Lok Bhavan | ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್
ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಭವನವನ್ನು ಲೋಕಭವನ ಎಂದು ಮರುನಾಮಕರಣ ಮಾಡಲಾಗಿದೆ ಎಂದು ರಾಜ್ಯಪಾಲ ಸಿ.ವಿ. ಆನಂದ ಬೋಸ್ ತಿಳಿಸಿದ್ದು, ಕೇಂದ್ರ ಸರ್ಕಾರದ ಒಪ್ಪಿಗೆಯ ಬಳಿಕ ಅಧಿಕೃತ ಘೋಷಣೆ ಹೊರಬಿದ್ದಿದೆ.
ಭಾರತ ಸರ್ಕಾರದ ಗೃಹ ಸಚಿವಾಲಯದ ಸಂವಹನದ ಅನುಸಾರವಾಗಿ, 25.11.2025 ರಂದು ಹೊರಡಿಸಲಾದ ಮೆಮೊ ಸಂಖ್ಯೆ 7/10/2025 (ಭಾಗ)-ಎಂ&ಜಿ ಮೂಲಕ, ಕೋಲ್ಕತ್ತಾ, ಫ್ಲ್ಯಾಗ್‌ಸ್ಟಾಫ್ ಹೌಸ್ ಮತ್ತು ಡಾರ್ಜಿಲಿಂಗ್‌ನಲ್ಲಿರುವ "ರಾಜ್ ಭವನ"ದ ಹಿಡುವಳಿಗಳ ಹೆಸರನ್ನು ಈ ಮೂಲಕ ಮಾರ್ಪಡಿಸಲಾಗಿದ್ದು, "ಲೋಕ ಭವನ" ಎಂದು ಮರುನಾಮಕರಣ ಮಾಡಲಾಗಿದೆ ಎಂದು ಇಲ್ಲಿ ತಿಳಿಸಲಾಗಿದೆ. ಈ ಅಧಿಸೂಚನೆಯು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ರಾಜ್ಯಪಾಲ ಬೋಸ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಲೋಕಭವನದ ಅಧಿಕೃತ ಎಕ್ಸ್ ಖಾತೆಯ ಮೂಲಕ ಜನರ ಆತಂಕ ದೂರ ಮಾಡುವ ಭರವಸೆ ನೀಡಿರುವ ರಾಜ್ಯಪಾಲರು, ಕಳೆದ ಮೂರು ವರ್ಷಗಳಲ್ಲಿ, ಜನರಾಜ್ ಭವನವು ಜನರಿಗಾಗಿ ಹಲವಾರು ಅಭಿವೃದ್ದಿ ಆಧಾರಿತ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಜನರ ಅಗತ್ಯದ ಸಮಯದಲ್ಲಿ ಅವರ ಬೆಂಬಲಕ್ಕೆ ನಿಲ್ಲುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ರಾಜ್ಯದ ಯಾವುದೇ ಮೂಲೆಯಲ್ಲಿ ಹಿಂಸಾಚಾರ, ನೈಸರ್ಗಿಕ ವಿಕೋಪಗಳು ಅಥವಾ ದೌರ್ಜನ್ಯಗಳ ಆರೋಪ ಕೇಳಿ ಬಂದರೆ ಜನರಾಜ್ ಭವನವು ಜನರ ಮನೆ ಬಾಗಿಲಿಗೆ ತಲುಪಿ ಸಹಾಯ ಹಸ್ತ ಚಾಚಿದೆ ಎಂದು ಬರೆದುಕೊಂಡಿದ್ದಾರೆ.
2023 ರ ಮಾರ್ಚ್ 27 ರಂದು ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಜ್ಯಪಾಲ ಡಾ. ಸಿ.ವಿ. ಆನಂದ ಬೋಸ್ ಅವರ ಕೋರಿಕೆಯ ಮೇರೆಗೆ ಅಂದಿನ ರಾಜಭವನದ ಸಾಂಕೇತಿಕ ಕೀಲಿಯನ್ನು ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಸ್ತಾಂತರಿಸಿದರು, ಇದು ಜನರ ರಾಜಭವನದ ಹೊಸ ಯುಗಕ್ಕೆ ನಾಂದಿ ಹಾಡಿತು ಎಂದು ಬೋಸ್ ಶನಿವಾರ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಜಭವನವನ್ನು 1803 ರಲ್ಲಿ ನಿರ್ಮಿಸಲಾಗಿದ್ದು, ಆ ಬಳಿಕ ಇದನ್ನು ಸರ್ಕಾರಿ ಭವನ ಎಂದು ಕರೆಯಲಾಗುತ್ತಿದೆ. ಇದರಲ್ಲಿ ಸುಮಾರು 23 ಗವರ್ನರ್-ಜನರಲ್ ಮತ್ತು ವೈಸ್‌ರಾಯ್‌ಗಳು ವಾಸಿಸುತ್ತಿದ್ದರು. ಆ ಬಳಿಕ ಇದು ಬಂಗಾಳದ ಲೆಫ್ಟಿನೆಂಟ್ ಗವರ್ನರ್ರ ಅಧಿಕೃತ ನಿವಾಸವಾಯಿತು ಎಂದು ತಿಳಿದುಬಂದಿದ್ದು. ಪ್ರಸ್ತುತ ಇದನ್ನು ಪಶ್ಚಿಮ ಬಂಗಾಳದ ಗವರ್ನರ್ ಕಚೇರಿಯಾಗಿದೆ.
ಗಡಿಗಳ ಪರಿಶೀಲನೆ...
ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಬಾಂಗ್ಲಾದೇಶದ ಸಾಕಷ್ಟು ಜನ ಅಕ್ರಮ ವಲಸಿಗರು ತಮ್ಮ ದೇಶಕ್ಕೆ ಮರಳುತ್ತಿದ್ದಾರೆ ಎಂಬ ವರದಿಗಳು ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ರಾಜ್ಯಪಾಲ ಬೋಸ್, ಉತ್ತರ 24 ಪರಗಣದಲ್ಲಿರುವ ಹಕೀಂಪುರ ಗಡಿ ಹೊರಠಾಣೆಗೆ ಭೇಟಿ ನೀಡಿದರು. ಪರಿಸ್ಥಿತಿಯನ್ನು ವೈಯಕ್ತಿಕವಾಗಿ ವೀಕ್ಷಿಸಿದ ನಂತರ ಹಿರಿಯ ಬಿಎಸ್‌ಎಫ್ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ(ಏಜೆನ್ಸೀಸ್).