ಅಂದು ದೇಶಪ್ರಿಯ ಪಾರ್ಕ್, ಇಂದು ಚೋರ್‌ಬಗಾನ್: 
ದೇಶ

ಅಂದು ದೇಶಪ್ರಿಯ ಪಾರ್ಕ್, ಇಂದು ಚೋರ್‌ಬಗಾನ್: 11 ವರ್ಷಗಳಾದರು ಎಚ್ಚೆತ್ತುಕೊಳ್ಳದ ವ್ಯವಸ್ಥೆಗೆ ಬಲಿಯಾಗಿದ್ದು ಅಮಾಯಕರು! | Kolkata Stampede

Kolkata Stampede: ದೊಡ್ಡದೊಂದು ದುರಂತ ಸಂಭವಿಸುವವರೆಗೆ ಸಣ್ಣಪುಟ್ಟ ಲೋಪದೋಷಗಳು ಮೌನವಾಗಿರುತ್ತವೆ. ಕೋಲ್ಕತ್ತಾದ ಚೋರ್‌ಬಗಾನ್‌ನಲ್ಲಿಯೂ ಆಗಿದ್ದು ಅದೇ. ಸುಮಾರು 10 ವರ್ಷಗಳ ಹಿಂದೆ ಸಂಭವಿಸಿದ್ದ ಕರಾಳ ಘಟನೆ ಮರುಕಳಿಸಿದೆ.

Kolkata Stampede: ದೊಡ್ಡದೊಂದು ದುರಂತ ಸಂಭವಿಸುವವರೆಗೆ ಸಣ್ಣಪುಟ್ಟ ಲೋಪದೋಷಗಳು ಮೌನವಾಗಿರುತ್ತವೆ. ಕೋಲ್ಕತ್ತಾದ ಚೋರ್‌ಬಗಾನ್‌ನಲ್ಲಿಯೂ ಆಗಿದ್ದು ಅದೇ. ಸುಮಾರು 10 ವರ್ಷಗಳ ಹಿಂದೆ ಸಂಭವಿಸಿದ್ದ ಕರಾಳ ಘಟನೆ ಮರುಕಳಿಸಿದೆ. ದುರ್ಗಾ ಪೂಜೆಯ ಸಂಭ್ರಮದ ಆರಂಭದ ದಿನವೇ ನಡೆದ ಭೀಕರ ಕಾಲ್ತುಳಿತದಲ್ಲಿ ಸುಮಾರು 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಎಲ್ಲರ ಮೊದಲ ಆದ್ಯತೆಯಾಗಿದ್ದರೂ, ವ್ಯವಸ್ಥೆಯ ಗಂಭೀರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂಬ ಕಹಿ ಸತ್ಯವನ್ನಂತು ಎಲ್ಲರೂ ಒಪ್ಪಿಕೊಳ್ಳಲೇಬೇಕು.

ಸಿಟಿ ಆಫ್ ಜಾಯ್ ಎಂದೇ ಖ್ಯಾತಿ ಪಡೆದ ಕೋಲ್ಕತ್ತಾಗೆ ಜನಸಂದಣಿ ನಿರ್ವಹಣೆ ಹೊಸದೇನಲ್ಲ. ಇಲ್ಲಿನ ಪೂಜೆಗಳು, ಕ್ರಿಸ್ಮಸ್ ಆಚರಣೆಗಳು, ಈಡನ್ ಗಾರ್ಡನ್ಸ್ ಕ್ರಿಕೆಟ್ ಪಂದ್ಯಗಳು ಅಥವಾ ಫುಟ್‌ಬಾಲ್ ಡರ್ಬಿಗಳ ವೇಳೆ ಕೋಟ್ಯಂತರ ಜನರನ್ನು ಪೊಲೀಸರು ಮತ್ತು ಸ್ವಯಂಸೇವಕರು ಯಶಸ್ವಿಯಾಗಿ ನಿಯಂತ್ರಿಸುತ್ತ ಬಂದಿದ್ದಾರೆ. ವರ್ಷಗಳ ಕಾಲ ದೊಡ್ಡ ಅನಾಹುತಗಳಿಲ್ಲದೆ ಜನದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇ ಆಡಳಿತದಲ್ಲಿ ಒಂದು ರೀತಿಯ ಅತಿಯಾದ ಆತ್ಮವಿಶ್ವಾಸವನ್ನು ಮೂಡಿಸಿತ್ತು. ಆದರೆ, ಆ ಅತಿಯಾದ ವಿಶ್ವಾಸವೇ ಒಂದು ದಿನ ದೊಡ್ಡ ದುರಂತಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.

