಗಳು, ಚಿನ್ನ ಅಥವಾ ಬಾಂಡ್‌ಗಳನ್ನು ಮಾರಾಟ ಮಾಡಬಹುದು. ಇದರಿಂದ ಬರುವ ದೀರ್ಘಕಾಲೀನ ಬಂಡವಾಳ ಗಳಿಕೆಯ (LTCG) ಮೇಲಿನ ತೆರಿಗೆ ವಿನಾಯಿತಿಯನ್ನು ಕ್ಲೈಮ್ ಮಾಡಲು, ಆಸ್ತಿ ಮಾರಾಟದಿಂದ ಬಂದ ಒಟ್ಟು ಹಣವನ್ನು ಮಾರಾಟ ಮಾಡಿದ ಮೂರು ವರ್ಷಗಳ ಒಳಗಾಗಿ ಭಾರತದಲ್ಲಿ ವಸತಿ ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು ಮರುಹೂಡಿಕೆ ಮಾಡಬೇಕಾಗುತ್ತದೆ.
ಮೇಲ್ನೋಟಕ್ಕೆ ಇದು ಹಣಕಾಸಿನ ಕಾನೂನಿನ ಲೂಪ್‌ಹೋಲ್ ತರಹ ಕಂಡರೂ, ಈ ನಿಬಂಧನೆಯನ್ನು ಪ್ರಮುಖವಾಗಿ ವಸತಿ ವಲಯದಲ್ಲಿ ಹೂಡಿಕೆಯನ್ನು ಉತ್ತೇಜಿಸುವ ಉದ್ದೇಶದಿಂದಲೇ ರೂಪಿಸಲಾಗಿದೆ. ಆದಾಗ್ಯೂ, ತೆರಿಗೆದಾರರು ಈ ವಿನಾಯಿತಿ ಪಡೆಯಲು ಕೆಲವು ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ತಿದ್ದುಪಡಿ ಮಾಡಲಾದ ಪ್ರಸ್ತುತ ಕಾನೂನಿನ ಪ್ರಕಾರ, ಈ ಸೆಕ್ಷನ್ ಅಡಿಯಲ್ಲಿ ಸಿಗುವ ಗರಿಷ್ಠ ತೆರಿಗೆ ವಿನಾಯಿತಿಯನ್ನು 10 ಕೋಟಿ ರೂಪಾಯಿಗಳಿಗೆ ಸೀಮಿತಗೊಳಿಸಲಾಗಿದೆ. ಈ ಹೊಸ ಮಿತಿಯನ್ನು ಕೇಂದ್ರ ಬಜೆಟ್ 2023 ರ ಹಣಕಾಸು ಕಾಯ್ದೆಯ (Finance Act, 2023) ಮೂಲಕ ಜಾರಿಗೆ ತರಲಾಗಿದೆ, (ಏಜೆನ್ಸೀಸ್​).