ಕುಲದೀಪ್ ಬೌಲಿಂಗ್ ದಾಳಿಗೆ ನಲುಗಿದ ಕೆಕೆಆರ್! ಡೆಲ್ಲಿ ವಿರುದ್ಧ 40 ರನ್ಗಳಿಂದ ಸೋತ ರಹಾನೆ ಪಡೆ!!
ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (KKRvsDC) ತಂಡದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಮಾಂತ್ರಿಕ ಬೌಲಿಂಗ್ ಮೂಲಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಅಕ್ಷರಶಃ ಬೇಟೆಯಾಡಿದ್ದಾರೆ. ತವರಿನ ಪ್ರೇಕ್ಷಕರ ಸಮ್ಮುಖದಲ್ಲೇ ಕೆಕೆಆರ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಕುಲದೀಪ್, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 40 ರನ್ಗಳಿಂದ ಭರ್ಜರಿ ಜಯ ತಂದುಕೊಟ್ಟಿದ್ದಾರೆ.‘
ಭಾನುವಾರ ಮಧ್ಯಾಹ್ನ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವು ಸಾಧಿಸುತ್ತಿದ್ದಂತೆಯೇ ಕೆಕೆಆರ್ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿತ್ತು. ಆದಾಗ್ಯೂ, ಪ್ರತಿಷ್ಠೆಯ ಈ ಪಂದ್ಯದಲ್ಲಿ ಡೆಲ್ಲಿ ನೀಡಿದ್ದ 204 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ, ಕುಲದೀಪ್ ಯಾದವ್ ಅವರ ಸ್ಪಿನ್ ಸುಳಿಗೆ ಸಿಲುಕಿ ಸಂಪೂರ್ಣವಾಗಿ ಶರಣಾಯಿತು.
ಕುಲದೀಪ್ ಯಾದವ್ ಸ್ಪಿನ್ ಮ್ಯಾಜಿಕ್; ಹ್ಯಾಟ್ರಿಕ್ ಮಿಸ್!
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ 31 ಎಸೆತಗಳಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಆಸರೆಯಾಗಲು ಯತ್ನಿಸಿದರು. ಆದರೆ, ಮಧ್ಯಮ ಓವರ್‌ಗಳಲ್ಲಿ ದಾಳಿಗಿಳಿದ ಕುಲದೀಪ್ ಯಾದವ್ ತಮ್ಮ ಹಳೆಯ ಫ್ರಾಂಚೈಸಿ ವಿರುದ್ಧವೇ ರೌದ್ರಾವತಾರ ತಳೆದರು. ಒಂದೇ ಓವರ್‌ನ ಸತತ ಎರಡು ಎಸೆತಗಳಲ್ಲಿ 2 ಪ್ರಮುಖ ವಿಕೆಟ್ ಉರುಳಿಸಿ ಕೋಲ್ಕತ್ತಾ ರನ್ ಚೇಸಿಂಗ್ ಅನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದರು. ಹ್ಯಾಟ್ರಿಕ್ ಎಸೆತದಲ್ಲಿ ಅಭಿಷೇಕ್ ಪೊರೆಲ್ ಕ್ಯಾಚ್ ಕೈಬಿಟ್ಟಿದ್ದರಿಂದ ಕುಲದೀಪ್ ಹ್ಯಾಟ್ರಿಕ್ ಸಾಧನೆಯಿಂದ ವಂಚಿತರಾದರು. ಆದರೂ, 3 ಪ್ರಮುಖ ವಿಕೆಟ್ ಕಸಿದು ಕೆಕೆಆರ್ ತಂಡ 18.4 ಓವರ್‌ಗಳಲ್ಲಿ 163 ರನ್‌ಗಳಿಗೆ ಸರ್ವಪತನ ಕಂಡಿತ್ತು.
ಮೊದಲು ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಕೆಎಲ್ ರಾಹುಲ್, ಅಕ್ಷರ್
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಕನ್ನಡಿಗ ಕೆಎಲ್ ರಾಹುಲ್ ಅವರ ಸ್ಫೋಟಕ 30 ಎಸೆತಗಳ 60 ರನ್ ನೆರವಿನಿಂದ ಬೃಹತ್ ಮೊತ್ತದ ಮುನ್ಸೂಚನೆ ನೀಡಿತ್ತು. ನಂತರದ ದಿನಗಳಲ್ಲಿ ಕೆಕೆಆರ್ ಬೌಲರ್‌ಗಳು ಕಂಬ್ಯಾಕ್ ಮಾಡಲು ಯತ್ನಿಸಿದರೂ, ನಾಯಕ ಅಕ್ಷರ್ ಪಟೇಲ್ (39), ಡೇವಿಡ್ ಮಿಲ್ಲರ್ (28) ಮತ್ತು ಆಶುತೋಷ್ ಶರ್ಮಾ (18*) ಬಿರುಸಿನ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್‌ಗಳಿಗೆ ತಲುಪಿಸಿದರು. ಕೆಕೆಆರ್ ಪರ ವೇಗಿ ಸೌರಭ್ ದುಬೆ 28 ರನ್ ನೀಡಿ 2 ವಿಕೆಟ್ ಪಡೆದು ಗಮನ ಸೆಳೆದರು.
ಪ್ಲೇಆಫ್ ರೇಸ್‌ನಿಂದ ಮೊದಲೇ ಹೊರಬಿದ್ದಿದ್ದರೂ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಭರ್ಜರಿ ಜಯದೊಂದಿಗೆ ಐಪಿಎಲ್ 2026ರ ತನ್ನ ಅಭಿಯಾನವನ್ನು ಅತ್ಯಂತ ಹೆಮ್ಮೆಯಿಂದ ಮುಗಿಸಿದೆ. ಆದರೆ, ತವರಿನ ಮೈದಾನದಲ್ಲೇ ಶರಣಾದ ಕೆಕೆಆರ್ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿದೆ,(ಏಜೆನ್ಸೀಸ್).