ಪುನರಾವರ್ತನೆಯಾದ 2015ರ ಕರಾಳ ನೆನಪು

2015 ರ ಅಕ್ಟೋಬರ್ 18 ರಂದು 10 ದಿನಗಳ ಹಬ್ಬದ ಐದನೇ ದಿನದಂದು ಇಂತಹದ್ದೇ ಒಂದು ಘಟನೆ ನಡೆದಿತ್ತು. ಸಾಂಪ್ರದಾಯಿಕ ಪೂಜೆ ಎರಡು ದಿನಗಳ ನಂತರ ಆರಂಭವಾದರೂ, ಜನಪ್ರಿಯ ಪೆಂಡಾಲ್‌ಗಳು ಅದಕ್ಕೂ ಮುನ್ನವೇ ಪ್ರೇಕ್ಷಕರಿಗೆ ತಮ್ಮ ಬಾಗಿಲು ತೆರೆಯುತ್ತವೆ. 2015ರಲ್ಲಿ ದಕ್ಷಿಣ ಕೊಲ್ಕತ್ತಾದ ದೇಶಪ್ರಿಯ ಪಾರ್ಕ್‌ನಲ್ಲಿ 88 ಅಡಿ ಎತ್ತರದ ಬೃಹತ್ ದುರ್ಗಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಆ ವರ್ಷದ ವಿಶ್ವದ ಅತ್ಯಂತ ಎತ್ತರದ ಮೂರ್ತಿ ಎಂದು ಪ್ರಚಾರ ಪಡೆದಿದ್ದ ಈ ಪೆಂಡಾಲ್‌ಗೆ ಜನಸ್ತೋಮ ಹರಿದುಬಂದಿತ್ತು. ಭಾನುವಾರದ ವಾರಾಂತ್ಯದ ರಜೆ ಮತ್ತಷ್ಟು ಜನರನ್ನು ಆಕರ್ಷಿಸಿತು ಮತ್ತು ಭಾರಿ ನುಗ್ಗಾಟದಿಂದಾಗಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ವಿಪರೀತ ಜನದಟ್ಟಣೆ, ಗೊಂದಲ ಮತ್ತು ಉಸಿರುಗಟ್ಟುವ ವಾತಾವರಣದಿಂದಾಗಿ ಕನಿಷ್ಠ 11 ಭಕ್ತರು ಗಾಯಗೊಂಡಿದ್ದರು. ನಿಖರವಾಗಿ 11 ವರ್ಷಗಳ ನಂತರ, ಇದೇ ರೀತಿಯ ದುರಂತವೊಂದು ಈಗ ನಗರದ ಉತ್ತರ ಭಾಗದಲ್ಲಿ ಮರುಕಳಿಸಿದೆ.

ಉತ್ತರ ಕೊಲ್ಕತ್ತಾದಲ್ಲಿರುವ ಸವಾಲುಗಳೇನು..?

