ಕಿಶೋರ್ ಕುಮಾರ್ ಜೊತೆಗಿನ ಹಳೆಯ ನೆನಪು ಹಂಚಿಕೊಂಡ ಅಮಿತಾಭ್ ಬಚ್ಚನ್  
ದೇಶ

ಅಮಿತಾಭ್‌ರನ್ನೇ ಮಗ ಅಮಿತ್ ಕುಮಾರ್ ಅಂದುಕೊಂಡಿದ್ರಂತೆ ಕಿಶೋರ್! ಬಿಗ್‌ ಬಿ ಬಿಚ್ಚಿಟ್ಟ ನೆನಪಿನ ಬುತ್ತಿ | Amitabh Bachchan's old memories

ಪ್ರಮುಖ ಮುಖ್ಯಾಂಶಗಳು

  • ಕಿಶೋರ್ ಕುಮಾರ್ ಜೊತೆಗಿನ ಅಪರೂಪದ ನೆನಪು ಹಂಚಿಕೊಂಡ ‘ಬಿಗ್‌ ಬಿ’
  • ಒಮ್ಮೆ ಅಮಿತಾಭ್ ಬಚ್ಚನ್‌ರನ್ನು ತಮ್ಮ ಪುತ್ರ ಎಂದುಕೊಂಡಿದ್ದರಂತೆ ಕಿಶೋರ್
  • ‘ಕೌನ್ ಬನೇಗಾ ಕರೋಡ್‌ಪತಿ 18’ದಲ್ಲಿ ಅಮಿತಾಭ್ ಬಚ್ಚನ್ ನೆನಪಿನ ದೋಣಿ
ಮುಂಬೈ: ಬಾಲಿವುಡ್‌ನ ದಿಗ್ಗಜ ನಟ ಅಮಿತಾಭ್ ಬಚ್ಚನ್‌ ತಮ್ಮ ಸಿನಿ ಪಯಣದ ಹಲವು ಸ್ವಾರಸ್ಯಕರ ಸನ್ನಿವೇಶಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ‘ಕೌನ್ ಬನೇಗಾ ಕರೋಡ್‌ಪತಿ 18’ ಕಾರ್ಯಕ್ರಮದಲ್ಲಿ ಗಾಯಕ ಕಿಶೋರ್ ಕುಮಾರ್ ಜತೆಗಿನ ತಮ್ಮ ಹಳೆಯ ನೆನಪೊಂದನ್ನು ಬಿಗ್‌ ಬಿ ಮೆಲುಕು ಹಾಕಿದ್ದಾರೆ.
ಕಿಶೋರ್ ಕುಮಾರ್‌ರನ್ನು ನೆನಪಿಸಿಕೊಂಡ ಅಮಿತಾಭ್ ಬಚ್ಚನ್, ಅವರು ತುಂಬಾ ದಿಲ್‌ದಾರ್ ವ್ಯಕ್ತಿಯಾಗಿದ್ರು ಎಂದು ಹೇಳಿದ್ದಾರೆ. ತಮ್ಮನ್ನು ಭೇಟಿಯಾದಾಗಲೆಲ್ಲಾ ಪ್ರೀತಿಯಿಂದ ಮಾತಾಡುತ್ತಿದ್ದರು. ರೆಕಾರ್ಡಿಂಗ್ ಸ್ಟುಡಿಯೋದಲ್ಲೂ ಅವರ ಜೊತೆ ಕುಳಿತುಕೊಳ್ಳುವ ಅವಕಾಶ ಸಿಕ್ಕಿತ್ತು ಎಂದು ಬಿಗ್‌ ಬಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಬಿಗ್‌ ಬಿಯನ್ನೇ ಅಮಿತ್ ಕುಮಾರ್ ಅಂದುಕೊಂಡಿದ್ದ ಕಿಶೋರ್

ಅಮಿತಾಭ್ ಬಚ್ಚನ್ ಹಂಚಿಕೊಂಡ ಒಂದು ಸಂಗತಿ ಇದೀಗ ಎಲ್ಲರ ಗಮನ ಸೆಳೆದಿದೆ. ಒಮ್ಮೆ ಕಿಶೋರ್ ಕುಮಾರ್ ತಮ್ಮನ್ನು ಮನೆಗೆ ಕರೆದಿದ್ದರಂತೆ. ಆ ಕಾಲದಲ್ಲಿ ಸಿನಿಮಾ ವೀಡಿಯೊ ಕ್ಯಾಸೆಟ್‌ಗಳನ್ನು ಸಂಗ್ರಹಿಸುವುದು ಕಿಶೋರ್ ಕುಮಾರ್ ಅವರ ದೊಡ್ಡ ಹವ್ಯಾಸವಾಗಿತ್ತಂತೆ. ತಮ್ಮ ಮನೆಯಲ್ಲಿದ್ದ ವಿಶ್ವದ ವಿವಿಧ ಭಾಗಗಳ ವೀಡಿಯೊ ಕ್ಯಾಸೆಟ್‌ಗಳ ದೊಡ್ಡ ಸಂಗ್ರಹವನ್ನೇ ಕಿಶೋರ್, ಅಮಿತಾಭ್​ಗೆ ತೋರಿಸಿದ್ದರಂತೆ.

