ಪಶ್ಚಿಮ ಬಂಗಾಳದಲ್ಲಿ ಕೇವಲ 48 ಗಂಟೆಯೊಳಗೆ ಎರಡು ಅಗ್ನಿ ಅವಘಡ  
ದೇಶ

48 ಗಂಟೆ... 2 ಕಡೆಗಳಲ್ಲಿ ಬೆಂಕಿ, 18 ಮಂದಿ ಬಲಿ; ಹೊಟೇಲ್‌ಗಳೇ ‘ಡೆತ್ ಟ್ರ್ಯಾಪ್’? | West Bengal hotels on fire

West Bengal hotel fire: ಪಶ್ಚಿಮ ಬಂಗಾಳದಲ್ಲಿ ಕೇವಲ 48 ಗಂಟೆಗಳ ಅಂತರದಲ್ಲಿ ನಡೆದ ಎರಡು ಭೀಕರ ಅಗ್ನಿ ದುರಂತಗಳು ದೇಶವನ್ನೇ ಬೆಚ್ಚಿಬೀಳಿಸಿವೆ. ಕೋಲ್ಕತ್ತಾ ಹಾಗೂ ಬಿರ್ಭೂಮ್ ಜಿಲ್ಲೆಯ ತಾರಾಪೀಠದಲ್ಲಿ ಹೋಟೆಲ್‌ಗಳಲ್ಲಿ ಸಂಭವಿಸಿದ ಬೆಂಕಿ ಅವಘಡಗಳಲ್ಲಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ. ಆರಾಮಾಗಿ ನಿದ್ದೆ ಮಾಡುತ್ತಿದ್ದವರು ಬೆಂಕಿ, ದಟ್ಟ ಹೊಗೆಯಿಂದ ಹೊರಬರಲಾಗದೆ ಪ್ರಾಣ ಕಳೆದುಕೊಂಡಿದ್ದಾರೆ.
ಕೋಲ್ಕತ್ತಾ ಮತ್ತು ತಾರಾಪೀಠದಲ್ಲಿ ನಡೆದ ಎರಡೂ ದುರಂತಗಳಲ್ಲಿ ತಲಾ 9 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಗಳ ಬಳಿಕ ಹೋಟೆಲ್‌ಗಳಲ್ಲಿ ಫೈರ್ ಸೇಫ್ಟಿ, ತುರ್ತು ನಿರ್ಗಮನ ದಾರಿ ಹಾಗೂ ಕಟ್ಟಡದ ಸುರಕ್ಷತಾ ಮಾನದಂಡಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಹೋಡೆಲ್​ ಮಾಲಿಕರ ಬೇಜವಾಬ್ದಾರಿ ತನದಿಂದಲೇ ಈ ದುರಂತವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕೋಲ್ಕತ್ತಾದಲ್ಲಿ ಹೋಟೆಲ್‌ಗೆ ಬೆಂಕಿ

ಕೋಲ್ಕತ್ತಾದ ಮಿರ್ಜಾ ಗಾಲಿಬ್ ಸ್ಟ್ರೀಟ್‌ನ ಐದು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಮುಂಜಾನೆ ಸುಮಾರು 1.45ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಈ ಕಟ್ಟಡದಲ್ಲಿ ಹಲವು ಹೋಟೆಲ್‌ಗಳಿದ್ದವು. ಬೆಂಕಿ ಕಾಣಿಸಿಕೊಂಡಾಗ ಬಹುತೇಕ ಅತಿಥಿಗಳು ಗಾಢ ನಿದ್ರೆಯಲ್ಲಿದ್ದರು. ರೂಮ್​ಗಳಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಹಲವರಿಗೆ ಹೊರಬರಲು ಆಗಿಲ್ಲ. ಆ ಬಿಲ್ಡಿಂಗ್​ನಲ್ಲಿ ಕಿಟಕಿಗಳು ಕಡಿಮೆ ಇದ್ದು, ರಿಯಾಗಿ ಗಾಳಿಯಾಡುತ್ತಿರಲಿಲ್ಲ ಎನ್ನಲಾಗಿದೆ. ಸುಮಾರು 80 ಮಂದಿಯನ್ನು ರಕ್ಷಿಸಲಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಬೆಂಕಿಗಿಂತ ಹೊಗೆಯೇ ಡೇಂಜರ್​

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಹೆಚ್ಚಿನ ಸಾವುಗಳು ಸುಟ್ಟ ಗಾಯಗಳಿಂದ ಸಂಭವಿಸಿಲ್ಲ. ಬದಲಾಗಿ ದಟ್ಟ ಹೊಗೆಯಿಂದ ಉಸಿರುಗಟ್ಟಿರುವುದೇ ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಕಟ್ಟಡದೊಳಗೆ ಹೊಗೆ ತುಂಬಿಕೊಂಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗೂ ಮೇಲಿನ ಮಹಡಿಗಳನ್ನು ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಕಷ್ಟವಾಗಿತ್ತು.

ತನಿಖೆಗೆ ಎಸ್​ಐಟಿ ರಚನೆ

ಘಟನೆ ಸಂಬಂಧ ಕೋಲ್ಕತ್ತಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಡೆಪ್ಯುಟಿ ಕಮಿಷನರ್ ಹುದ್ದೆಯ ಅಧಿಕಾರಿಯ ನೇತೃತ್ವದಲ್ಲಿ ಆರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕ ಇಲಾಖೆಯೂ ಪ್ರತ್ಯೇಕ ದೂರು ದಾಖಲಿಸಿದೆ.
ಇನ್ನೊಂದೆಡೆ, ಕೋಲ್ಕತ್ತಾ ದುರಂತಕ್ಕೂ ಮೊದಲು ಬಿರ್ಭೂಮ್ ಜಿಲ್ಲೆಯ ಪ್ರಸಿದ್ಧ ತಾರಾಪೀಠದಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ನಾಲ್ಕು ಅಂತಸ್ತಿನ ಹೋಟೆಲ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಮುಂಜಾನೆ ಸುಮಾರು 4.30ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. ಆಗಲೂ ಬಹುತೇಕ ಅತಿಥಿಗಳು ನಿದ್ದೆಯಲ್ಲಿದ್ದರು. ದಟ್ಟ ಹೊಗೆ ಹೋಟೆಲ್‌ನ್ನು ಆವರಿಸಿದ್ದರಿಂದ ಹೊರಬರಲು ಹಲವರು ಪರದಾಡಿದರು. ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ.

ಶಾರ್ಟ್ ಸರ್ಕ್ಯೂಟ್ ಶಂಕೆ

ಎರಡೂ ಘಟನೆಗಳ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತಾರಾಪೀಠ ದುರಂತದ ಬಳಿಕ ಹೋಟೆಲ್ ಮಾಲೀಕ ಹಾಗೂ ಅವರ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಫೈರ್ ಸೇಫ್ಟಿ ನಿಯಮಗಳನ್ನು ಪಾಲಿಸದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಹಲವು ಹೋಟೆಲ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ,(ಏಜೆನ್ಸೀಸ್​).