ದಕ್ಷಿಣ ಕೊಲ್ಕತ್ತಾಕ್ಕೆ ಹೋಲಿಸಿದರೆ ಉತ್ತರ ಕೊಲ್ಕತ್ತಾದ ಭೌಗೋಳಿಕ ರಚನೆ ಸಂಪೂರ್ಣ ಭಿನ್ನವಾಗಿದೆ. ಇಲ್ಲಿನ ನೆರೆಹೊರೆಗಳು ನೂರಾರು ವರ್ಷಗಳ ಹಿಂದೆ ನಿರ್ಮಿಸಲಾದ ಮನೆಗಳು ಮತ್ತು ಅತ್ಯಂತ ಇಕ್ಕಟ್ಟಾದ ಸಂದಿಗಳನ್ನು ಹೊಂದಿವೆ. ನಾಲ್ಕರಿಂದ ಐದು ಅಡಿ ಅಗಲವಿರುವ ಈ ಕಿರಿದಾದ ದಾರಿಗಳಲ್ಲಿ ಬೈಕ್ ಅಥವಾ ಒಬ್ಬ ಪಾದಚಾರಿ ಕಷ್ಟಪಟ್ಟು ದಾಟಬೇಕಾಗುತ್ತದೆ. ಇಂತಹ ಜಾಗಗಳಲ್ಲಿ ತೂಗುಯ್ಯಾಲೆಯಂತೆ ನೇತಾಡುವ ವಿದ್ಯುತ್ ತಂತಿಗಳು ಯಾವಾಗಲೂ ದೊಡ್ಡ ಮಟ್ಟದ ಬೆಂಕಿ ಅವಘಡದ ಅಪಾಯವನ್ನು ತಂದೊಡ್ಡುತ್ತಿರುತ್ತವೆ. ಆದರೆ ಪೂಜೆಯ ಸಮಯದಲ್ಲಿ ಈ ಅನಾನುಕೂಲಗಳೆಲ್ಲವನ್ನೂ ಮರೆತುಹೋಗಲಾಗುತ್ತದೆ. ಈ ಸಂದಿಗಳಲ್ಲೇ ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರಗಳು, ಬೃಹತ್ ಕಮಾನುಗಳನ್ನು ನಿರ್ಮಿಸಲಾಗುತ್ತದೆ.

ವರ್ಷದಿಂದ ವರ್ಷಕ್ಕೆ ಇಲ್ಲಿ ಲಕ್ಷಾಂತರ ಜನರು ಸಾಲುಗಟ್ಟಿ ಬಂದು ದೇವಿಯ ದರ್ಶನ ಪಡೆಯುತ್ತಾರೆ. 2015ರ ಘಟನೆಯನ್ನು ಹೊರತುಪಡಿಸಿದರೆ ಇಲ್ಲಿಯವರೆಗೆ ಇಂತಹ ದೊಡ್ಡ ದುರಂತಗಳು ಸಂಭವಿಸದ ಕಾರಣ, ಸ್ಥಳೀಯ ಆಡಳಿತ ಮತ್ತು ಆಯೋಜಕರು ತಮ್ಮ ಜನಸಂದಣಿ ನಿರ್ವಹಣಾ ಕೌಶಲ್ಯವೇ ಸಾಕು ಎಂದು ಭಾವಿಸಿದ್ದರೇನೋ.

ಭದ್ರತಾ ಲೋಪ!

ಕೋಲ್ಕತ್ತಾದಲ್ಲಿ ಪೂಜೆ ವೇಳೆ ಜನಸಂದಣಿ ನಿಯಂತ್ರಿಸುವುದು ಬಹಳ ಕಷ್ಟದ ಕೆಲಸ. ಇದು ಹಲವಾರು ಹಂತಗಳನ್ನು ಒಳಗೊಂಡಿರುತ್ತದೆ. ಸ್ಥಳೀಯ ಮಟ್ಟದಲ್ಲಿ ಸಮುದಾಯದ ಬ್ಯಾಡ್ಜ್‌ಗಳನ್ನು ಧರಿಸಿದ ಯುವ ಸ್ವಯಂಸೇವಕರು ಜನರನ್ನು ಕಳುಹಿಸಲು ಸಹಾಯ ಮಾಡುತ್ತಾರೆ. ಪೂಜೆಯ ವ್ಯಾಪ್ತಿ ದೊಡ್ಡದಾದಂತೆ, ಪೊಲೀಸರು ನಾಗರಿಕ ಸ್ವಯಂಸೇವಕರನ್ನು ನಿಯೋಜಿಸುತ್ತಾರೆ. ಕೆಲವು ಕಡೆಗಳಲ್ಲಿ ಖಾಸಗಿ ಭದ್ರತೆಯನ್ನು ಬಳಸಿಕೊಳ್ಳಲಾಗುತ್ತದೆ. ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಪೊಲೀಸ್ ಪೋಸ್ಟ್‌ಗಳನ್ನು ನಿರ್ಮಿಸಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಟ್ರಾಫಿಕ್ ಪೊಲೀಸರು ಬ್ಯಾರಿಕೇಡ್‌ಗಳ ಮೂಲಕ ಜನರಿಗೆ ದಾರಿ ಮಾಡಿಕೊಡುತ್ತಾರೆ. ಇದಲ್ಲದೆ, ಗುಂಪಿನ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಸಿಸಿಟಿವಿಗಳು ಮತ್ತು ಡ್ರೋನ್‌ಗಳನ್ನು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.

