ಮೈಮೇಲೆ ದೇವರು ಬಂದಂತೆ ವರ್ತಿಸಿದ ವಿದೇಶಿ ಮಹಿಳೆ: ವೈರಲ್ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು! Foreign Woman
- ಮೈಮೇಲೆ ದೇವರು ಬಂದಂತೆ ವರ್ತಿಸಿದ ವಿದೇಶಿ ಮಹಿಳೆ
- ಕೇರಳದ ಕೊಡುಂಗಲ್ಲೂರ್ ಭರಣಿ ಉತ್ಸವದಲ್ಲಿ ನಡೆದ ಘಟನೆ
- ವಿಡಿಯೋದಲ್ಲಿರುವ ಮಹಿಳೆ ಸ್ಪೇನ್ ದೇಶದ ವ್ಲಾಗರ್ ಎಂದು ತಿಳಿದುಬಂದಿದೆ
Foreign Woman : ಕೇರಳದ ಕೊಡುಂಗಲ್ಲೂರ್ ಭರಣಿ ಉತ್ಸವದ ಸಮಯದಲ್ಲಿ ವಿದೇಶಿ ಮಹಿಳೆಯೊಬ್ಬರು ಮೈಮೇಲೆ ದೇವರು ಬಂದಂತೆ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ನೋಡಿದವರು ಹುಬ್ಬೇರಿಸಿದ್ದು, ಆ ಮಹಿಳೆ ಯಾರು ಎಂಬ ಹುಡುಕಾಟದಲ್ಲಿ ತೊಡಗಿದ್ದಾರೆ.
ಅಂದಹಾಗೆ, ವಿಡಿಯೋದಲ್ಲಿರುವ ಮಹಿಳೆ ಸ್ಪೇನ್ ದೇಶದ ವ್ಲಾಗರ್ ಎಂದು ತಿಳಿದುಬಂದಿದೆ. ಆಕೆಯ ಹೆಸರು ನಿತ್ಯಶ್ರೀ ಪೌಲಾ ಸೇಗರಾ. ಆಕೆ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ ಮತ್ತು ಆಗಾಗ್ಗೆ ಹಿಂದೂ ಆಚರಣೆಗಳು ಮತ್ತು ದೇವಾಲಯಗಳ ವಿಡಿಯೋಗಳನ್ನು ಚಿತ್ರೀಕರಿಸುತ್ತಾರೆ ಮತ್ತು ಆ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
ಕೇರಳದ ತ್ರಿಸ್ಸೂರು ಜಿಲ್ಲೆಯ ಕೊಡುಂಗಲ್ಲೂರ್ನಲ್ಲಿ ಪ್ರತಿ ವರ್ಷ ಕೊಡುಂಗಲ್ಲೂರ್ ಅಮ್ಮ ಉತ್ಸವ ನಡೆಯುತ್ತದೆ. ಇದಕ್ಕಾಗಿ ಸ್ಪೇನ್ ಮಹಿಳೆ, ಕೆಂಪು ಸೀರೆ ಧರಿಸಿ ಕೊಡಂಗಲ್ಲೂರ್‌ಗೆ ಆಗಮಿಸಿದರು. ತನ್ನ ಮೊಬೈಲ್ ಕ್ಯಾಮೆರಾ ಮೂಲಕ ದೇವರ ಉತ್ಸವವನ್ನು ರೆಕಾರ್ಡ್ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಮೈ ಮೇಲೆ ದೈವ ಆವಾಹನೆ ಆದಂತೆ ಕುಣಿದು ಕುಪ್ಪಳಿಸಿದಳು. ಎಷ್ಟೇ ಮಂದಿ ಆಕೆಯನ್ನು ಹಿಡಿದುಕೊಂಡರು ಕೂಡ ಸುಮ್ಮನಾಗಲಿಲ್ಲ. ಅಂತಿಮವಾಗಿ ಆಕೆಗೆ ನೀರು ಕುಡಿಸಿ ಸಮಾಧಾನ ಮಾಡಲಾಯಿತು.
ಸ್ಪೇನ್ ಮಹಿಳೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ನೋಡಿದವರು ಬಗೆಬಗೆಯ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ. ಕೆಲವರು ಇದೆಲ್ಲ ನಾಟಕ ಎಂದು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ದೈವದ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜರಿದಿದ್ದಾರೆ. ಇನ್ನು ಕೆಲವರು ಆ ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ. ನಮ್ಮ ದೇಶದ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಆಕೆಯನ್ನು ನೋಡಿ ನಾವು ಕಲಿಯುವು ಬೇಕಷ್ಟಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ, ವಿದೇಶಿ ಮಹಿಳೆಯ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್).