‘ಕೋಪದಿಂದ ನೋಡಿದ್ದೇಕೆ?’ ಎಂದು 15 ಸಾವಿರ ರೂ. ದರೋಡೆ
- ‘ಕೋಪದಿಂದ ನೋಡಿದ್ದೇಕೆ?’ಎಂದು ಪ್ರಶ್ನಿಸಿ ಖದೀಮರ ಕಿರಿಕ್
- ಕೊಲೆ ಮಾಡುವುದಾಗಿ ಬೆದರಿಸಿ ಹಣ ಕಸಿದುಕೊಂಡ ಆರೋಪ
- 87 ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ಬಳಿಕ ಪುಂಡರು ಲಾಕ್
ಪುಣೆ: ದರೋಡೆ ಮಾಡಲು ಖದೀಮರು ಎಂತಹ ಪ್ಲ್ಯಾನ್ ಮಾಡಿದ್ದಾರೆ ನೋಡಿ... ರಸ್ತೆಯಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ‘ಕೋಪದಿಂದ ನೋಡಿದ್ದೇಕೆ?’ ಎಂದು ಬೆದರಿಕೆ ಹಾಕಿ 15 ಸಾವಿರ ರೂಪಾಯಿ ದೋಚಿದ್ದಾರೆ. ಸಧ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುಣೆಯ ಕಲ್ಯಾಣಿ ನಗರದಲ್ಲಿ ವ್ಯಕ್ತಿ ರಸ್ತೆ ಬದಿ ನಿಂತು ಫೋನ್‌ನಲ್ಲಿ ಮಾತನಾಡುತ್ತಿದ್ದ. ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಆತನ ಕ್ಯಾತೆ ತೆಗೆದಿದ್ದಾರೆ. ನಮ್ಮನ್ನು ಕೋಪದಿಂದ ನೋಡುತ್ತಿದ್ದೀಯೇಕೆ?’ ಎಂದು ಕೇಳಿ ಆರೋಪಿಗಳು ಆತನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಬಳಿಕ ಕೊಲೆ ಮಾಡುವುದಾಗಿ ಬೆದರಿಸಿ, ಆತನ ಬಳಿ ಇದ್ದ 15 ಸಾವಿರವನ್ನು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ ಜಾಗ ಹಾಗೂ ಸುತ್ತಮುತ್ತ ಅಳವಡಿಸಿದ್ದ 87 ಸಿಸಿಟಿವಿ ಕ್ಯಾಮೆರಾಗಳ ಪರಿಶೀಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳು ಹಡಪ್ಸರ್ ನಿವಾಸಿಗಳೆಂದು ಗೊತ್ತಾಗಿದೆ. ಇಗಾಗಲೇ ಈ ಇಬ್ಬರ ಮೇಲೆಯೂ ಹಲವು ಕೇಸ್ಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆ ಒಪ್ಪಿಕೊಂಡ ಪುಂಡರು
ಯೆರವಾಡ ಪೊಲೀಸರು, ಹಡಪ್ಸರ್ ಖಾಕಿ ಸಹಾಯದೊಂದಿಗೆ ನಿಖಿಲ್ ಅಲಿಯಾಸ್ ದಾದ್ಯಾ ಶಶಿಕಾಂತ್ ಕಾಂಬ್ಳೆ (26) ಹಾಗೂ ಅಯಾನ್ ನಾಸಿರ್ ಶೇಖ್ (22) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ವ್ಯಕ್ತಿಗೆ ಬೆದರಿಕೆ ಹಾಕಿ 15 ಸಾವಿರ ರೂ. ಕಸಿದುಕೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ,(ಏಜೆನ್ಸೀಸ್).