ದುರಂತ ಸಂಭವಿಸಿದ ಚೋರ್‌ಬಗಾನ್‌ನಂತಹ ಜನಪ್ರಿಯ ಪೆಂಡಾಲ್‌ನಲ್ಲಿಯೂ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಇಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕಿತ್ತು. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ ಅಲ್ಲಿ ಅಂತಹ ಯಾವುದೇ ಸೂಕ್ತ ವ್ಯವಸ್ಥೆ ಇರಲಿಲ್ಲ, ಪೊಲೀಸ್ ನಿಯೋಜನೆ ಸಾಕಷ್ಟಿರಲಿಲ್ಲ ಮತ್ತು ಸ್ವಯಂಸೇವಕರು ಅಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದು ಅನೇಕರು ಆರೋಪಿಸಿದ್ದಾರೆ. ಘಟನೆಗೆ ಎರಡು ದಿನಗಳ ಮುಂಚೆಯೇ ಹಗ್ಗದ ಬ್ಯಾರಿಕೇಡ್‌ಗಳನ್ನು ದಾಟಿ ಮುನ್ನುಗ್ಗುತ್ತಿದ್ದ ಭಾರಿ ಜನಸಂದಣಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಅಲ್ಲಿ ಯಾವ ಸೌಲಭ್ಯವು ಇರಲಿಲ್ಲ!

ಚೋರ್‌ಬಗಾನ್ ದುರಂತದ ನಂತರ ಮಾತನಾಡಿದ ಪ್ರತ್ಯಕ್ಷದರ್ಶಿಗಳು ವ್ಯವಸ್ಥೆಯ ಹಲವು ಲೋಪದೋಷಗಳನ್ನು ಬೊಟ್ಟು ಮಾಡಿತೋರಿಸಿದ್ದಾರೆ. ತಮ್ಮ ಮಗಳು ಮತ್ತು ಮೊಮ್ಮಗಳೊಂದಿಗೆ ಪೆಂಡಾಲ್‌ಗೆ ಬಂದಿದ್ದ ವ್ಯಕ್ತಿಯೊಬ್ಬರು ಮಾತನಾಡಿ, ಪೆಂಡಾಲ್‌ನ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಅತ್ಯಂತ ಕಿರಿದಾಗಿದ್ದವು ಮತ್ತು ಅಲ್ಲಿ ಸರಿಯಾದ ದೀಪದ ವ್ಯವಸ್ಥೆಯೂ ಇರಲಿಲ್ಲ ಎಂದು ದೂರಿದ್ದಾರೆ. ಸಮುದ್ರದೋಪಾದಿಯಲ್ಲಿ ಹರಿದುಬಂದ ಜನರ ಗುಂಪಿನ ನಡುವೆ ಒಳಗೆ ತಲುಪಲು ಅವರಿಗೆ ಒಂದೂವರೆ ಗಂಟೆ ಹಿಡಿಯಿತು. ಅಲ್ಲಿ ಯಾವುದೇ ಬೆಳಕಿರಲಿಲ್ಲ, ಪೊಲೀಸರಿರಲಿಲ್ಲ, ಸ್ವಯಂಸೇವಕರಿರಲಿಲ್ಲ ಸೇರಿದಂತೆ ಏನೂ ಸೌಲಭ್ಯ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ ಸುರಿದಾಗ ಜನರೆಲ್ಲರೂ ಒಮ್ಮೆಲೆ ಆಶ್ರಯ ಪಡೆಯಲು ಮುಗಿಬಿದ್ದಾಗ ಈ ಅವಘಡ ಸಂಭವಿಸಿದೆ. ಒಳಗೆ ನಿಂತಿದ್ದವರು ಮಳೆ ನಿಲ್ಲಲು ಕಾಯುತ್ತಿದ್ದರು, ಹೊರಗಿನಿಂದ ಜನಸಂದಣಿ ಒಳಗೆ ನುಗ್ಗಿದ್ದರಿಂದ ಪೆಂಡಾಲ್‌ನ ಸಾಮರ್ಥ್ಯಕ್ಕಿಂತ ಅಧಿಕ ಜನರು ಸೇರಿದರು. ಇದು ಉಸಿರುಗಟ್ಟುವ ವಾತಾವರಣ ಮತ್ತು ಕಾಲ್ತುಳಿತಕ್ಕೆ ಕಾರಣವಾಯಿತು.

