Koel Mallick Resigns: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಭಾರಿ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಒಂದರ ಮೇಲೊಂದು ಆಘಾತ ಎದುರಾಗುತ್ತಿದೆ. ಪಕ್ಷದಲ್ಲಿ ವಲಸೆ ಪರ್ವ ಮುಂದುವರಿದಿರುವ ನಡುವೆಯೇ, ಖ್ಯಾತ ನಟಿ ಹಾಗೂ ಟಿಎಂಸಿ ಸಂಸದೆ ಕೋಯಲ್ ಮಲ್ಲಿಕ್ ಗುರುವಾರ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ಹಠಾತ್ ರಾಜೀನಾಮೆ ನೀಡಿದ್ದಾರೆ.
ದಿ ಸ್ಟೇಟ್ಸ್‌ಮನ್ ವರದಿಯ ಪ್ರಕಾರ, ಬಂಗಾಳ ಚುನಾವಣೆಯ ಸೋಲಿನ ನಂತರ ಟಿಎಂಸಿ ಪಕ್ಷದಲ್ಲಿ ತೀವ್ರ ಆಂತರಿಕ ಕಲಹ ಮತ್ತು ನಾಯಕರ ವಲಸೆ ಪರ್ವ ಆರಂಭವಾಗಿದ್ದು, ಇದರ ಭಾಗವಾಗಿಯೇ ಕೋಯಲ್ ಮಲ್ಲಿಕ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಪಕ್ಷದಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಕೇವಲ 66 ದಿನಗಳಲ್ಲೇ ರಾಜೀನಾಮೆ!
ಖ್ಯಾತ ನಟಿಯಾಗಿರುವ ಕೋಯಲ್ ಮಲ್ಲಿಕ್ ಅವರು ರಾಜಕೀಯಕ್ಕೆ ಗುಡ್‌ಬೈ ಹೇಳಲಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದವು. ಏಪ್ರಿಲ್ 6 ರಂದು ದೆಹಲಿಯಲ್ಲಿ ರಾಜ್ಯಸಭಾ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅವರು, ಕೇವಲ 66 ದಿನಗಳಲ್ಲೇ ತಮ್ಮ ಸ್ಥಾನವನ್ನು ತೊರೆದಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ದಿನ ಕುಟುಂಬದೊಂದಿಗೆ ಫೋಟೋ ಹಂಚಿಕೊಂಡಿದ್ದ ಕೋಯಲ್, ಬಂಗಾಳದ ಜನರ ಸೇವೆ ಮಾಡಲು ನನಗೆ ಉತ್ತಮ ಅವಕಾಶ ಸಿಕ್ಕಿದೆ ಎಂದು ಬರೆದುಕೊಂಡಿದ್ದರು.
13 ರಿಂದ 9 ಕ್ಕೆ ಕುಸಿದ ಬಲ!
ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ರಾಜೀನಾಮೆ ನೀಡಿದ ಪ್ರಮುಖ ನಾಯಕರ ಪಟ್ಟಿಗೆ ಈಗ ಕೋಯಲ್ ಮಲ್ಲಿಕ್ ಸೇರ್ಪಡೆಯಾಗಿದ್ದಾರೆ. ಈ ವಾರದಲ್ಲಿ ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಇಂದು ಪ್ರಕಾಶ್ ಚಿಕ್ ಬಾರೈಕ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆಗಳಿಂದಾಗಿ ರಾಜ್ಯಸಭೆಯಲ್ಲಿ 13 ಸ್ಥಾನಗಳನ್ನು ಹೊಂದಿದ್ದ ಟಿಎಂಸಿ ಬಲ ಈಗ ಕೇವಲ 9 ಕ್ಕೆ ಕುಸಿದಿದೆ. ಈ ವಾರದಲ್ಲೇ ಪಕ್ಷದ ಇನ್ನೂ ಕೆಲವು ಪ್ರಮುಖ ನಾಯಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಟಿಎಂಸಿಯಲ್ಲಿ ಮುಂದುವರಿದ ಬಂಡಾಯ
2021 ರಲ್ಲಿ ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದ ಪ್ರಮುಖ ನಾಯಕಿ ಸುಸ್ಮಿತಾ ದೇವ್ ಪಕ್ಷ ತೊರೆದ ಕೇವಲ ಒಂದು ದಿನದೊಳಗೆ ಬರೈಕ್ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ, ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ಕೂಡ ರಾಜೀನಾಮೆ ನೀಡಿದ್ದರು. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ದೊಡ್ಡ ಬಂಡಾಯ ಎದ್ದಿರುವ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆಯುತ್ತಿವೆ. ಪಕ್ಷದ ಅಧಿಕೃತ ಅಭ್ಯರ್ಥಿ ಶೋವಂದೇಬ್ ಚಟ್ಟೋಪಾಧ್ಯಾಯರನ್ನು ತಿರಸ್ಕರಿಸಿ, ಸುಮಾರು 58 ಟಿಎಂಸಿ ಶಾಸಕರು ನಾಯಕತ್ವದ ವಿರುದ್ಧ ಬಂಡಾಯ ಎದ್ದು ರಿತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬೆಂಬಲಿಸಿದ್ದಾರೆ(ಏಜೆನ್ಸೀಸ್).