ಕೋಲ್ಕತಾ ಗೋದಾಮು ಕುಸಿತ ದುರಂತ: ಲಂಚ ಪಡೆದು ಸಾವಿನ ನಗರಿ ಮಾಡಿದ್ರು! ಟಿಎಂಸಿ ವಿರುದ್ಧ ಸಿಎಂ ಸುವೇಂದು ವಾಗ್ದಾಳಿ!  
ದೇಶ

ಕೋಲ್ಕತಾ ಗೋದಾಮು ಕುಸಿತ ದುರಂತ: ಲಂಚ ಪಡೆದು ಸಾವಿನ ನಗರಿ ಮಾಡಿದ್ರು! ಟಿಎಂಸಿ ವಿರುದ್ಧ ಸಿಎಂ ಸುವೇಂದು ವಾಗ್ದಾಳಿ! Suvendu Adhikari

ಪ್ರಮುಖ ಮುಖ್ಯಾಂಶಗಳು

  • ಲಂಚದ ಹಣಕ್ಕಾಗಿ ಕೋಲ್ಕತಾವನ್ನು ಆನಂದದ ನಗರದಿಂದ ಸಾವಿನ ನಗರಿಯನ್ನಾಗಿ ಮಾಡಿದೆ ಟಿಎಂಸಿ!
  • ಗಾರ್ಡನ್ ರೀಚ್ ದುರಂತದ ಸಂತ್ರಸ್ತರಿಗೆ ₹10 ಲಕ್ಷ ಹಾಗೂ ಗಾಯಾಳುಗಳಿಗೆ ₹1 ಲಕ್ಷ ಪರಿಹಾರ ಘೋಷಣೆ.
  • ಗೋದಾಮು ಕುಸಿತದ ಬೆನ್ನಲ್ಲೇ ಕೋಲ್ಕತಾ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ 4 ವಾರಗಳ ಕಾಲ ಕಾಮಗಾರಿ ಸಂಪೂರ್ಣ ಬ್ಯಾನ್.
  • ಐಐಟಿ ಇಂಜಿನಿಯರ್‌ಗಳ ನೇತೃತ್ವದಲ್ಲಿ ಕೋಲ್ಕತಾದ ಎಲ್ಲಾ ಬಿಲ್ಡಿಂಗ್ ಪ್ಲಾನ್‌ಗಳ ಕಟ್ಟುನಿಟ್ಟಿನ ಆಡಿಟ್‌ಗೆ ಆದೇಶ.
ಕೋಲ್ಕತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿ ಸಂಭವಿಸಿದ ಗೋದಾಮು ಕುಸಿತ ದುರಂತದಲ್ಲಿ ಮೃತರ ಸಂಖ್ಯೆ ಗುರುವಾರ ಬೆಳಿಗ್ಗೆ ಒಂಬತ್ತಕ್ಕೆ (9) ಏರಿಕೆಯಾಗಿದೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ(Suvendu Adhikari) ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಇದೇ ವೇಳೆ, ದುರಂತದ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳು, ಮುಂಬರುವ ನಾಲ್ಕು ವಾರಗಳ ಕಾಲ ಕೋಲ್ಕತಾ ಮತ್ತು ಸುತ್ತಮುತ್ತಲಿನ ಪ್ರಮುಖ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಜೊತೆಗೆ, ಈ ದುರಂತಕ್ಕೆ ಮಾಜಿ ತೃಣಮೂಲ ಕಾಂಗ್ರೆಸ್ (TMC) ಸರ್ಕಾರ ಹಾಗೂ ಕೋಲ್ಕತಾದ ಮಾಜಿ ಮೇಯರ್ ಫಿರ್ಹಾದ್ ಹಕೀಮ್ ಅವರ ಭ್ರಷ್ಟಾಚಾರವೇ ನೇರ ಕಾರಣ ಎಂದು ದಾಖಲೆಗಳನ್ನು ಪ್ರದರ್ಶಿಸುವ ಮೂಲಕ ಸಿಎಂ ಸುವೇಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