ನಾನು ಅಮಿತ್ ಹೇಳಿದ್ದ ಬಿಗ್‌ ಬಿ

ಒಮ್ಮೆ ಫೋನ್‌ನಲ್ಲಿ ಮಾತನಾಡುವಾಗ ಅಮಿತಾಭ್ ಬಚ್ಚನ್, ‘ನಾನು ಅಮಿತ್ ಮಾತನಾಡುತ್ತಿದ್ದೇನೆ’ ಎಂದು ಪರಿಚಯಿಸಿಕೊಂಡಿದ್ದರು. ಇದನ್ನ ಕೇಳಿದ ಕಿಶೋರ್ ಕುಮಾರ್, ಎದುರಿನಲ್ಲಿ ಮಾತನಾಡುತ್ತಿರುವುದು ಅಮಿತಾಭ್ ಅಲ್ಲ, ತಮ್ಮ ಪುತ್ರ ಹಾಗೂ ಗಾಯಕ ಅಮಿತ್ ಕುಮಾರ್ ಎಂದು ಭಾವಿಸಿದ್ದರಂತೆ. ಈ ಹಳೆಯ ನೆನಪನ್ನು ಅಮಿತಾಭ್ ಬಚ್ಚನ್ ಕಾರ್ಯಕ್ರಮದಲ್ಲಿ ನಗುನಗುತ್ತಲೇ ಹಂಚಿಕೊಂಡಿದ್ದಾರೆ.

ಇಡೀ ಖಂಡ್ವಾ ‘ಕಿಶೋರ್‌ಮಯ’

ಕಾರ್ಯಕ್ರಮದ ಸ್ಪರ್ಧಿ ವೀರೇಂದ್ರ ಜೈಸ್ವಾಲ್ ಅವರು ಕಿಶೋರ್ ಕುಮಾರ್ ತವರು ಖಂಡ್ವಾ ನಗರದ ಜೊತೆಗಿನ ಅವರ ನಂಟಿನ ಬಗ್ಗೆಯೂ ಮಾತನಾಡಿದ್ದಾರೆ. ಆಗಸ್ಟ್ 4ರಂದು ಕಿಶೋರ್ ಕುಮಾರ್ ಹುಟ್ಟುಹಬ್ಬವನ್ನು ಖಂಡ್ವಾದಲ್ಲಿ ವಿಶೇಷವಾಗಿ ಆಚರಿಸಲಾಗುತ್ತೆ. ನಗರದ ಹಲವು ಕಡೆಗಳಲ್ಲಿ ಜನರು ಸೇರಿ ಅವರ ಹಾಡುಗಳನ್ನು ಹಾಡುತ್ತಾರೆ. ಆ ದಿನ ಇಡೀ ಖಂಡ್ವಾ ‘ಕಿಶೋರ್‌ಮಯ’ ಆಗಿರುತ್ತದೆ ಎಂದು ವೀರೇಂದ್ರ ಹೇಳಿದ್ದಾರೆ.

1987ರಲ್ಲಿ ನಿಧನ

ತಮ್ಮ ವಿಶಿಷ್ಟ ಧ್ವನಿ ಮತ್ತು ಸಂಗೀತದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಕಿಶೋರ್ ಕುಮಾರ್ 1987ರಲ್ಲಿ ನಿಧನರಾದರು. ಮುಂಬೈನಲ್ಲಿ ಅವರಿಗೆ ಹಠಾತ್ ಹೃದಯಾಘಾತವಾಗಿದ್ದು, 58ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದರು. ಇಂದಿಗೂ ಕಿಶೋರ್ ಕುಮಾರ್ ಅವರ ಹಾಡುಗಳು ಸಂಗೀತಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಅಮಿತಾಭ್ ಬಚ್ಚನ್ ಹಂಚಿಕೊಂಡ ಈ ಹಳೆಯ ನೆನಪು, ಇಬ್ಬರು ದಿಗ್ಗಜರ ನಡುವಿನ ಆತ್ಮೀಯ ಬಾಂಧವ್ಯವನ್ನು ಮತ್ತೊಮ್ಮೆ ನೆನಪಿಸಿದೆ,(ಏಜೇನ್ಸೀಸ್​).