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮಾತನಾಡಿ, ಪೆಂಡಾಲ್ ಕುಸಿದಿದೆ ಎಂದು ಮೈಕ್‌ನಲ್ಲಿ ತಪ್ಪಾದ ಪ್ರಕಟಣೆ ನೀಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಆ ಪ್ರಕಟಣೆಯ ಹಿಂದಿನ ಸತ್ಯಾಸತ್ಯತೆ ಏನು ಮತ್ತು ಈ ಕಾಲ್ತುಳಿತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಉನ್ನತ ಮಟ್ಟದ ತನಿಖಾ ತಂಡದಿಂದ ವಿಚಾರಣೆ ನಡೆಯಲಿದೆ ಹಾಗೂ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.

ಉತ್ತರ ಕೊಲ್ಕತ್ತಾದ ಇಕ್ಕಟ್ಟಾದ ಸಂದಿಗಳು, ಅಸಮರ್ಪಕ ವ್ಯವಸ್ಥೆಗಳು ಮತ್ತು ನಿಯಮಗಳ ಉಲ್ಲಂಘನೆಗಳು ಹೊಸದೇನಲ್ಲ. ಅಲ್ಲಿನ ಜನರಿಗೆ ಈ ಕಷ್ಟಗಳು ಎಷ್ಟು ರೂಢಿಯಾಗಿಬಿಟ್ಟಿವೆ ಎಂದರೆ ಅವರು ದೂರು ನೀಡುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಯುನೆಸ್ಕೋ ಮಾನ್ಯತೆ ಪಡೆದ ಈ ಸಾಂಸ್ಕೃತಿಕ ಹಬ್ಬದ ಹಿನ್ನೆಲೆಯಲ್ಲಿ, ಸಾರ್ವಜನಿಕರು ಸಣ್ಣಪುಟ್ಟ ಅನಾನುಕೂಲಗಳನ್ನು ಸಹಿಸಿಕೊಂಡು ಬದುಕುತ್ತಿದ್ದಾರೆ. ಆದರೆ, ಒಂದು ದಿನ ಸ್ಥಳೀಯ ಜನಸಂದಣಿ ನಿರ್ವಹಣೆಯ ಈ ಅತಿವಿಶ್ವಾಸವೇ ದೊಡ್ಡ ದುರಂತಕ್ಕೆ ಮುನ್ನುಡಿ ಬರೆಯಿತು. 17 ಅಮಾಯಕ ಜೀವಗಳು ಬಲಿಯಾದವು. 2015ರ ಘಟನೆಯಿಂದ ಆಡಳಿತ ವ್ಯವಸ್ಥೆ ಪಾಠ ಕಲಿಯದಿದ್ದರೂ, ಈಗಿನ ಚೋರ್‌ಬಗಾನ್ ದುರಂತವಾದರೂ ಎಚ್ಚೆತ್ತುಕೊಂಡು, ಭವಿಷ್ಯದಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ಕಠಿಣ ಹಾಗೂ ವ್ಯವಸ್ಥಿತ ಜನಸಂದಣಿ ನಿರ್ವಹಣಾ ನಿಯಮಗಳನ್ನು ಜಾರಿಗೆ ತರುವಂತಾಗಬೇಕು ಎನ್ನವುದು ಎಲ್ಲರ ಆಶಯ(ಏಜೆನ್ಸೀಸ್​).