₹10 ಲಕ್ಷ ಪರಿಹಾರ ಘೋಷಣೆ; ಉನ್ನತ ಮಟ್ಟದ ಸಮಿತಿ ರಚನೆ

ವಿಧಾನಸಭೆಯಲ್ಲಿ ದುರಂತದ ವಿವರ ನೀಡಿದ ಸಿಎಂ ಸುವೇಂದು, ದುರಂತದಲ್ಲಿ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಐವರ ಮೃತದೇಹಗಳನ್ನು ಈಗಾಗಲೇ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಉಳಿದ ನಾಲ್ವರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಗಾಯಗೊಂಡಿರುವ 15 ಜನರ ಸ್ಥಿತಿ ಸ್ಥಿರವಾಗಿದ್ದು, ನಾಲ್ವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹1 ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದರು.
ಕೋಲ್ಕತಾ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ನಡೆಯುತ್ತಿರುವ ನಿರ್ಮಾಣ ಯೋಜನೆಗಳ ಸುರಕ್ಷತೆಯನ್ನು ಪರಿಶೀಲಿಸಲು ಮುಖ್ಯಮಂತ್ರಿಗಳು 12 ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್ ಪಾಂಡೆ ನೇತೃತ್ವದ ಈ ಸಮಿತಿಯಲ್ಲಿ ಐಐಟಿ-ಖರಗ್‌ಪುರ (IIT-Kharagpur), ರೈಟ್ಸ್ (RITES), ಇರ್ಕಾನ್ (IRCON) ಸಂಸ್ಥೆಗಳ ಇಂಜಿನಿಯರ್‌ಗಳು, ಕೋಲ್ಕತಾ ಪೊಲೀಸ್ ಕಮಿಷನರ್ ಅಜಯ್ ನಂದ್ ಮತ್ತು ಮಹಾನಗರ ಪಾಲಿಕೆ ಕಮಿಷನರ್ ಸ್ಮಿತಾ ಪಾಂಡೆ ಇರಲಿದ್ದಾರೆ. ಈ ಸಮಿತಿಯು ಅನುಮೋದನೆ ಪಡೆದಿರುವ ಎಲ್ಲಾ ಕಟ್ಟಡ ಯೋಜನೆಗಳ ಆಡಿಟ್ ನಡೆಸಲಿದೆ. ಅಲ್ಲಿಯವರೆಗೆ ಕೋಲ್ಕತಾ, ರಾಜರಹತ್-ನ್ಯೂಟೌನ್, ಮಹೇಶ್‌ತಲಾ ಸೇರಿದಂತೆ ಹಲವು ವಲಯಗಳಲ್ಲಿ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ.

ಆನಂದದ ನಗರವನ್ನು ಸಾವಿನ ನಗರಿಯನ್ನಾಗಿ ಮಾಡಿದ್ದೀರಿ! - ಟಿಎಂಸಿ ವಿರುದ್ಧ ಆಕ್ರೋಶ

ಬುಧವಾರ ಮಧ್ಯಾಹ್ನ ಕೋಲ್ಕತಾ ಪೋರ್ಟ್‌ಗೆ ಸೇರಿದ, ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿದ್ದ ಜಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮಿನ ಮೇಲ್ಛಾವಣಿ ಕುಸಿದು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಈ ದುರಂತದ ತನಿಖಾ ದಾಖಲೆಗಳ ಕಡತವನ್ನು ಸದನದಲ್ಲಿ ಪ್ರದರ್ಶಿಸಿದ ಸುವೇಂದು ಅಧಿಕಾರಿ, ಈ ಕಟ್ಟಡದ ಯೋಜನೆಗೆ ಇದೇ ವರ್ಷದ ಜನವರಿ 17 ರಂದು ಅನುಮೋದನೆ ನೀಡಲಾಗಿತ್ತು. ಇದು ಹಿಂದಿನ ಟಿಎಂಸಿ ಸರ್ಕಾರದ ಪಾಪದ ಫಲ. ಲಂಚದ ಹಣಕ್ಕಾಗಿ ನೀವು ಆನಂದದ ನಗರ ಎಂದೇ ಪ್ರಸಿದ್ಧವಾಗಿದ್ದ ಕೋಲ್ಕತಾವನ್ನು ಸಾವಿನ ನಗರಿಯನ್ನಾಗಿ ಮಾಡಿದ್ದೀರಿ ಎಂದು ಟಿಎಂಸಿ ಮುಖ್ಯ ಸಚೇತಕ ಅಖ್ರುಜ್ಜಮಾನ್ ವಿರುದ್ಧ ಕಿಡಿಕಾರಿದ್ದಾರೆ.
ಯಾವುದೇ ರಚನಾತ್ಮಕ ವಿನ್ಯಾಸ ಮತ್ತು ಸುರಕ್ಷತಾ ಮಾನದಂಡಗಳಿಲ್ಲದ ದೋಷಪೂರಿತ ಯೋಜನೆಗೆ ಮಾಜಿ ಮೇಯರ್ ಫಿರ್ಹಾದ್ ಹಕೀಮ್ ಸಹಿ ಹಾಕಿ ಒಪ್ಪಿಗೆ ನೀಡಿದ್ದಾರೆ. ಇಂತಹ ಎಷ್ಟು ಕಾನೂನುಬಾಹಿರ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆಯೋ ದೇವರಿಗೇ ಗೊತ್ತು. ಜನರ ಜೀವದ ಜೊತೆ ಆಟವಾಡಿದ ಯಾರನ್ನೂ ಬಿಡುವುದಿಲ್ಲ. ಕರ್ತವ್ಯ ಲೋಪ ಎಸಗಿದ ಇಂಜಿನಿಯರ್‌ಗಳ ಪಟ್ಟಿಯೂ ನಮ್ಮ ಬಳಿ ಇದೆ. ಈಗಾಗಲೇ ಐವರನ್ನು ಬಂಧಿಸಲಾಗಿದ್ದು, ಮಾಜಿ ಮೇಯರ್ ಅವರ ವಿಶೇಷ ಕರ್ತವ್ಯಾಧಿಕಾರಿ (OSD) ಕಾಳಿಚರಣ್ ಬ್ಯಾನರ್ಜಿ ಬಂಧನವಾದರೆ ಇಡೀ ಪಾಲಿಕೆಯ ಭ್ರಷ್ಟಾಚಾರದ ಜಾಲ ಹೊರಬರಲಿದೆ ಎಂದು ಸಿಎಂ ಗುಡುಗಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ ಭಾರತೀಯ ಸೇನೆ

ಕೋಲ್ಕತಾ ಮಹಾನಗರ ಪಾಲಿಕೆಯು ಇಂತಹ ದೊಡ್ಡ ದುರಂತಗಳನ್ನು ಎದುರಿಸಲು ಸಜ್ಜಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ರಕ್ಷಣಾ ಕಾರ್ಯಕ್ಕೆ ಸೇನೆಯ ನೆರವು ಪಡೆದಿರುವುದನ್ನು ಖಚಿತಪಡಿಸಿದರು. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಬಿಹಾರ್ ರೆಜಿಮೆಂಟ್‌ನ ಸುಮಾರು 215 ಸೇನಾ ಯೋಧರು ಆಧುನಿಕ ಉಪಕರಣಗಳೊಂದಿಗೆ ಧಾವಿಸಿದ್ದಾರೆ. ಭಾರತೀಯ ಸೇನೆ, ಎನ್‌ಡಿಆರ್‌ಎಫ್ (NDRF) ಮತ್ತು ನಾಗರಿಕ ರಕ್ಷಣಾ ಪಡೆಗಳು ಜಂಟಿಯಾಗಿ ರಾತ್ರಿಯಿಡೀ ಶ್ರಮಿಸುತ್ತಿವೆ. ಜನರ ಪ್ರಾಣದ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್​).